ಚನ್ನಪಟ್ಟಣ ಉಪಚುನಾವಣೆಯ ಕಣ ರಂಗೇರಿದೆ. ಮೈತ್ರಿ ಪಕ್ಷಗಳ ಟಿಕೆಟ್ ಹಗ್ಗ ಜಗ್ಗಾಟ ರೋಚಕ ಘಟ್ಟ ತಲುಪಿದೆ. ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿರುವ ಸಿ.ಪಿ ಯೋಗೇಶ್ವರ್, ಇನ್ನೂ ಎರಡು ದಿನ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ.
“ಗುರುವಾರ (ಅ.24) ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧಿಸುವುದಾಗಿ ಮಂಗಳವಾರ ಸಂಜೆ ತಿಳಿಸುತ್ತೇನೆ” ಎಂದು ಯೋಗೇಶ್ವರ್ ಹೇಳಿದ್ದರು. ಆದರೆ, ಮಂಗಳವಾರ ತಮ್ಮ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿದ ಯೋಗೇಶ್ವರ್, ಕಾದು ನೋಡುವ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ.
ದೆಹಲಿಯಿಂದ ಕರೆ : ಯೋಗೇಶ್ವರ್‌ಗೆ ದೆಹಲಿಯ ಬಿಜೆಪಿ ವರಿಷ್ಠರಿಂದ ಕರೆ ಬಂದಿದ್ದು, ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಯೋಗೇಶ್ವರ್ ಅವರನ್ನೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಾರಾ? ಎನ್ನುವ ಪ್ರಶ್ನೆ ಎದ್ದಿದೆ.
ಮಂಗಳವಾರ ಬೆಂಬಲಿಗರ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್, “ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡುವುದಾದರೆ ನೀಡಲಿ. ಇಲ್ಲದಿದ್ದರೆ, ಬೆಂಬಲಿಗರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುವೆ” ಎಂದಿದ್ದಾರೆ.
“ನಾನು ಮೈತ್ರಿ ಅಭ್ಯರ್ಥಿಯಾಗಲು ಒಪ್ಪಿರುವ ಜೆಡಿಎಸ್ ನಾಯಕರು, ಜೆಡಿಎಸ್‌ನಿಂದಲೇ ಕಣಕ್ಕಿಳಿಯಲು ಷರತ್ತು ಏಕೆ ಹಾಕಬೇಕು? ಜೆಡಿಎಸ್‌ನಿಂದ ಸ್ಪರ್ಧಿಸಲು ನನ್ನ ಬೆಂಬಲಿಗರ ವಿರೋಧವಿದೆ. ಮಾತ್ರವಲ್ಲ ಇದರಿಂದ ಪಕ್ಷದೊಳಗೆ ಹಿರಿತನಕ್ಕೂ ಧಕ್ಕೆಯಾಗಲಿದೆ. ಹಾಗಾಗಿ, ನಾನು 15 ವರ್ಷಗಳಿಂದ ಇರುವ ಬಿಜೆಪಿ ಪಕ್ಷದಿಂದಲೇ ಸ್ಪರ್ಧಿಸಲು ಅವಕಾಶ ನೀಡಲಿ” ಎಂದು ಯೋಗೇಶ್ವರ್ ಹೇಳಿದ್ದಾರೆ.
“ಇನ್ನೂ ಎಲ್ಲಿಯವರೆಗೆ ಬಗ್ಗಲಿ”? ಕುಮಾರಸ್ವಾಮಿ
ಅತ್ತ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಸ್ಪರ್ಧಿಸಲು ಅವಕಾಶ ನೀಡಲಿ, ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಹೇಳುತ್ತಿದ್ದರೆ, ಇತ್ತ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಿ ಅಥವಾ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನಿಂದಲೇ ಕಣಕ್ಕಿಳಿಯಲಿ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದಿರುವ ಅವರು, “ಮೈತ್ರಿ ಧರ್ಮ ಪಾಲನೆಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ? ನನ್ನ ತಾಳ್ಮೆಗೂ ಮಿತಿ ಇದೆ” ಎಂದಿದ್ದಾರೆ.
ಮಂಗಳವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲ. ಈ ದೇಶದಲ್ಲಿ ಕಾಂಗ್ರೆಸ್ ತೊಲಗಿಸಬೇಕು ಎನ್ನುವ ಪ್ರಧಾನಿ ಮೋದಿಯವರ ಸಂಕಲ್ಪಕ್ಕಾಗಿ. ಅವರು ದೇವೇಗೌಡರಿಗೆ ಕೊಡುವ ಗೌರವಕ್ಕಾಗಿ. ಕೆಲವರ ಸ್ವಾರ್ಥಕ್ಕಾಗಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಂತಹ ನಾಯಕರ ಜೊತೆಗಿನ ಸಂಬಂಧ ಕಡಿದುಕೊಳ್ಳಬೇಕೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಕಂಬಳದ ವಿರುದ್ಧ ಪಿಐಎಲ್ : ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್


