ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಲು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಪಂಜಾಬ್ ಪೊಲೀಸರು ಸ್ಟುಡಿಯೋ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಬಿಷ್ಣೋಯ್ ಟಿವಿ ವಾಹಿನಿಗೆ ಸಂದರ್ಶನ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರದ್ದತಿ ವರದಿಯನ್ನು ಸಲ್ಲಿಸುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನಿರ್ಧಾರವನ್ನು ಪ್ರಶ್ನಿಸುವಾಗ ನ್ಯಾಯಮೂರ್ತಿಗಳಾದ ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ಲಪಿತಾ ಬ್ಯಾನರ್ಜಿ ಅವರ ಪೀಠವು ಈ ಹೇಳಿಕೆ ನೀಡಿದೆ.
ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಿಷ್ಣೋಯ್ ಶಂಕಿತ ಆರೋಪಿಯಾಗಿದ್ದಾನೆ. ಆತನ ಸಂದರ್ಶನವನ್ನು ಮಾರ್ಚ್ 2023ರಲ್ಲಿ ಎಬಿಪಿ ನ್ಯೂಸ್ ಪ್ರಸಾರ ಮಾಡಿತ್ತು. ಅದರಲ್ಲಿ ಆತ ಮೂಸೆವಾಲಾ ಕೊಲೆಯ ಸಂಚಿನ ಬಗ್ಗೆ ಗೊತ್ತು ಎಂದಿದ್ದ.
ಪಂಜಾಬ್ ಪೊಲೀಸ್‌ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಖರಾರ್‌ನ ಸಿಐಎ ಸಿಬ್ಬಂದಿ ಆವರಣದಲ್ಲಿ ಸಂದರ್ಶನ ನಡೆದಿದೆ ಎಂದು ಕೋರ್ಟ್ ಹೇಳಿದೆ.
ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ವಿಶೇಷ ಡಿಜಿಪಿ ಪ್ರಬೋಧ್ ಕುಮಾರ್ ಅವರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣ ಸೇರಿದಂತೆ ಇತರ ಅಪರಾಧಗಳನ್ನು ಪರಿಶೀಲಿಸುವ ಅಧಿಕಾರವನ್ನು ಎಸ್‌ಐಟಿ ಹೊಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ಇದನ್ನು ಒಪ್ಪದ ಕೋರ್ಟ್, ಪ್ರಕರಣದ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಿದೆ.
ಲಾರೆನ್ಸ್ ಬಿಷ್ಣೋಯ್ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಇಬ್ಬರು ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ ಏಳು ಮಂದಿ ಪಂಜಾಬ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 8 ಅಧಿಕಾರಿಗಳ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಈ ಹಿಂದೆ ತಿಳಿಸಲಾಗಿತ್ತು.
ಸಿಐಎ ಖರಾರ್ ಪೊಲೀಸ್ ಠಾಣೆಯ ಆಗಿನ ಪ್ರಭಾರಿ ಅಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಶಿವಕುಮಾರ್ ಅವರನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ ಎಂದೂ ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಾಲಯ, ಸಂದರ್ಶನಕ್ಕೆ ಅನುಕೂಲ ಮಾಡಿಕೊಟ್ಟ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ಗದಾಪ್ರಹಾರ ಮಾಡಿ ಹರಕೆ ತೀರಿಸಬಾರದು ಎಂದಿತ್ತು.
ಪೊಲೀಸರ ಅಧಿಕೃತ ಪ್ರತಿಕ್ರಿಯೆಯು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದ ಕಾರಣ, ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಾಲಯ ಹೇಳಿದೆ. ಸಂದರ್ಶನವು ಪಂಜಾಬ್‌ನ ಯಾವುದೇ ಜೈಲಿನಲ್ಲಿ ನಡೆದಿಲ್ಲ ಎಂದು ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯನ್ನು ವಿವರಿಸಲು ಡಿಜಿಪಿಯನ್ನು ಕೇಳಿದೆ. ಇದೇ ವೇಳೆ ಇಂಟರ್‌ನೆಟ್‌ನಲ್ಲಿ ಸಂದರ್ಶನ ಹರಿದಾಡುತ್ತಿದ್ದರೆ ಅದನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ : ಭಾರತದಲ್ಲಿ ಮಕ್ಕಳ ಕುಬ್ಜತೆ ಹೆಚ್ಚಳಕ್ಕೆ ಜಾತಿ ತಾರತಮ್ಯ ಕಾರಣ : ಅಧ್ಯಯನ ವರದಿ


