ತಮ್ಮ ಪಕ್ಷ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ನಡುವಿನ ಸೀಟು ಹಂಚಿಕೆ ಮಾತುಕತೆ ಮುಕ್ತಾಯಗೊಂಡಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಶನಿವಾರ ಹೇಳಿದ್ದಾರೆ. ಈ ಎರಡು ಪಕ್ಷಗಳಿಗೆ ಸಮಸ್ಯೆಗಳನ್ನು ಪರಿಹರಿಸುವ ಬಯಕೆಯಿದ್ದು, ಒಂದೇ ಮನಸ್ಥಿತಿಯಿಂದ ನಡೆಸಲ್ಪಡುತ್ತವೆ ಎಂದು ಅವರು ಹೇಳಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ
ಮೈತ್ರಿಯಲ್ಲಿನ ಸೀಟು ಹಂಚಿಕೆಯ ಮಾತುಕತೆಯ ವಿಳಂಬದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದ ಅವರು, ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಶುಕ್ರವಾರ ಆರೋಪಿಸಿದ್ದರು. ಅದಾಗಿ ಮರು ದಿನ ಕೂಡಾ ಅವರು ಕಾಂಗ್ರೆಸ್ ಅನ್ನು ಮತ್ತೊಮ್ಮೆ ಗುರಿಯಾಗಿರಿಸಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಪ್ರಸ್ತುತ ರಾಷ್ಟ್ರ ರಾಜಕೀಯವನ್ನು ಪ್ರಾದೇಶಿಕ ಪಕ್ಷಗಳು ನಡೆಸುತ್ತಿವೆ. ಅದ್ದರಿಂದ ಆಯಾ ರಾಜ್ಯಗಳಲ್ಲಿ ಅವರು ಜಾಗವನ್ನು ಪಡೆಯಬೇಕು ಎಂಬುದು ತಮ್ಮ ಪಕ್ಷದ ನಿಲುವಾಗಿದೆ ಎಂದು ಹೇಳಿದ್ದಾರೆ.
“ನಾವು (ಶಿವಸೇನೆ-ಯುಬಿಟಿ) ಶುಕ್ರವಾರ ಇಡೀ ದಿನ ಎನ್‌ಸಿಪಿ (ಎಸ್‌ಪಿ) ಜೊತೆ ಮಾತುಕತೆ ನಡೆಸಿದ್ದೇವೆ. ಎನ್‌ಸಿಪಿ (ಎಸ್‌ಪಿ) ಯ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮತ್ತು ನಾವು ಮಾತುಕತೆ ನಡೆಸಿದ್ದೇವೆ. ನಮ್ಮ ನಡುವಿನ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತಿವೆ. ಅಂತಿಮವಾಗಿ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ನಿಮಗೆ ಮನಸ್ಸು ಮತ್ತು ಇಚ್ಛೆ ಬೇಕಾಗುತ್ತದೆ, ಅದು ನಮ್ಮಿಬ್ಬರಿಗೂ ಇವೆ” ಎಂದು ರಾವತ್ ಹೇಳಿದ್ದಾರೆ.
“ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ನಡುವಿನ ಸೀಟು ಹಂಚಿಕೆ ಮಾತುಕತೆ ಮುಕ್ತಾಯಗೊಂಡಿದೆ. ನಮ್ಮ ಹೈಕಮಾಂಡ್ ಮುಂಬೈನಲ್ಲಿ ಇರುವುದರಿಂದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) (ಜೆಡಿ-ಯು) ನಂತಹ ಪ್ರಾದೇಶಿಕ ಪಕ್ಷಗಳ ನೆರವಿನಿಂದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಇಂಡಿಯಾ ಮೈತ್ರಿಯಲ್ಲಿ ಬಹುಪಾಲು ಪ್ರಾದೇಶಿಕ ಪಕ್ಷಗಳಿವೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿದ್ದಾರೆ. ಉಭಯ ನಾಯಕರ ನಡುವಿನ ಮಾತುಕತೆ ಉತ್ತಮವಾಗಿದೆ ಎಂದು ಸಂಜತ್ ರಾವತ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಮೈತ್ರಿಯ ಇತರ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಹಿನ್ನಲೆ, ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಶನಿವಾರ ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅವರು ಭೇಟಿಯು ಉದ್ಧವ್ ಠಾಕ್ರೆ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ನಡೆದಿದೆ ಎಂದು ಹೇಳಿದ್ದಾರೆ.
ಬಾಂದ್ರಾದಲ್ಲಿರುವ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಚೆನ್ನಿತಲ, ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಭೇಟಿಯಾಗಲು ಬಂದಿದ್ದೇನೆ ಎಂದು ತಮ್ಮ ಭೇಟಿಯನ್ನು ರಾಜಕಿಯೇತರ ಎಂದು ಬಿಂಬಿಸಲು ನೋಡಿದ್ದಾರೆ.
ಮಿತ್ರಪಕ್ಷಗಳ ನಡುವಿನ ಮಾತುಕತೆ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯ ಚೌಕಾಶಿ ಮುರಿಯುವ ಹಂತವನ್ನು ತಲುಪಲು ಬಿಡಬಾರದು ಎಂದು ಶುಕ್ರವಾರ ಠಾಕ್ರೆ ಎಚ್ಚರಿಸಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸಭಾ ಕ್ಷೇತ್ರಗಳ ಹಂಚಿಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಪಟೋಲೆ ಅವರು ಮೈತ್ರಿಯಲ್ಲಿ 25 ರಿಂದ 30 ವಿಧಾನಸಭಾ ಸ್ಥಾನಗಳಲ್ಲಿ ಅಸ್ಥಿರತೆ ಇದೆ. ಪಕ್ಷದ ರಾಜ್ಯ ಘಟಕವು ಅದರ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಎಂವಿಎ ಮತ್ತು ಆಡಳಿತಾರೂಢ ಮಹಾಯುತಿ ತಮ್ಮ ಬಹು ನಿರೀಕ್ಷಿತ ಸೀಟು ಹಂಚಿಕೆ ಒಪ್ಪಂದವನ್ನು ಇನ್ನೂ ಘೋಷಿಸಿಲ್ಲ. 288 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಆರೋಗ್ಯ ಕಾರ್ಯದರ್ಶಿ ವಜಾಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಆರೋಗ್ಯ ಕಾರ್ಯದರ್ಶಿ ವಜಾಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ


