ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ 13 ವರ್ಷದ ದಲಿತ ಬಾಲಕನನ್ನು ಬಂಧಿಸಿದ ಪೊಲೀಸರು, ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಆರೋಪ ಕೇಳಿ ಬಂದಿದೆ.
ಈ ಘಟನೆಯು ಬಾಲಕನ ಕುಟುಂಬ ಮತ್ತು ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು,
ಸಿಕಾರ್‌ನಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು en.themooknayak.com ವರದಿ ಮಾಡಿದೆ.
ಸ್ಥಳೀಯ ನಿವಾಸಿ ಹಾಗೂ ಸಂತ್ರಸ್ತ ಬಾಲಕನ ಸಂಬಂಧಿ ಬಲ್ಬೀರ್ ಭಾರತೀಯ ಅವರ ಪ್ರಕಾರ, ಅಕ್ಟೋಬರ್ 21ರ ರಾತ್ರಿ ಕಳ್ಳತನದ ಆರೋಪದ ಮೇಲೆ ಬಾಲಕನನ್ನು ಖಂಡೇಲಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಪೊಲೀಸ್ ಠಾಣೆಯ ಸೆಲ್‌ನಲ್ಲಿ ಬಂಧಿಸಿಟ್ಟಿದ್ದರು. ಅಲ್ಲಿ ಪೊಲೀಸರು ಬಾಲಕನನ್ನು ತೀವ್ರ ದೈಹಿಕ ಹಿಂಸೆಗೆ ಒಳಪಡಿಸಿದ್ದಾರೆ. ಆತನಿಗೆ ಥಳಿಸಿದ್ದಲ್ಲದೆ, ಮೂತ್ರ ಕುಡಿಸಿ ದೌರ್ಜನ್ಯವೆಸಗಿದ್ದಾರೆ.
ಬಾಲಕನನ್ನು ಮನೆಗೆ ಕರೆತರಲು ಪ್ರಯತ್ನಿಸಿದಾಗ, ಖಂಡೇಲಾ ಠಾಣಾಧಿಕಾರಿ ಮಂಗೀಲಾಲ್ ಮತ್ತು ಎಎಸ್‌ಐ ಪುರನ್‌ಮಲ್ ಅವರು ಬಿಡುಗಡೆ ಮಾಡಲು 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಲಕನ 70 ವರ್ಷದ ಅಜ್ಜ ತನ್ನ ಮೊಮ್ಮಗನ ಬಿಡುಗಡೆಗಾಗಿ ಮನವಿ ಮಾಡಲು ಠಾಣೆಗೆ ತೆರಳಿದ್ದಾಗ ಪೊಲೀಸ್ ಸಿಬ್ಬಂದಿ ಬಾಲಕನಿಗೆ ಥಳಿಸುವುದನ್ನು ನೋಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅವರು, ಮೊಮ್ಮಗನ ಮೇಲೆ ಏಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಪೊಲೀಸರು ವೃದ್ದನ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರನ್ನು ಬಲವಂತವಾಗಿ ಠಾಣೆಯಿಂದ ಹೊರದಬ್ಬಿದ್ದಾರೆ. ಈ ವೇಳೆ ವೃದ್ದನ ಹೆಬ್ಬೆರಳು ಮುರಿದಿದೆ ಎಂದು ವರದಿ ವಿವರಿಸಿದೆ.
ನ್ಯಾಯ ಮತ್ತು ತಕ್ಷಣ ಕ್ರಮಕ್ಕೆ ಒತ್ತಾಯಿಸಿದ ಕುಟುಂಬ
ಬಾಲಕನ ಕುಟುಂಬ ದಲಿತ ಸಮುದಾಯದ ಜನರೊಂದಿಗೆ ಎಸ್‌ಪಿ ಕಚೇರಿಯ ಬಳಿ ಪ್ರತಿಭಟನೆ ನಡೆಸಿ ತಮಗೆ ನ್ಯಾಯ ಕೊಡಿಸುವಂತೆ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದೆ. ಠಾಣಾಧಿಕಾರಿ ಮಂಗೀಲಾಲ್, ಎಎಸ್‌ಐ ಪುರನ್‌ಮಲ್ ಮತ್ತು ಇತರ ಇಬ್ಬರು ಪೊಲೀಸರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರು ಬಾಲಕನಿಗೆ ಲೈಂಗಿಕ ಕಿರುಕುಳವೂ ನೀಡಿದ್ದಾರೆ ಎಂದು ಬಾಲಕನ ಕುಟುಂಬ ಆರೋಪಿಸಿದೆ. ಹಾಗಾಗಿ, ಪೋಕ್ಸೋ ಪ್ರಕರಣ ದಾಖಲಿಸಲು ಆಗ್ರಹಿಸಿದೆ. ಪೊಲೀಸ್ ದೌರ್ಜನ್ಯದಿಂದ ಬಾಲಕ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಆತ ಭಯಗೊಂಡಿದ್ದು, ನೋವಿನಿಂದ ನರಳುತ್ತಿದ್ದಾನೆ. ಪೊಲೀಸರ ಹಲ್ಲೆಯಿಂದ ಆತನ ಕಾಲುಗಳು ಊದಿಕೊಂಡಿವೆ ಎಂದು ಕುಟುಂಬ ಹೇಳಿಕೊಂಡಿದೆ.
ಕುಟುಂಬಸ್ಥರು ಆರಂಭದಲ್ಲಿ ಅಕ್ಟೋಬರ್ 22ರಂದು ಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರನ್ನು ಅಮಾನತಗೊಳಿಸಬೇಕು. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು en.themooknayak.com ತಿಳಿಸಿದೆ.
ಪೊಲೀಸರ ವಿರುದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಕಾರ್ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಯಾದವ್, “ಪ್ರಕರಣದ ಕುರಿತು ಮಾಹಿತಿ ಪಡೆಯಲು ಕುಟುಂಬವನ್ನು ಪ್ರತಿನಿಧಿಸುವ ನಿಯೋಗವನ್ನು ಸೋಮವಾರ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ದೌರ್ಜನ್ಯಕ್ಕೊಳಗಾದ ಬಾಲಕನೊಂದಿಗೆ ವೈಯಕ್ತಿಕವಾಗಿ ಮಾತನಾದ್ದೇನೆ. ಸೂಕ್ತ ತನಿಖೆಯ ಭರವಸೆಯನ್ನು ಕುಟುಂಬಕ್ಕೆ ನೀಡಿದ್ದೇನೆ. ಪ್ರಕರಣವನ್ನು ರಿಂಗಸ್‌ನ ಸರ್ಕಲ್ ಆಫೀಸರ್ (ಸಿಒ) ಅವರಿಗೆ ವಹಿಸಲಾಗಿದ್ದು, 7 ದಿನಗಳಲ್ಲಿ ವಿವರವಾದ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಎಸ್ಪಿ ನೀಡಿರುವ ಉತ್ತರಕ್ಕೆ ಸಮಾಧಾನಗೊಳ್ಳದ ಬಾಲಕನ ಕುಟುಂಬ, ಬಾಲಕನ ಮೇಲಿನ ದೌರ್ಜನ್ಯ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, ಪೊಲೀಸರನ್ನು ವಜಾಗೊಳಿಸಬೇಕ. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ಹೂಡಬೇಕು ಎಂದು ಪಟ್ಟು ಹಿಡಿದಿದೆ
ಇದನ್ನೂ ಓದಿ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆ | 8 ಸಾವಿರ ಅಭ್ಯರ್ಥಿಗಳಿಂದ 10 ಸಾವಿರಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆ


