ದಲಿತ ಮಹಿಳೆಯ ದೂರಿನ ಮೇರೆಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಗುಜರಾತ್‌ನಲ್ಲಿ ಬಿಜೆಪಿ ಶಾಸಕ ಗಜೇಂದ್ರಸಿಂಹ ಪರ್ಮಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಮಾಜಿ ರಾಜ್ಯ ಸಚಿವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರ ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಜುಲೈ 2020 ರಲ್ಲಿ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ.
ಪರ್ಮಾರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಆರೋಪ ಎದುರಿಸುತ್ತಿದ್ದಾರೆ.
ಸಬರಕಾಂತ ಜಿಲ್ಲೆಯ ಪ್ರಾಂತೀಜ್ ಅಸೆಂಬ್ಲಿ ಸ್ಥಾನವನ್ನು ಪ್ರತಿನಿಧಿಸುವ ಶಾಸಕರ ವಿರುದ್ಧ ಸಂತ್ರಸ್ತೆ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ವಿಫಲರಾದ ಪೊಲೀಸರ ನಡೆಯನ್ನು ಗುಜರಾತ್ ಹೈಕೋರ್ಟ್ ಪ್ರಶ್ನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, ಜುಲೈ 30, 2020 ರಂದು ಪರ್ಮಾರ್ ಅವರು ಮಹಿಳೆಯನ್ನು ಗಾಂಧಿನಗರದ ಎಂಎಲ್ಎ ಕ್ವಾರ್ಟರ್ಸ್‌ಗೆ ಕರೆದರು. ಅಲ್ಲಿ ಅವರು ಮದುವೆಯ ನೆಪದಲ್ಲಿ ಅವರೊಂದಿಗೆ ದೈಹಿಕ ಸಂಬಂಧದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ನಂತರ ಶಾಸಕರು ತನ್ನ ಫೋನ್ ಕರೆಗಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿ, ತನಗೆ ಬೆದರಿಕೆ ಹಾಕಿದರು. ಈ ಬಗ್ಗೆ ಹೊರಗಡೆ ಮಾತನಾಡಿದರೆ ಅವರು ನನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
2021 ರಲ್ಲಿ, ಮಹಿಳೆ ಹೈಕೋರ್ಟ್‌ನಲ್ಲಿ ವಿಶೇಷ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದರು, ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಹೆಚ್ಚುವರಿಯಾಗಿ, ಅಪ್ರಾಪ್ತ ವಯಸ್ಕರ ವಿರುದ್ಧದ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ಪರ್ಮಾರ್ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ 2023 ರಲ್ಲಿ, ಗುಜರಾತ್ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ; ಮಧ್ಯಪ್ರದೇಶ: ಕಿರುಕುಳದ ದೂರು ನೀಡಿದ ಕೆಲವೇ ದಿನಗಳಲ್ಲಿ ದಲಿತ ಮಹಿಳೆಗೆ ಬೆಂಕಿ


