’ಒಂದು ದೇಶ ಒಂದು ಚುನಾವಣೆ’ ಸದರಿ ಒಕ್ಕೂಟ ಸರ್ಕಾರ ಮುಂದುಮಾಡುತ್ತಿರುವ ಒಂದು ಬಹುದೊಡ್ಡ ಯೋಜನೆ. ಆಳುವ ವರ್ಗಗಳಿಗೆ ಇಂತಹ ದೊಡ್ಡ ದೊಡ್ಡ ಯೋಜನೆಗಳೆಂದರೆ ಅದೇನೋ ಅಪ್ಯಾಯಮಾನ. ಇಂಗ್ಲಿಷ್‌ನಲ್ಲಿ ಇಂತಹ ಪ್ರವೃತ್ತಿಗೆ ಮೆಗಲೋಮೇನಿಯಾ ಅಂತಾರೆ. ನಿಜ ಹೇಳಬೇಕೆಂದರೆ, ಅದರಷ್ಟಕ್ಕೆ ದೊಡ್ಡದಾಗಿ ಕಾಣಿಸುವ ಈ ’ಒಂದು ದೇಶ ಒಂದು ಚುನಾವಣೆ’ ಎಂಬ ಯೋಜನೆ ಅದಕ್ಕಿಂತಲೂ ದೈತ್ಯ ಯೋಜನೆಯೊಂದರೆ ಭಾಗ.
ಆ ದೈತ್ಯ ಯೋಜನೆ ಏನು ಎಂದರೆ ಈ ದೇಶದ ರಾಜ್ಯಗಳನ್ನು ದುರ್ಬಲಗೊಳಿಸುವುದು. ರಾಜ್ಯಗಳನ್ನು ದೆಹಲಿಯಿಂದ ನಡೆಯುವ ಕೇಂದ್ರಾಡಳಿತ ಅಡಿಯಲ್ಲಿ ಸಾಮಂತ ಘಟಕಗಳನ್ನಾಗಿ ಮಾಡುವುದು. ಮುಂದುವರಿದು, ಈ ದೇಶವನ್ನು ’ರಾಜ್ಯಮುಕ್ತ’ ರಾಷ್ಟ್ರವನ್ನಾಗಿ ಮಾಡುವುದು. ರಾಜಕೀಯ ಶಾಸ್ತ್ರದ ಭಾಷೆಯಲ್ಲಿ ಇದನ್ನು ಏಕೀಕೃತ ವ್ಯವಸ್ಥೆ ಅಥವಾ Unitary System ಅಂತ ಕರೆಯುತ್ತಾರೆ.
ಈಗ ದೇಶದಲ್ಲಿ ಇರುವುದು ಒಂದು ರೀತಿಯ ಒಕ್ಕೂಟ ವ್ಯವಸ್ಥೆ. ಅಂದರೆ, ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ಸಾರ್ವಭೌಮ ಅಧಿಕಾರವನ್ನು ಹಂಚಿಕೊಂಡು ದೇಶವನ್ನು ಮುನ್ನಡೆಸುವ ವ್ಯವಸ್ಥೆ. ಏಕೀಕೃತ ವ್ಯವಸ್ಥೆಯಲ್ಲಿ ಸಾರ್ವಭೌಮ ಅಧಿಕಾರ ಏನಿದ್ದರೂ ಭಾರತ ಸರಕಾರದ ಬಳಿ ಇರುತ್ತದೆ. ರಾಜ್ಯಗಳು ಪಂಚಾಯತ್‌ಗಳ ರೀತಿ ಆಗಿಬಿಡುತ್ತವೆ.
ಪ್ರಶ್ನೆ ಇರುವುದು ಈಗ ದೇಶವನ್ನು ಒಂದು ಏಕೀಕೃತ ರಾಷ್ಟ್ರವನ್ನಾಗಿ ಮಾಡುವ ಅಂತಹ ದರ್ದು ಏನಿದೆ? ಯಾವ ಕಾರಣಕ್ಕೋಸ್ಕರ ಇವರು ಈ ಮಟ್ಟಿಗೆ ಹಠ ಹಿಡಿದು, ಅಡ್ಡಾದಿಡ್ಡಿಯ ದಾರಿ ತುಳಿದು, ಜನರ ಕಣ್ಣಿಗೆ ತಾವೇನೋ ಒಳ್ಳೆಯದು ಮಾಡಲು ಹೊರಟಿದ್ದೇವೆಂದು ಮಂಕುಬೂಧಿ ಎರಚಿ ಇಂತಹದ್ದೊಂದು ಬದಲಾವಣೆ ಮಾಡಿಯೇ ಸಿದ್ಧ ಅಂತ ಹೊರಟಿರುವುದು? ಈ ಪ್ರಶ್ನೆಯ ಜಾಡು ಹಿಡಿದುಹೊರಟರೆ ಇದರ ಹಿಂದೆ ರಾಜ್ಯಗಳನ್ನು ಕಿತ್ತೊಗೆಯುವುದಕ್ಕಿಂತಲೂ ದೊಡ್ಡ ಯೋಜನೆಯೊಂದಿದೆ ಎನ್ನುವುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಏನದು ಯೋಜನೆ?
ಅದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮರುನಿರೂಪಿಸಿ ಈ ದೇಶದ ಸಂವಿಧಾನವನ್ನು ಅಕ್ಷರಶಃ ತಮಗೆ ಬೇಕಾದಂತೆ ಮರುರೂಪಿಸುವ ಮಹಾನ್ ತಂತ್ರ. ಈ ತಂತ್ರವನ್ನು ಸಾಕಾರಗೊಳಿಸುವಲ್ಲಿ ಈಗ ಅಡ್ಡಿಯಾಗಿರುವುದು ರಾಜ್ಯಗಳು. ರಾಜ್ಯಗಳು ಇರುವುದು ತೊಂದರೆಯಲ್ಲ. ರಾಜ್ಯದಲ್ಲಿ ಇತರ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅಧಿಕಾರ ವಹಿಸಿಕೊಂಡರೆ, ಅವು ರಾಜ್ಯಗಳ ಅಸ್ಮಿತೆಯ ಆಧಾರದಲ್ಲಿ ರಾಜಕೀಯ ಮಾಡುವುದರಿಂದ, ರಾಜ್ಯಗಳ ಸಂಸ್ಕೃತಿಗಳನ್ನು ಪ್ರತಿಪಾದಿಸುವುದರಿಂದ ಹಿಂದೂ ರಾಷ್ಟ್ರದ ಮಹಾನ್ ಯೋಜನೆಗೆ ರಾಜ್ಯಗಳು ತೊಡರಾಗುತ್ತವೆ. ರಾಜ್ಯಗಳು ದೇಶದ ಸಾರ್ವಭೌಮ ಘಟಕಗಳು. ಅವುಗಳಿಗೆ ಸಾಂವಿಧಾನಿಕ ರಕ್ಷಣೆ ಇದೆ. ಹಾಗೆ ನೋಡಿದರೆ ಈ ದೇಶ ಎನ್ನುವುದು ಆಗಿರುವುದೇ ರಾಜ್ಯಗಳಿಂದ. ನೇರಾನೇರ ರಾಜ್ಯಗಳನ್ನು ಏನೂ ಮಾಡುವ ಹಾಗಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಏನೂ ಮಾಡುವ ಹಾಗಿಲ್ಲ. ಹಾಗಾಗಿ ಹಲವಾರು ಅಡ್ಡದಾರಿಗಳ ಮೂಲಕ ರಾಜ್ಯಗಳನ್ನೇ ಸದೆಬಡಿದು, ಪ್ರಾದೇಶಿಕ ಪಕ್ಷಗಳನ್ನು ಸದೆಬಡಿದು, ಹಿಂದೂ ರಾಷ್ಟ್ರ ನಿರ್ಮಾಣದ ಹಾದಿ ಸುಗಮಗೊಳಿಸಬೇಕಿದೆ. ಅದಕ್ಕಾಗಿ ಮೊದಲಿಗೆ ಡಬಲ್ ಎಂಜಿನ್ ಸರ್ಕಾರಗಳ ಭ್ರಮೆಯನ್ನು ತೇಲಿಬಿಡಲಾಯಿತು. ಅದನ್ನು ಜನ ಅಷ್ಟೊಂದು ಪ್ರಮಾಣದಲ್ಲಿ ಒಪ್ಪಿಕೊಳ್ಳುವುದಿಲ್ಲ ಅಂತ ಈಗ ತಿಳಿದಿದೆ. ’ಆಪರೇಷನ್ ಕಮಲ’ ಒಂದು ರಾಷ್ಟ್ರೀಯ ಯೋಜನೆ ಎಂಬಂತೆ ಅದನ್ನು ಎಲ್ಲೆಡೆ ಪ್ರಯೋಗಿಸುವ ಪ್ರಯತ್ನ ನಡೆಯಿತು. ಅದು ಸಾಕಾಗುವುದಿಲ್ಲ ಅಂತ ತಿಳಿಯಿತು. ಆ ನಂತರ ವಿಪಕ್ಷಗಳ ಆಡಳಿತ ಇರುವ ರಾಜ್ಯಗಳನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡುವ ಕೆಲಸ ನಡೆಯಿತು. ಅದೂ ಸಾಲದಾಯಿತು. ಜತೆಜತೆಗೆ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ರಾಜ್ಯಗಳನ್ನು, ರಾಜ್ಯ ಮಟ್ಟದ ವಿಪಕ್ಷ ನಾಯಕರುಗಳನ್ನು ಸದೆ ಬಡಿಯುವ ಕೆಲಸ ನಡೆಯಿತು. ಅದಕ್ಕೂ ಮಿತಿಗಳಿವೆ. ಹಾಗಾಗಿ ಈಗ ಬತ್ತಳಿಕೆಯಲ್ಲಿರುವ ಬಹುದೊಡ್ಡ ಅಸ್ತ್ರದ ಪ್ರಯೋಗಕ್ಕೆ ತಯಾರಿ ನಡೆಯುತ್ತಿರುವುದು. ಅದು ’ಒಂದು ದೇಶ ಒಂದು ಚುನಾವಣೆ’ ಎಂಬ ಅಸ್ತ್ರ.
ಇದನ್ನೂ ಓದಿ: ‘ಒಂದು ದೇಶ ಒಂದು ಚುನಾವಣೆ’ | ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಮತ್ತು ಅನುಷ್ಠಾನ ಅಸಾಧ್ಯ – ಸಿದ್ದರಾಮಯ್ಯ
ಲೋಕಸಭೆಗೂ ರಾಜ್ಯ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆಗಳು ನಡೆದರೆ ಆಗ ರಾಷ್ಟ್ರಮಟ್ಟದ ವಿಚಾರಗಳೇ ಪ್ರಾಧಾನ್ಯತೆ ಪಡೆದು ರಾಷ್ಟ್ರೀಯ ಪಕ್ಷಗಳೇ ಮೇಲುಗೈ ಪಡೆಯುತ್ತವೆ. ಒಂದೇ ಬಾರಿಗೆ ಎರಡೂ ಆಯ್ಕೆಯನ್ನು ಮಾಡುವ ಮತದಾರರು ಗಲಿಬಿಲಿಗೊಂಡು ಯಾವುದಾದರೂ ಒಂದೇ ಪಕ್ಷಕ್ಕೆ ಎರಡೂ ಓಟುಗಳನ್ನೂ ನೀಡುವ ಸಾಧ್ಯತೆ ಇದೆ. ಹೆಚ್ಚುಕಡಿಮೆ ಹತ್ತರಿಂದ ಇಪ್ಪತ್ತು ಪ್ರತಿಶತ ಓಟುಗಳು ಈ ರೀತಿ ರಾಷ್ಟ್ರೀಯ ಪಕ್ಷಗಳ ಪಾಲಾದರೂ ಪ್ರಾದೇಶಿಕ ಪಕ್ಷಗಳು ತೀವ್ರ ಹಿನ್ನಡೆ ಅನುಭವಿಸುತ್ತವೆ. ಒಂದು ರಾಜ್ಯಕ್ಕೆ ನಡೆಯುವ ಚುನಾವಣೆ ಎಂದರೆ ಅದು ಕೇವಲ ಒಂದು ರಾಜಕೀಯ ಪ್ರಕ್ರಿಯೆ ಮಾತ್ರವಲ್ಲ. ಆ ರಾಜ್ಯದ ಬಗ್ಗೆ ಜನ ತಮಗಿರುವ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ಅನುಭವಿಸುವ ಅದನ್ನು ಪ್ರಕಟಿಸುವ ಮತ್ತು ಅದರ ಬಗ್ಗೆ ಅಭಿಮಾನ ಪಡುವ ಒಂದು ಪರ್ವ ಅದು. ಈ ಸಂಬಂಧವನ್ನೇ ಕಡಿದು ಹಾಕುವ ರೀತಿಯಲ್ಲಿ ರಾಜ್ಯಗಳ ಚುನಾವಣೆ ಲೋಕಸಭಾ ಚುನಾವಣೆಯ ಜತೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ನಡೆದುಹೋಗುವುದು ಎಂದರೆ ರಾಜ್ಯಗಳು ಇದ್ದೂ ಇಲ್ಲದಂತೆ.
ಈಗ ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕಾಗಲಿ, ಆಳುವ ಮೈತ್ರಿಕೂಟಕ್ಕಾಗಲೀ ಮೂರನೇ ಒಂದರಷ್ಟು ಬಹುಮತ ಇಲ್ಲದ ಕಾರಣ ಈ ಅಸ್ತ್ರವನ್ನು ಒಮ್ಮಿಂದೊಮ್ಮೆಲೆ ಪ್ರಯೋಗಿಸುವುದು ಅಸಾಧ್ಯ ಎಂಬ ಒಂದು ಅನಿಸಿಕೆ ಇದೆ. ಆದರೆ, ಅಂದುಕೊಂಡದ್ದನ್ನು ಮಾಡಿಯೇ ತೀರುವಲ್ಲಿ ಈಗಿನ ಆಡಳಿತ ಪಕ್ಷಕ್ಕೆ ಸಂಖ್ಯೆಯ ಮಿತಿ ಬಿಡಿ ಸಾಕ್ಷಾತ್ ಪರದೈವವೇ ಅಡ್ಡಿಯಾದರೂ ಅದರ ಕಣ್ಣಿಗೆ ಮಣ್ಣೆರಚಿ ಕಾರ್ಯ ಸಾಧಿಸಿಕೊಳ್ಳುವ ಕುಟಿಲ ಬುದ್ಧಿಮತ್ತೆ ಅಗಾಧವಾಗಿದೆ. ಆದ ಕಾರಣ ಇಂದಲ್ಲ ನಾಳೆ, ನಾಳೆ ಆಗದೆ ಹೋದರೆ ಅತೀ ಶ್ರೀಘ್ರದಲ್ಲೇ ಮುಂದೊಂದು ದಿನ ಈ ಬದಲಾವಣೆಗಳೆಲ್ಲಾ ಆಗಿಯೇ ತೀರುತ್ತವೆ. ಈ ಹುನ್ನಾರವನ್ನು ಈ ದೇಶದ ಮತದಾರರು ಅರಿತು ಅದಕ್ಕೊಂದು ಪ್ರತಿರೋಧ ಒಡ್ಡಿದರೆ ಮಾತ್ರ ದೇಶದ ಸಂವಿಧಾನವನ್ನು ರಕ್ಷಿಸಲು ಸಾಧ್ಯ. ಅಂತಹ ಪ್ರತಿರೋಧ ಸಾಧ್ಯವಾಗಬಾರದು ಅಥವಾ ಜನ ಈ ಯೋಜನೆಯ ಹಿಂದಿನ ಹುನ್ನಾರವನ್ನು ಅರಿಯಬಾರದು ಎನ್ನುವ ದುರುದ್ದೇಶದಿಂದಲೇ ಯೋಜನೆಯನ್ನು ಚುನಾವಣಾ ಸುಧಾರಣೆ ಎನ್ನುವ ಸಕ್ಕರೆ ಲೇಪನದೊಂದಿಗೆ ಜನರ ಮುಂದಿಡುತ್ತಿರುವುದು.
ಏಕಕಾಲಕ್ಕೆ ಮಾಡಿ ಮುಗಿಸಿಬಿಟ್ಟರೆ ಚುನಾವಣೆ ನಡೆಸಲು ಕಡಿಮೆ ಹಣ ಸಾಕು ಎನ್ನುವುದು ಒಂದು ವಾದ. ಆದರೆ, ಎಷ್ಟು ಹಣ ಉಳಿತಾಯ ಆಗುತ್ತೆ, ಹೇಗೆ ಆಗುತ್ತೆ ಎನ್ನುವ ಲೆಕ್ಕಾಚಾರ ಯಾರೂ ಮಾಡಿದಂತಿಲ್ಲ. ಒಂದುವೇಳೆ ಹಣ ಉಳಿಯುತ್ತದೆ ಅಂತ ಅಂದುಕೊಂಡರೂ, ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಏನನ್ನು ಕಳೆದುಕೊಳ್ಳುತ್ತೇವೆಯೋ ಅದನ್ನು ಹಣದ ಮೂಲಕ ಅಳೆಯಲೂ ಆಗದು, ಹಣದ ಮೂಲಕ ಗಳಿಸಲೂ ಆಗದು. ಆದುದರಿಂದ ಹಣ ಉಳಿತಾಯ ಎನ್ನುವುದು ಒಂದು ಕುಂಟುನೆಪ.
ಎರಡನೆಯದಾಗಿ ಮತ್ತೆಮತ್ತೆ ಚುನಾವಣೆಗಳು ಒಂದಲ್ಲ ಒಂದು ಕಡೆ ನಡೆಯುತ್ತಿರುವುದರಿಂದ ಈ ದೇಶದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ. ಆದುದರಿಂದ ಏಕಕಾಲದಲ್ಲಿ ಎಲ್ಲಾ ಚುನಾವಣೆಗಳು ನಡೆಯಲಿ ಎನ್ನುವುದು ಇನ್ನೊಂದು ವಾದ. ಈ ವಾದಕ್ಕೂ ಯಾವುದೇ ಪುರಾವೆಗಳು ಇಲ್ಲ. ಸರಿಯಾದ ರೀತಿಯಲ್ಲಿ ಚುನಾವಣೆ ನಡೆಯುವುದು, ಈ ದೇಶದ ರಾಜ್ಯಗಳ ಅಸ್ಮಿತೆಯನ್ನು ಮತ್ತು ಸ್ವಾಯತ್ತತೆಯನ್ನು ಕಾಪಿಟ್ಟುಕೊಳ್ಳುವುದು ಕೂಡಾ ಅಭಿವೃದ್ಧಿಯೇ. ಅಭಿವೃದ್ಧಿ ಎಂದರೆ ಕಟ್ಟಡ ಕಟ್ಟುವುದು, ರಸ್ತೆ ನಿರ್ಮಿಸುವುದು, ಬೇಕಿರುವ-ಬೇಡದ ವಸ್ತುಗಳನ್ನು ಉತ್ಪಾದಿಸಿ ಉತ್ಪಾದಿಸಿ ಗುಡ್ಡೆ ಹಾಕುವುದು ಮಾತ್ರವಲ್ಲ. ಈ ದೇಶದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಚುನಾವಣೆಗಳು ನಡೆದದ್ದು ಎಂದರೆ ಅದು 1990ರ ದಶಕದಲ್ಲಿ. ಈ ದೇಶ ಅತ್ಯಂತ ಹೆಚ್ಚಿನ ಅಭಿವೃದ್ಧಿ ದರವನ್ನು ದಾಖಲಿಸಿದ್ದು ಕೂಡಾ ತೊಂಬತ್ತರ ದಶಕದಲ್ಲಿ. ಆದಕಾರಣ ಚುನಾವಣೆಗಳು ಆಗಾಗ ನಡೆದರೆ ಅಭಿವೃದ್ಧಿಯ ವೇಗ ತಗ್ಗುತ್ತದೆ ಎನ್ನುವ ವಾದದಲ್ಲಿ ಅರ್ಥ ಇಲ್ಲ. ಅರ್ಥ ಇದ್ದರೆ ಅದಕ್ಕೆ ಬೇರೆ ಪರಿಹಾರ ಹುಡುಕಬೇಕೆ ಹೊರತು, ರಾಜ್ಯಗಳ ಕಾಲು ಮುರಿಯುವ ರೀತಿಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಮೂಲಕ ಅಲ್ಲ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲ ಇಪ್ಪತ್ತು ವರ್ಷಗಳ ಕಾಲ ನಡೆದ ಚುನಾವಣೆಗಳು ಅಂದರೆ 1952, 1957, 1962 ಮತ್ತು 1967ರ ಚುನಾವನೆಗಳು ಲೋಕಸಭೆಗೆ ಮತ್ತು ವಿಧಾನಸಭೆಗೆ ಏಕಕಾಲದಲ್ಲೇ ನಡೆದಿದ್ದವು. ದೇಶ ಅಂದು ಅನುಸರಿಸುತ್ತಿದ್ದ ಒಂದು ದೇಶ ಒಂದು ಚುನಾವಣೆಯ ಪದ್ಧತಿಯನ್ನು ಕೈಬಿಟ್ಟಿದೆ. ಹಾಗಾಗಿ ಅದನ್ನು ಮತ್ತೀಗ ತರುತ್ತಿದ್ದೇವೆ ಎನ್ನುವ ವಾದ ದೋಷಪೂರಿತವಾಗಿದೆ. ಮೊದಲ ನಾಲ್ಕು ಚುನಾವಣೆಗಳಲ್ಲಿ, ಲೋಕಸಭೆ ಮತ್ತು ವಿಧಾನಸಭೆಗಳೆರಡಕ್ಕೂ ಏಕಕಾಲದಲ್ಲಿ ಮತದಾನ ನಡೆದಿದ್ದು ಸತ್ಯ. ಹಾಗಂತ ಅದು ಹಾಗೆಯೇ ನಡೆಯಬೇಕೆಂಬ ಕಾರಣಕ್ಕೆ ಆದದ್ದಲ್ಲ. ಬದಲಿಗೆ ಆಗ ದೇಶವಿನ್ನೂ ಹುಟ್ಟಿ ಚುನಾವಣಾ ವ್ಯವಸ್ಥೆಯಲ್ಲಿ ಅಂಬೆಗಾಲಿಡುತಿತ್ತು. ಚುನಾವಣೆ ಎಂಬ ಪ್ರಕ್ರಿಯೆ ಪ್ರಾರಂಭ ಆಗಿದ್ದೆ 1952ರಲ್ಲಿ. ಅದೊಂದು ಪ್ರಾಯೋಗಿಕ ಹಂತ. ಅದು ಹಾಗೆಯೇ ನಡೆಯಬೇಕೆಂಬ ನಿಯಮವೂ ಇರಲಿಲ್ಲ, ಅವಶ್ಯಕತೆಯೂ ಇರಲಿಲ್ಲ. ಹಾಗೆ ನಡೆದುಹೋಯಿತು ಅಷ್ಟೇ. ಆಗ ಜನಸಂಖ್ಯೆಯೂ ಕಡಿಮೆ ಇತ್ತು. ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಒಂದೇ ಪ್ರಬಲ ಪಕ್ಷವಾಗಿತ್ತು. ಆದಕಾರಣ ಕೇಂದ್ರದಲ್ಲಿ, ರಾಜ್ಯಗಳಲ್ಲಿ ಅದರದ್ದೇ ಅಧಿಕಾರವಿತ್ತು. ಈಗ ಹಾಗಲ್ಲ. ಜನಸಂಖ್ಯೆ ಬೆಳೆದಿದೆ. ರಾಜ್ಯಗಳಲ್ಲಿ ಹತ್ತಾರು ಪ್ರಾದೇಶಿಕ ಪಕ್ಷಗಳು ಬೆಳೆದಿವೆ. ಪ್ರಜಾತಂತ್ರ ನಿಧಾನವಾಗಿ ಕೆಲವೊಂದು ರೀತಿಯಲ್ಲಾದರೂ ಪ್ರಭುದ್ಧತೆಯನ್ನು ಗಳಿಸುವ ಮಾರ್ಗದಲ್ಲಿದೆ. ಆಗ ಆಗಿ ಹೋಯಿತು, ಎನ್ನುವುದು ಈಗ ಆಗಲೇಬೇಕು ಎನ್ನುವುದಕ್ಕೆ ಖಂಡಿತಾ ಸಮರ್ಥನೆ ಆಗುವುದಿಲ್ಲ.
ನಲವತ್ತೇಳು ಪಕ್ಷಗಳನ್ನು ಕರೆದು ಅಭಿಪ್ರಾಯ ಕೇಳಿದ್ದಾಗಿಯೂ ಅವುಗಳ ಪೈಕಿ ಹದಿನೈದು ಪಕ್ಷಗಳು ಮಾತ್ರ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿಯೂ ’ಒಂದು ದೇಶ ಒಂದು ಚುನಾವಣೆ’ ಯೋಜನೆಯ ವರದಿ ಸಿದ್ಧಪಡಿಸಿದ ಸಮಿತಿಯ ಮುಖ್ಯಸ್ಥರಾದ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹೇಳಿದ್ದಾರೆ. ಹಾಗಾದರೆ ಇಂತಹದ್ದೊಂದು ಸಂವಿಧಾನ ವಿರೋಧಿ ನಡೆಗೆ ಈ ದೇಶದ ಬಹುಪಾಲು ಪಕ್ಷಗಳ ಬೆಂಬಲ ಇದೆ ಅಂತ ಆಯಿತು. ಬಿಜೆಪಿ ಮತ್ತು ಅದರ ಆಪ್ತ ಪಕ್ಷಗಳ ಬೆಂಬಲ ಅರ್ಥಮಾಡಿಕೊಳ್ಳುವಂಥದ್ದೆ. ಆದರೆ ಮೂವತ್ತೆರಡು ಪಕ್ಷಗಳು ಪ್ರಸ್ತಾಪದ ಪರ ಇವೆ ಎಂದಾದ ಮೇಲೆ ಇದಕ್ಕೆ ಪ್ರತಿರೋಧ ಏನಿದ್ದರೂ ಜನರಿಂದ ಬರಬೇಕು, ಜನ ಸಂಘಟನೆಗಳಿಂದ ಬರಬೇಕು. ಈ ದೇಶದ ಸಂವಿಧಾನವನ್ನು ಮತ್ತು ಪ್ರಜಾಸತ್ತೆಯನ್ನು ಸಂರಕ್ಷಿಸುವ ಕೆಲಸಕ್ಕೆ ಕೇವಲ ರಾಜಕೀಯ ಪಕ್ಷಗಳನ್ನು ನೆಚ್ಚಿ ಕುಳಿತರೆ ಆಗದು ಎಂದು ಮತ್ತೊಮ್ಮೆ ಸಾಬೀತಾಗಿದೆ.


