ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಿದ ಮಾಜಿ ಸಚಿವ ಸಿಪಿ ಯೋಗೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಎಚ್‌ಡಿ ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ‘ಟಿಕೆಟ್’ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸುದ್ದಿ ಖಚಿತವಾಗುತ್ತಿದ್ದಂತೆಯೇ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್, “ನನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ, ಇಂದು ಮತ್ತೆ ಕಾಂಗ್ರೆಸ್ ಸೇರಿದ್ದೇನೆ. ನನ್ನ ಮುಂದಿನ ರಾಜಕೀಯ ಜೀವನ ಕಾಂಗ್ರೆಸ್‌ನಲ್ಲೆ. ಕಳೆದ ಹಲವಾರು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿದರೆ, ನಾವು ಕಟ್ಟಿದ ಮನೆಯಲ್ಲಿ ನಾವೇ ವಾಸಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ” ಎಂದು ಬಿಜೆಪಿ ನಾಯಕರ ವಿರುದ್ಧದ ತಮ್ಮ ಅಸಮಾಧಾನ ಹೊರಹಾಕಿದರು.
“ಬಿಜೆಪಿ ಜೊತೆಗೆ ಜೆಡಿಎಸ್ ಸೇರಿದ ಬಳಿಕ ಅಲ್ಲಿ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲ ಎಂದು ಅರಿವಾಯಿತು. ಸ್ವಯಂ ಪ್ರೇರಣೆಯಿಂದ, ಯಾವುದೇ ಆಕಾಂಕ್ಷೆ ಹಾಗೂ ಒತ್ತಡ ಇಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಮಾತನಾಡಿ ಆಶೀರ್ವಾದ ಪಡೆದಿದ್ದೇನೆ” ಎಂದರು.
“ಕಾಂಗ್ರೆಸ್ ಸರ್ಕಾರದ ಕ್ರಿಯಾಶೀಲ ಅಭಿವೃದ್ಧಿ ಯೋಜನೆಗಳು ಸಾಕಷ್ಟು ಜಾರಿಯಲ್ಲಿವೆ. ಜನಸಾಮಾನ್ಯರ ಪರವಾಗಿರುವ ಕೆಲಸದಲ್ಲಿ ನಾನೂ ಕೂಡ ಕೈಜೋಡಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯಲ್ಲಿ ನಾನೂ ಪಾಲುದಾರನಾಗಬೇಕು ಎಂದು ನಿರ್ಧರಿಸಿದ್ದೇನೆ” ಎಂದು ಹೇಳಿದರು.
ನಿಮಗೆ ಪಕ್ಷ ನಿಷ್ಠೆ ಇಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಎಲ್ಲಿರುತ್ತೇನೋ ಅಷ್ಟು ದಿನ ನಿಷ್ಠೆಯಿಂದ ಇರುತ್ತೇನೆ” ಎಂದು ಹೇಳಿದರು. “ಡಿಕೆ ಶಿವಕುಮಾರ್, ಸುರೇಶ್ ನಾವೆಲ್ಲರೂ ಒಟ್ಟಿಗೆ ರಾಜಕೀಯ ಆರಂಭ ಮಾಡಿದ್ದೇವೆ. ಒಮ್ಮೆ ಅವರ ಸೋಲಿಗೆ ನಾನೂ ಕಾರಣ ಆಗಿದ್ದೇನೆ, ಮುಂದೆ ಅವರ ಗೆಲುವಿಗೆ ಶ್ರಮಿಸುತ್ತೇನೆ” ಎಂದರು.
ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಯೋಗೇಶ್ವರ್ ರಾಜಕಾರಣ ಶುರು ಮಾಡಿದ್ದೇ ಕಾಂಗ್ರೆಸ್‌ನಿಂದ; ಅವರು ಬಿಜೆಪಿ ಸೇರಿದಂತೆ ಹಲವು ಪಕ್ಷಗಳನ್ನು ನೋಡಿದ್ದಾರೆ. ಸಹಜವಾಗಿಯೇ ಅವರು ಕಳೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ರಾಜಕೀಯದಲ್ಲಿ ಅನೇಕ ಭೀನ್ನಾಭಿಪ್ರಾಯ ಬರುತ್ತವೆ. ಅವರು ಇಂದು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರಿದ್ದಾರೆ” ಎಂದರು.
“ನಮ್ಮ ಪಕ್ಷದ ನಾಯಕರ ಸಂಘಟನೆ ಬಳಿಕ ಜೆಡಿಎಸ್ ಮತ್ತು ಬಿಜೆಪಿಯಿಂದ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಈಗ ಪಕ್ಷ ಸೇರಿರುವ ನಾಯಕರು ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗುವುದಿಲ್ಲ; ನಮ್ಮ ನಾಯಕರು ನಿಮ್ಮನ್ನು ಗೌರವಿಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸುಭದ್ರವಾಗಿದೆ; ಐದು ವರ್ಷದ ನಂತರವೂ ನಮ್ಮದೇ ಸರ್ಕಾರ ಇರುತ್ತದೆ. ಚನ್ನಪಟ್ಟಣಕ್ಕೆ ವಿಶೇಷ ಆದ್ಯತೆ ಕೊಡುತ್ತೇವೆ” ಎಂದು ಇಂದು ಕಾಂಗ್ರೆಸ್ ಸೇರಿದ ಚನ್ನಪಟ್ಟಣ ಮುಖಂಡರುಗಳಿಗೆ ಭರವಸೆ ನೀಡಿದರು.
“ಈಗಾಗಲೇ ಯೋಗೇಶ್ವರ್ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಅಭ್ಯರ್ಥಿ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಎರಡು ಹೆಸರುಗಳನ್ನು ಅವರಿಗೆ ಕಳುಹಿಸಿಕೊಡುತ್ತೇವೆ. ಒಮ್ಮತದ ಅಭ್ಯರ್ಥಿ ನಾಳೆ ಬೆಳಿಗ್ಗೆ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತಾರೆ” ಎಂದರು.
ಇದನ್ನೂ ಓದಿ; ಜಾತಿಗಣತಿ ವರದಿ ವಿರುದ್ಧ ವೀರಶೈವ-ಲಿಂಗಾಯತ ಮಹಾಸಭೆ ನಿರ್ಣಯ : ಸಚಿವರು, ಶಾಸಕರಿಂದ ಸಹಿ


