‘ಡಿಜಿಟಲ್ ಬಂಧನ ಅಥವಾ ಡಿಜಿಟಲ್ ಅರೆಸ್ಟ್’ ಕೆಲ ದಿನಗಳಿಂದ ಭಾರೀ ಚರ್ಚೆಯಲ್ಲಿರುವ ವಿಷಯ. ಕಳೆದ ಭಾನುವಾರ (ಅ.27) 115ನೇ ಸಂಚಿಕೆಯ ‘ಮನ್ ಕಿ ಬಾತ್’ (ಮನದ ಮಾತು) ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ವಿಚಾರವನ್ನು ಉಲ್ಲೇಖಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಾಗಿರುವಂತೆ ದೇಶದ ಜನರಿಗೆ ಸಲಹೆ ನೀಡಿದ್ದರು.
ಬರೋಬ್ಬರಿ 140 ಕೋಟಿಗೂ ಅಧಿಕ ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ, ಡಿಜಿಟಲ್ ಸಾಧನಗಳ ಬಳಕೆ ದುಪ್ಪಟ್ಟಿದೆ. ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾದಂತೆ ಡಿಜಿಟಲ್ ಅಪರಾಧಗಳ ಅಥವಾ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸ ಹೊಸ ಸೈಬರ್ ಅಪರಾಧಗಳು ನಡೆಯುತ್ತಿವೆ. ಅವುಗಳನ್ನು ಪತ್ತೆಹಚ್ಚಿ ಜನರಿಗೆ ಪರಿಹಾರ ಕೊಡುವುದು ಕಾನೂನು ಪಾಲಕರಿಗೂ ಸವಾಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿವಿಧ ಸಂಸ್ಥೆಗಳ ಅಧಿಕಾರಿಗಳಂತೆ ಸೋಗು ಹಾಕಿ ಆಡಿಯೋ, ವಿಡಿಯೋ ಮೂಲಕ ಭಯ ಹುಟ್ಟಿಸಿ ಹಣ ಕಸಿಯುವ ಹೊಸ ಡಿಜಿಟಲ್ ವಂಚನೆ ಹೆಚ್ಚಾಗುತ್ತಿದೆ. ಈ ಬಗ್ಗೆ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ, ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಆ ಹೆಸರಿನಲ್ಲಿ ಯಾರಾದರು ನಿಮ್ಮನ್ನು ಸಂಪರ್ಕಿಸಿದರೆ, ಅದು ಖಂಡಿತವಾಗಿಯೂ ವಂಚನೆಯಾಗಿರುತ್ತದೆ ಎಂದಿದ್ದಾರೆ.
ಏನಿದು ಡಿಜಿಟಲ್ ಅರೆಸ್ಟ್?
ಸೈಬರ್ ವಂಚಕರು ಸಿಬಿಐ,ಇಡಿ, ನಾರ್ಕೋಟಿಕ್ಸ್ ಬ್ಯೂರೋ ಅಥವಾ ಕಸ್ಟಮ್ಸ್ ಅಧಿಕಾರಿಗಳಂತಹ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ವಾಟ್ಸಾಪ್, ಸ್ಕೈಪ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಡಿಯೋ-ವಿಡಿಯೋ ಬಳಸಿಕೊಂಡು ಜನರನ್ನು ಸಂಪರ್ಕಿಸಿ ಅವರಿಂದ ಹಣ ಸುಲಿಗೆ ಮಾಡುವ ಪ್ರಕ್ರಿಯೇ ಡಿಜಿಟಲ್ ಅರೆಸ್ಟ್. ಇಲ್ಲಿ ವಂಚಕರು ನಿಷೇಧಿಗಳ ವಸ್ತುಗಳ ಸಾಗಾಟ, ಮಾದಕ ವಸ್ತುಗಳ ವ್ಯವಹಾರ, ಹಣ ಅಕ್ರಮ ವರ್ಗಾವಣೆಯಂತಹ ಸುಳ್ಳು ಆರೋಪಗಳನ್ನು ಜನರ ಮೇಲೆ ಹೊರಿಸಿ, ಅವರನ್ನು ಬೆದರಿಸಿ ಹಣ ಪಡೆಯುತ್ತಾರೆ. ಇದಕ್ಕಾಗಿ ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಡಿಜಿಟಲ್ ಅರೆಸ್ಟ್ ಮೂಲಕ ಹಣ ಸುಲಿಗೆ ಮಾಡುವ ವಂಚಕರು, ಸರ್ಕಾರಿ ಅಧಿಕಾರಿಗಳಂತೆ ಜನರನ್ನು ನಂಬಿಸಲು ಸಮವಸ್ತ್ರ, ಕಚೇರಿ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಇಲ್ಲದಿದ್ದರೆ ಡೀಪ್‌ಫೇಕ್‌ನಂತಹ ಪರಿಕರಗಳನ್ನು ಬಳಸಿಕೊಂಡು ವಿಡಿಯೋ ಕರೆಗಳನ್ನು ಮಾಡುತ್ತಾರೆ. ಒಂದು ಸಲ ಬಲಿಪಶು ವಂಚಕರ ಜೊತೆ ಮಾತನಾಡಿದರೆ, ಅವರು ಮನೆ ಬಿಟ್ಟು ಹೋಗದಂತೆ, ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಪ್ರತ್ಯೇಕವಾಗಿರುವಂತೆ ವಂಚಕರು ನೋಡಿಕೊಂಡಿರುತ್ತಾರೆ. ಒಂದು ರೀತಿಯಲ್ಲಿ “ನಾನು ಏನೋ ತಪ್ಪು ಮಾಡಿದ್ದೇನೆ, ಬಂಧನದಲ್ಲಿದ್ದೇನೆ” ಎಂಬ ಭಾವನೆಯನ್ನು ಬಲಿಪಶುಗಳ ಮನಸ್ಸಿನಲ್ಲಿ ಮೂಡಿಸುತ್ತಾರೆ.
ಸುಳ್ಳು ತನಿಖೆ, ಜೈಲು ಇತ್ಯಾದಿ ವಿಚಾರಗಳನ್ನು ವಿಡಿಯೋ, ಆಡಿಯೋ ಕರೆಗಳ ಮೂಲಕವೇ ಮಾಡುವ ವಂಚಕರು, ಬಲಿಪಶು ಇರುವ ಜಾಗದ ಮೇಲೆ ನಿಗಾ ಇಟ್ಟು ಅವರಲ್ಲಿ ಭಯ ಮೂಡಿಸುತ್ತಾರೆ. ನಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯದ ಅಮಾಯಕ ಜನರು ವಂಚಕರು ಹೇಳಿದಂತೆ ಕೇಳಲು ಶುರು ಮಾಡುತ್ತಾರೆ. ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇದರ ಲಾಭ ಪಡೆಯುವ ವಂಚಕರು ಹಣ ಸುಲಿಗೆ ಮಾಡುತ್ತಾರೆ.
ವಂಚಕರು ತಮ್ಮನ್ನು ನಂಬುವಂತೆ ಮಾಡಲು ನಕಲಿ ಬಂಧನ ವಾರೆಂಟ್, ನ್ಯಾಯಾಲಯದ ಆದೇಶ ಪ್ರತಿಗಳನ್ನು ತೋರಿಸುತ್ತಾರೆ. ಅದನ್ನು ಬಲಿಪಶುವಿನ ಮೊಬೈಲ್‌ಗೆ ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಕಲಿ ನ್ಯಾಯಾಲಯದ ಕಲಾಪಗಳನ್ನು ನಡೆಸುತ್ತಾರೆ.
ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ, ಭಾರತದಲ್ಲಿ 2024ರಲ್ಲಿ ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡಿದೆ. ಮೊದಲ ತ್ರೈಮಾಸಿಕವೊಂದರಲ್ಲೇ ಭಾರತೀಯರು ಡಿಜಿಟಲ್ ವಂಚನೆಗಳಿಂದ 120.3 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವು ಡಿಜಿಟಲ್ ಬಂಧನ ಪ್ರಕರಣಗಳಾಗಿವೆ.
ಇತ್ತೀಚಿನ ಒಂದು ಘಟನೆಯಲ್ಲಿ, ವರ್ಧಮಾನ್ ಗ್ರೂಪ್ ಅಧ್ಯಕ್ಷ ಎಸ್‌ಪಿ ಓಸ್ವಾಲ್ ಅವರನ್ನು ಎರಡು ದಿನಗಳ ಕಾಲ ಸ್ಕೈಪ್ ಕಣ್ಗಾವಲಿನಲ್ಲಿ ಇರಿಸಿದ್ದ ವಂಚಕರು “ಡಿಜಿಟಲ್‌ನಲ್ಲಿ ಅರೆಸ್ಟ್” ಎಂದು ಹೆದರಿಸಿ ಅವರಿಂದ ಬರೋಬ್ಬರಿ 7 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನಕಲಿ ಕಲಾಪ ಸೃಷ್ಟಿಸಿದ್ದ ವಂಚಕರು, ಮುಖ್ಯನ್ಯಾಮೂರ್ತಿ ಡಿವೈ ಚಂದ್ರಚೂಡ್ ಅವರ ಹೆಸರಿನಲ್ಲಿ ಆದೇಶಗಳನ್ನೂ ನೀಡಿದ್ದರು.
ಅದೇ ರೀತಿ, ಹೈದರಾಬಾದ್‌ನ ಟೆಕ್ಕಿಯೊಬ್ಬರು ಅಕ್ಟೋಬರ್ 27ರಂದು 30 ಗಂಟೆಗಳ ಕಾಲ ಅಗ್ನಿಪರೀಕ್ಷೆಯನ್ನು ಎದರಿಸಿದ್ದರು. ಈ ಸಮಯದಲ್ಲಿ ಸೈಬರ್ ಅಪರಾಧಿಗಳು ಅವರ ಆಧಾರ್ ಕಾರ್ಡ್‌ಗೆ ಹಣ ಅಕ್ರಮ ವರ್ಗಾವಣೆಯ ಸುಳ್ಳು ಆರೋಪದ ಸಂಬಂಧ ಕಲ್ಪಿಸಿ ಲಾಡ್ಜ್‌ನಲ್ಲಿ ಉಳಿಯುವಂತೆ ಒತ್ತಾಯಿಸಿದ್ದರು. ಕೊನೆಗೂ ವಂಚಕರ ಕೈಯಿಂದ ತಪ್ಪಿಸಿಕೊಂಡಿದ್ದ ಟೆಕ್ಕಿ ಸೈಬರ್ ಕ್ರೈಮ್ ಅಧಿಕಾರಿಗಳ ಸಹಾಯ ಕೋರಿದ್ದರು.
ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ವಂಚಕರು ಜನರನ್ನು ಮಾನಸಿಕವಾಗಿ ಭಯಪಡಿಸುವ ಮತ್ತು ತುರ್ತು, ಗಂಭೀರ ಪರಿಸ್ಥಿಗಳನ್ನು ಸೃಷ್ಟಿಸುತ್ತಾರೆ. ಬಲಿಪಶುಗಳಿಗೆ ಅನುಸರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂಬಂತೆ ಅನಿಸಬೇಕು ಆ ರೀತಿ ಮಾಡುತ್ತಾರೆ. ಹಾಗಾಗಿ, ಜನರು ಒಂದು ಕ್ಷಣ ನಿಂತು, ಯೋಚಿಸಿ ನಂತರ ಮುಂದಿನ ಹೆಜ್ಜೆಯಿಡಬೇಕು. ಆಗ ಮಾತ್ರ ಡಿಜಿಟಲ್ ಭದ್ರತೆ ಸಾಧ್ಯ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ.
“ನಿಮಗೆ ಅಪರಿಚಿತ ಕರೆ ಬಂದ ತಕ್ಷಣ ನಿಂತು ಯೋಚಿಸಿ, ಗಾಬರಿಯಾಗಬೇಡಿ, ಶಾಂತವಾಗಿರಿ, ಯಾವುದೇ ಆತುರದ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ ಬಂದಿರುವ ಕರೆಯ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ಯಾವುದೇ ಸರ್ಕಾರಿ ಸಂಸ್ಥೆಯು ನಿಮಗೆ ಡಿಜಿಟಲ್ ಅರೆಸ್ಟ್ ಎಂದು ಬೆದರಿಕೆ ಹಾಕುವುದಿಲ್ಲ. ಏನಾದರು ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಬಂದರೆ ಏನೋ ಮೋಸ ನಡೆಯುತ್ತಿದೆ ಎಂದು ತಿಳಿಯಿರಿ” ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
ನಿಮಗೆ ಏನಾದರು ಅನುಮಾನಾಸ್ಪದ ಕರೆಗಳು ಬಂದರೆ, ರಾಷ್ಟ್ರೀಯ ಸೈಬರ್ ಸಹಾಯವಾಣಿ 1930, ಅಥವಾ cybercrime.gov.in ಗೆ ಮಾಹಿತಿ ನೀಡಿ. ಆ ಬಗ್ಗೆ ನಿಮ್ಮ ಕುಟುಂಬ ಮತ್ತು ಪೊಲೀಸರ ಗಮನಕ್ಕೆ ತನ್ನಿ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮರೆಯದಿರಿ ಎಂದಿದ್ದಾರೆ.
ಇದನ್ನೂ ಓದಿ : ಓಲಾ ಕಂಪನಿ ಸೇರುವಂತೆ ಭವಿಶ್ ಅಗರ್ವಾಲ್ ಕೊಟ್ಟ ಆಫರ್ ಒಪ್ಪಿಕೊಂಡ ಕುನಾಲ್ ಕಮ್ರಾ!


