ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ನೀಡಿರುವ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನಾಲ್ಕು ವಾರಗಳ ಕಾಲ ಮುಂದೂಡಿದಿದ್ದಾರೆ. ಆದರೆ, ಈ ವೇಳೆ ಚಂದ್ರಚೂಡ್ ಅವರು ನಿವೃತ್ತಿಯಾಗಲಿದ್ದು, ಅವರ ಅಧಿಕಾರಾವಧಿ ನವೆಂಬರ್ 10ರಂದು ಮುಗಿಯಲಿದೆ.
ದೀಪಾವಳಿ ರಜೆಗಿಂತ ಮೊದಲು ವಿಚಾರಣೆ ಮುಕ್ತಾಯಗೊಳ್ಳದಿದ್ದರೆ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಎಂದು ಸಿಜೆಐ ಈ ವೇಳೆ ಹೇಳಿದ್ದಾರೆ. ಈ ವಿಚಾರದಲ್ಲಿ ವಾದಿಸಲು ಸಂಬಂಧಪಟ್ಟ ಎಲ್ಲ ವಕೀಲರಿಗೆ ಕಾಲಾವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳ ನಂತರ ಮತ್ತೊಂದು ಪೀಠದಿಂದ ವಿಚಾರಣೆಗೆ ಅರ್ಜಿಗಳನ್ನು ನಿಗದಿಪಡಿಸಿತು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 17 ರಂದು ಪ್ರಾರಂಭಿಸಲಾಗಿತ್ತು.
ಭಾರತೀಯ ದಂಡ ಸಂಹಿತೆ (IPC) ಮತ್ತು ಭಾರತೀಯ ನ್ಯಾಯ ಸಂಹಿತೆ (BNS)ಯು ಪತಿ ತನ್ನ ಅಪ್ರಾಪ್ತ ವಯಸ್ಕಳಲ್ಲದ ಪತ್ನಿ ವಿರುದ್ಧ ನಡೆಸುವ ಅತ್ಯಾಚಾರಕ್ಕೆ ವಿನಾಯಿತಿ ನೀಡುತ್ತದೆ. ಇಂತಹ ಪ್ರಕಣದಲ್ಲಿ ಪತಿಯ ವಿರುದ್ಧ ಪತ್ನಿ ನೀಡುವ ದೂರಿಗೆ ಯಾವುದೆ ಕಾನೂನು ಮಾನ್ಯತೆ ಇರುವುದಿಲ್ಲ. ಅದನ್ನು ಪ್ರಸ್ತುತ ಇರುವ ಕಾನೂನು ಅಪರಾಧ ಎಂದು ಪರಿಗಣಿಸುವುದಿಲ್ಲ.
IPC ಯ ಸೆಕ್ಷನ್ 375 ರ ವಿನಾಯಿತಿ ಷರತ್ತಿನ ಅಡಿಯಲ್ಲಿ, ಪತಿಯು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ ಹೆಂಡತಿ ಅಪ್ರಾಪ್ತಳಾಗಿಲ್ಲದೆ ಇದ್ದರೆ ಅದು ಅತ್ಯಾಚಾರವಲ್ಲ.
ಹೊಸ ಬಿಎನ್‌ಎಸ್ ಕಾನೂನಿನ ಅಡಿಯಲ್ಲಿಯೂ ಕೂಡಾ, ಸೆಕ್ಷನ್ 63 (ಅತ್ಯಾಚಾರ) ಗೆ ವಿನಾಯಿತಿ 2, “ಪತಿ ತನ್ನ ಸ್ವಂತ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ, ಹೆಂಡತಿಯು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿ ಇರದಿದ್ದರೆ ಅದು ಅತ್ಯಾಚಾರವಲ್ಲ.” ಎಂದು ಹೇಳುತ್ತದೆ.
ಇದನ್ನೂ ಓದಿ: “ನಿಮಗೆ ಮದ್ರಸಾ ಮೇಲೆ ಮಾತ್ರ ಏಕೆ ಕಣ್ಣು”? ಮಕ್ಕಳ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
ವೈವಾಹಿಕ ಅತ್ಯಾಚಾರ ಅಪರಾಧೀಕರಣ ಮಾಡುವಂತೆ ಕೇಳಿದ್ದ ಅರ್ಜಿಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದೆ ವಿರೋಧಿಸಿತ್ತು. ಪ್ರಸ್ತುತ ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಬಂಧಗಳಿಗೆ ವಿನಾಯಿತಿ ನೀಡುವ ಅತ್ಯಾಚಾರದ ವಿರುದ್ಧದ ಕಾನೂನುಗಳ ಪರವಾಗಿ ಕೇಂದ್ರ ಸರ್ಕಾರ ಬ್ಯಾಟಿಂಗ್ ಮಾಡಿತ್ತು.
ವೈವಾಹಿಕ ಅತ್ಯಾಚಾರ ಅಪರಾಧೀಕರಣ ಮಾಡುವಂತೆ ಕೇಳಿ ಸಲ್ಲಿಸಲಾಗಿದ್ದ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ವೈವಾಹಿಕ ಅತ್ಯಾಚಾರದ ವಿಷಯವು ಕಾನೂನು ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ವಿಚಾರವಾಗಿದ್ದು, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಿವಿಧ ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
“ಭಾರತದಲ್ಲಿ ಮದುವೆಯನ್ನು ಪರಸ್ಪರ ಬಾಧ್ಯತೆಗಳ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಮದುವೆ ಎಂಬ ಸಂಸ್ಥೆಯಲ್ಲಿ ಪ್ರತಿಜ್ಞೆಗಳನ್ನು ಉಲ್ಲಂಘಿಸಬಾರದು ಎಂದು ಪರಿಗಣಿಸಲಾಗುತ್ತದೆ. ಮದುವೆಯಲ್ಲಿ ಮಹಿಳೆಯರ ಒಪ್ಪಿಗೆ ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿದ್ದರೂ, ಇದನ್ನು ನಿಯಂತ್ರಿಸುವ ದಂಡದ ನಿಬಂಧನೆಗಳು ವಿಭಿನ್ನವಾಗಿವೆ” ಎಂದು ಕೇಂದ್ರ ಸರ್ಕಾರ ಹೇಳಿತ್ತು.
ವೈವಾಹಿಕ ಸಂಬಂಧದ ದುರುಪಯೋಗದ ಸಂತ್ರಸ್ತರಿಗೆ ಪ್ರಸ್ತುತ ಕಾನೂನುಗಳ ಅಡಿಯಲ್ಲಿ ಸಾಕಷ್ಟು ಕಾನೂನು ಪರಿಹಾರಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಈ ವಿನಾಯಿತಿಯನ್ನು ತೆಗೆದುಹಾಕಿದರೆ ಮದುವೆ ಎಂಬ ಸಂಸ್ಥೆಯನ್ನು ಅಸ್ಥಿರಗೊಳಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರವು ವಾದಿಸಿತ್ತು.
ಇದನ್ನೂ ಓದಿ: ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ, ರಾಹುಲ್ ಬೆಂಬಲ
ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ, ರಾಹುಲ್ ಬೆಂಬಲ


