ಚುನಾವಣಾ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಲು ಇಬ್ಬರು ಶಾಸಕರಿಗೆ ಕೋಟ್ಯಾಂತರ ರೂಪಾಯಿ ಹಣದ ಆಮಿಷ ಒಡ್ಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಜಿತ್ ಪವಾರ್ ನೇತೃತ್ವ ಎನ್‌ಸಿಪಿ ಸೇರಲು ಇಬ್ಬರು ಶಾಸಕರಿಗೆ ಕೋಟ್ಯಾಂತ ರೂಪಾಯಿ ಹಣದ ಆಮಿಷವೊಡ್ಡಿರುವ ವರದಿಗಳು ಲಭ್ಯವಾಗಿದೆ. ಇದು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬರುತ್ತದೆ. ಗೃಹ ಖಾತೆಯ ಹೊಣೆ ಹೊತ್ತಿರುವ ಸಿಎಂ ಮೌನವಾಗಿರುವುದೇಕೆ? ಏನಾಗಿದೆ ಎಂಬುವುದನ್ನು ಜನರಿಗೆ ತಿಳಿಸುವ ಜವಾಬ್ದಾರಿ ಸಿಎಂ ಮೇಲಿದೆ” ಎಂದಿದ್ದಾರೆ.
ಪಕ್ಷಾಂತರ ಮಾಡಲು ಹಣದ ಆಮಿಷವೊಡ್ಡುವುದು ಮತ್ತು ಅದನ್ನು ಸ್ವೀಕರಿಸುವುದು ಕ್ರಿಮಿನಲ್ ಚಟುವಟಿಕೆಯಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಈ ಆರೋಪದ ಬಗ್ಗೆ ಅಜಿತ್ ಪವಾರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನವೆಂಬರ್ 20ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ, ಆಡಳಿತರೂಢ ಮಹಾಯುತಿ ಮತ್ತು ಪ್ರತಿಪಕ್ಷಗಳ ಮಹಾ ವಿಕಾಸ್ ಅಘಾಡಿಯ ನಾಯಕರ ನಡುವೆ ನಡೆಯುತ್ತಿರುವ ವಾಗ್ವಾದ ನಡುವೆ ಚೆನ್ನಿತ್ತಲ ಅವರ ಆರೋಪ ಕೇಳಿ ಬಂದಿದೆ.
ಮಹಾರಾಷ್ಟ್ರದಲ್ಲಿ ಆಡಳಿತರೂಢ ಪಕ್ಷಗಳಾದ ಬಿಜೆಪಿ, ಶಿವಸೇನೆ (ಸಿಎಂ ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ ಮಹಾಯುತಿ ಒಕ್ಕೂಟ ಮಾಡಿಕೊಂಡಿದೆ. ಇದೇ ರೀತಿ ಪ್ರತಿ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ದವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಸೇರಿ ಮಹಾ ವಿಕಾಸ್ ಆಘಾಡಿ ರಚಿಸಿಕೊಂಡಿವೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎಲ್ಲಾ 288 ಕ್ಷೇತ್ರಗಳ ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು. ಆದರೆ, ಈ ಬಾರಿ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳು ಎರಡೆರಡು ಬಣಗಳಾಗಿ ವಿಭಜನೆಗೊಂಡಿವೆ. ಆದ್ದರಿಂದ ಚುನಾವಣೆ ಕಣ ರಂಗೇರಿದೆ.
ಇದನ್ನೂ ಓದಿ : “ನನಗೇನು ಅರ್ಥವಾಗಿಲ್ಲ” : ಹಿಂದಿಯಲ್ಲಿ ಪತ್ರ ಬರೆದ ಕೇಂದ್ರ ಸಚಿವರಿಗೆ ತಮಿಳಿನಲ್ಲಿ ಪ್ರತ್ಯುತ್ತರ ಕಳುಹಿಸಿದ ಡಿಎಂಕೆ ಸಂಸದ


