ಉತ್ತರ ಪ್ರದೇಶದ ಬಿಜೆಪಿಯ ಆದಿತ್ಯನಾಥ್ ಆಡಳಿತರ ಬುಲ್ಡೋಜರ್ ದಾಳಿ ಮುಂದುವರೆದಿದ್ದು, ಬಹ್ರೈಚ್‌ನ ಜಿಲ್ಲಾ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳು ಅಕ್ಟೋಬರ್ 13 ರಂದು ಬಹ್ರೈಚ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ 23 ಜನರ ಮನೆಗಳಿಗೆ ಶುಕ್ರವಾರ ನೋಟಿಸ್ ಅಂಟಿಸಿದ್ದಾರೆ. ಮೂರು ದಿನಗಳಲ್ಲಿ ಅಕ್ರಮ ನಿರ್ಮಾಣವನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತದೆ ಎಂದು ನೋಟೀಸ್ ಎಚ್ಚರಿಸಿದೆ. ಬಹ್ರೈಚ್ ಹಿಂಸಾಚಾರ
24 ವರ್ಷದ ರಾಮ್ ಗೋಪಾಲ್ ಮಿಶ್ರಾ ಅವರ ಹತ್ಯೆಯ ನಂತರ ಬಹ್ರೈಚ್‌ನಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಲಾಗಿದ್ದ ಐದು ಜನರಲ್ಲಿ ಒಬ್ಬರಾದ ಅಬ್ದುಲ್ ಹಮೀದ್ ಸೇರಿದಂತೆ 23 ಜನರ ವಿರುದ್ಧ ಬುಲ್ಡೋಜರ್ ಕ್ರಮವನ್ನು ಪ್ರಾರಂಭಿಸುವ ಮೊದಲ ಹೆಜ್ಜೆ ಇದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಲಾಖಾ ಮಾನದಂಡಗಳ ಪ್ರಕಾರ, ಗ್ರಾಮೀಣ ಪ್ರದೇಶದ ಮುಖ್ಯ ಜಿಲ್ಲಾ ರಸ್ತೆಯಲ್ಲಿ ಇಲಾಖೆಯ ಅನುಮತಿಯಿಲ್ಲದೆ, ರಸ್ತೆಯ ಮಧ್ಯಭಾಗದಿಂದ 60 ಅಡಿ ಅಂತರದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಅಕ್ರಮ ನಿರ್ಮಾಣದ ವರ್ಗಕ್ಕೆ ಸೇರುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
“ಬಹ್ರೈಚ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೂರ್ವ ಇಲಾಖಾ ಅನುಮತಿಯೊಂದಿಗೆ ನಿರ್ಮಾಣ ಕಾರ್ಯವನ್ನು ಮಾಡಿದ್ದರೆ, ಅದರ ಮೂಲ ಪ್ರತಿಯನ್ನು ತಕ್ಷಣವೇ ಒದಗಿಸಿ, ಇಲ್ಲದಿದ್ದರೆ ಮೂರು ದಿನಗಳಲ್ಲಿ ಅಕ್ರಮ ನಿರ್ಮಾಣವನ್ನು ನೀವೇ ತೆಗೆದುಹಾಕಿ. ಇಲ್ಲವಾದಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತದ ನೆರವಿನೊಂದಿಗೆ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಐವರು ಆರೋಪಿಗಳಾದ ಅಬ್ದುಲ್ ಹಮೀದ್, ಮೊಹಮ್ಮದ್ ಅಫ್ಜಲ್, ಮೊಹಮ್ಮದ್ ಫಹೀಮ್, ಮೊಹಮ್ಮದ್ ಸರ್ಫರಾಜ್ ಮತ್ತು ಮೊಹಮ್ಮದ್ ತಾಲೀಮ್ ಅವರನ್ನು ಗುರುವಾರ ಬಂಧಿಸಲಾಯಿತು. ಆರಂಭದಲ್ಲಿ ಮೂವರನ್ನು ಬಂಧಿಸಲಾಗಿದ್ದರೆ, ಸರ್ಫರಾಜ್ ಮತ್ತು ತಾಲೀಮ್ ಅವರನ್ನು ಎನ್‌ಕೌಂಟರ್ ನಂತರ ಬಂಧಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ನನ್‌ಪಾರಾ ಪ್ರದೇಶದಲ್ಲಿ ಅವರ ಕಾಲಿಗೆ ಗುಂಡುಗಳನ್ನು ಹಾರಿಸಲಾಗಿತ್ತು. ಪೊಲೀಸರು ಪ್ರತಿಪಾದನೆಯನ್ನು ಅವರ ಕುಟುಂಬಿಕರು ನಿರಾಕರಿಸಿದ್ದು, ಅವರನ್ನು ಮನೆಯಿಂದ ವಶಕ್ಕೆ ಪಡೆದು ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಲಿಗೆ ಪ್ರಕರಣ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಬಂಧನ
23 ಮನೆಗಳಿಗೆ ನೋಟಿಸ್ ಅಂಟಿಸಲಾಗಿದೆ ಎಂದು ಮಹಸಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಹೇಮಂತ್ ಕುಮಾರ್ ಯಾದವ್ ಅವರು ಖಚಿತಪಡಿಸಿದ್ದು, ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ಅಕ್ರಮ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವ ಅಕ್ರಮ ನಿವಾಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅತಿಕ್ರಮಣದಾರರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದ್ದು, ಸೂಚನೆ ಮೇರೆಗೆ ಭಾನುವಾರ ಅಥವಾ ಸೋಮವಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹ್ರೈಚ್‌ನ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಾರ್ಯನಿರ್ವಾಹಕ ಇಂಜಿನಿಯರ್‌ರ ಕಚೇರಿಯಿಂದ ನೋಟಿಸ್ ಅಕ್ಟೋಬರ್ 17, 2024 ರಂದು ನೀಡಲಾಗಿತ್ತು.
ಬಹ್ರೈಚ್ ಜಿಲ್ಲೆಯಲ್ಲಿ ಭಾನುವಾರ ಉದ್ವಿಗ್ನತೆ ಉಂಟಾಗಿದ್ದು, ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರ ಸೋಮವಾರ ರಾತ್ರಿಯವರೆಗೆ ಮುಂದುವರೆದಿತ್ತು. ಒಂದು ದಿನದ ನಂತರ ದುರ್ಗಾಪೂಜೆ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಗುಂಡು ಹಾರಾಟ ನಡೆದು ರಾಮ್ ಮಿಶ್ರಾ ಅವರ ಹತ್ಯೆಯಾಗಿತ್ತು ಹಾಗೂ ನಾಲ್ಕು ಜನರು ಗಾಯಗೊಂಡಿದ್ದರು. ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ನಡೆಸಲಾಗಿದ್ದ ಮೆರವಣಿಗೆಯ ವೇಳೆ ಉದ್ರೇಕಕಾರಿ ಹಾಡುಗಳನ್ನು ನುಡಿಸುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಲಾಗಿತ್ತು. ಇದರ ಪರಿಣಾಮ ಹಿಂಸಾಚಾರ ಪ್ರಾರಂಭವಾಗಿತ್ತು ಎಂದು ವರದಿಯಾಗಿದೆ.
ಎಲ್ಲಾ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನದ ಮೇಲೆ ಜೈಲಿಗೆ ಕಳುಹಿಸಲಾಗಿದೆ. ಈ ನಡುವೆ ನೋಟೀಸ್‌ಗಳು ಆ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಈ ಬೆಳವಣಿಗೆಯನ್ನು ಖಂಡಿಸಿವೆ.
ಇದನ್ನೂ ಓದಿ: ಜಾರ್ಖಂಡ್ | ಜೆಎಂಎಂ-ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧೆ; ‘ಏಕಪಕ್ಷೀಯ’ ನಿರ್ಧಾರ ಎಂದ ಆರ್‌ಜೆಡಿ!
ಜಾರ್ಖಂಡ್ | ಜೆಎಂಎಂ-ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧೆ; ‘ಏಕಪಕ್ಷೀಯ’ ನಿರ್ಧಾರ ಎಂದ ಆರ್‌ಜೆಡಿ!


