ಮಧ್ಯಪ್ರದೇಶದ ಖಾಂಡ್ವಾ ಬಳಿಯ ಹಳ್ಳಿಯೊಂದರ 19 ವರ್ಷದ ದಲಿತ ಮಹಿಳೆ ವ್ಯಕ್ತಿಯೊಬ್ಬರ ಮೇಲೆ ಕಿರುಕುಳದ ದೂರ ದಾಖಲಿಸಿದ್ದು, ಕೆಲವೇ ದಿನಗಳಲ್ಲಿ ಆರೋಪಿಯ ಮಗ ಮಹಿಳೆಗೆ ಬೆಂಕಿ ಹಚ್ಚಿದ್ದಾನೆ. ತನ್ನ ಗ್ರಾಮದ ನಿವಾಸಿ 48 ವರ್ಷದ ಮಂಗೀಲಾಲ್ ಎಂಬಾತನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಮಹಿಳೆ ಪೊಲೀಸರಿಗೆ ದೂರು ನೀಡಿದ ಕೆಲವು ದಿನಗಳ ನಂತರ ಶುಕ್ರವಾರ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಅಕ್ಟೋಬರ್ 7 ರಂದು ಮಹಿಳೆ ದೂರು ನೀಡಿದ್ದು, ಹೊಲದಲ್ಲಿ ಒಬ್ಬಂಟಿಯಾಗಿರುವಾಗ ಮಂಗೀಲಾಲ್ ತನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ ಎಂದು ಹೇಳಿದ್ದಾರೆ. ಮಂಗೀಲಾಲ್ ಅವರನ್ನು ಅದೇ ದಿನ ಬಂಧಿಸಿ ಜೈಲಿಗೆ ಹಾಕಲಾಯಿತು. ಆದರೆ, ಅಕ್ಟೋಬರ್ 8 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆತ ಬಿಡುಗಡೆಯಾದ ನಂತರ ಬೆದರಿಕೆ ಹಾಕಲಾಯಿತು ಎಂದು ಮಹಿಳೆಯ ಕುಟುಂಬವು ಹೇಳಿತ್ತು.
ಶುಕ್ರವಾರ ಮಂಗೀಲಾಲ್ ಅವರ ಮಗ ಅರ್ಜುನ್ ಮಹಿಳೆಯ ಮನೆಗೆ ಹೋಗಿದ್ದು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆ ತಪ್ಪಿಸಿಕೊಂಡು ಬಂದಿದ್ದು, ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆಯನ್ನು ಇಂದೋರ್‌ನ ಆಸ್ಪತ್ರೆಗೆ ವರ್ಗಾಯಿಸುವ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅಲ್ಲಿ ಆಕೆಯ ದೇಹದ ಶೇಕಡಾ 27 ರಷ್ಟು ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದೆ.
ಅರ್ಜುನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ರೈ ಮಾತನಾಡಿ, “ಆರೋಪಿಯನ್ನು ಬಂಧಿದಸಿ, ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಮತ್ತು ಮಹಿಳೆಯ ಹೇಳಿಕೆಯು ನಿರ್ಣಾಯಕವಾಗಿರುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಗೌರಿ ಲಂಕೇಶ್ ಹತ್ಯೆ ಆರೋಪಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆ


