ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿರುವ ಹುಸಿ ಬಾಂಬ್ ಬೆದರಿಕೆಗಳ ಹಿನ್ನಲೆ, ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳ ಈ ಬೆದರಿಕೆ ಮಾಹಿತಿಗಳನ್ನು ತೆಗೆದುಹಾಕುವಂತೆ ಅಥವಾ ಬ್ಲಾಕ್ ಮಾಡುವಂತೆ ಸಾಮಾಜಿಕ ಮಾಧ್ಯಮಗಳ ನಿರ್ವಾಹಕರಿಗೆ ಸೂಚಿಸಿದ್ದು, ಅದು ವಿಫಲವಾದರೆ ಮುಂದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಎಚ್ಚರಿಸಿದೆ. ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಕೃತ್ಯಗಳ ಬಗ್ಗೆ ಮಾಹಿತಿ ನೀಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು “ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಡಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ” ಹೊಂದಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೇಳಿದೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಮತ್ತು ಸಹಾಯವನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಸ್ತುತ ನಿಯಮದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಾಕುವ ಯಾವುದೆ ಅಭಿಪ್ರಾಯಗಳಿಗೆ ಸಾಮಾಜಿಕ ಮಾಧ್ಯಮಗಳು ಹೊಣೆಯಾಗಿರುವುದಿಲ್ಲ. ಈ ಹೊಣೆಗಾರಿಕೆಯಿಂದ ಅವರಿಗೆ ವಿನಾಯಿತಿಯಿದೆ. ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ
ವಿಮಾನಗಳಿಗೆ ಬಾಂಬ್ ಬೆದರಿಕೆ ನೀಡುವ ಮಾಹಿತಿಯನ್ನು ಬ್ಲಾಕ್ ಮಾಡದಿದ್ದರೆ ಅಥವಾ ತೆಗೆದುಹಾಕದಿದ್ದರೆ, ‘ಹೊಣೆಗಾರಿಕೆಯ ವಿನಾಯಿತಿ’ ಇನ್ನು ಮುಂದೆ ಅವರಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಎಚ್ಚರಿಸಿದೆ. ಸಾಮಾಜಿಕ ಮಾಧ್ಯಮ ಸಂಸ್ಥೆಯು ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾಗಿ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ.
“ಇಂತಹ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಿನ ಸಂಖ್ಯೆಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಶದ ಆರ್ಥಿಕ ಭದ್ರತೆಯನ್ನು ಸಹ ಅಸ್ಥಿರಗೊಳಿಸುತ್ತದೆ. ತಪ್ಪು ಮಾಹಿತಿಯನ್ನು ಫಾರ್ವರ್ಡ್ ಮಾಡುವ, ಮರುಪೋಸ್ಟ್ ಮಾಡುವ ಅಥವಾ ರಿಟ್ವೀಟ್ ಮಾಡುವ ಆಯ್ಕೆಗಳಿಂದಾಗಿ ಅಂತಹ ಬೆದರಿಕೆಗಳ ಪ್ರಮಾಣವು ನಿಯಂತ್ರಿಸಲಾರದಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.
“ಇಂತಹ ಹುಸಿ ಬಾಂಬ್ ಬೆದರಿಕೆಗಳು ಸಾರ್ವಜನಿಕ ಸುವ್ಯವಸ್ಥೆ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗಳು ಮತ್ತು ವಿಮಾನಯಾನ ಪ್ರಯಾಣಿಕರ ಸುರಕ್ಷತೆಯನ್ನು ಭಾರಿ ಪ್ರಮಾಣದಲ್ಲಿ ಅಡ್ಡಿಪಡಿಸುವ ತಪ್ಪು ಮಾಹಿತಿಯಾಗಿದೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.
ಕಳೆದ 12 ದಿನಗಳಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳ 275 ಕ್ಕೂ ಹೆಚ್ಚು ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಪಿಟಿಐ ವರದಿ ಮಾಡಿದೆ. ಅತೀ ಹೆಚ್ಚು ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿದ್ದು, ಪರಿಣಾಮವಾಗಿ ಹಲವಾರು ವಿಮಾನಗಳನ್ನು ತಿರುಗಿಸಲಾಗಿದ್ದು, ಹಲವು ಪ್ರಯಾಣವನ್ನು ವಿಳಂಬಗೊಳಿಸಲಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ಕಿಂಜರಾಪು ನಾಯ್ಡು ಅವರು, ವಿಮಾನಗಳಿಗೆ ಬೆದರಿಕೆ ಒಡ್ಡಿದ ತಪ್ಪಿತಸ್ಥರನ್ನು ‘ನೊ-ಫ್ಲೈ’ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರವು ಶಾಸಕಾಂಗ ಕ್ರಮವನ್ನು ತರಲು ಪರಿಗಣಿಸುತ್ತಿದೆ ಎಂದು ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕ | ಭಾರತಕ್ಕೆ 180ರಲ್ಲಿ 176 ನೇ ಸ್ಥಾನ
ಜಾಗತಿಕ ಪ್ರಕೃತಿ ಸಂರಕ್ಷಣಾ ಸೂಚ್ಯಂಕ | ಭಾರತಕ್ಕೆ 180ರಲ್ಲಿ 176 ನೇ ಸ್ಥಾನ


