ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತವೊಂದರ ವಿಡಿಯೋ ಹರಿದಾಡುತ್ತಿದ್ದು, ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿರುವುದನ್ನು ಅದರಲ್ಲಿ ನೋಡಬಹುದು.
ಈ ವಿಡಿಯೋ ಹಂಚಿಕೊಂಡಿರುವ ಅನೇಕ ಫೇಸ್‌ಬುಕ್, ಎಕ್ಸ್ ಬಳಕೆದಾರು, “ಹಿಂದೂ ಹೆಣ್ಣು ಮಕ್ಕಳನ್ನು ಕೊಲ್ಲುವ ಯೋಜನೆಯ ಭಾಗವಾಗಿ ಈ ಅಪಘಾತ ನಡೆಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
‘ಹಿಂದೂ ಯುವ ರಾಷ್ಟ್ರ ಸೇನೆ‘ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ನೆವೆಂಬರ್ 1,2024ರಂದು ವಿಡಿಯೋ ಹಂಚಿಕೊಂಡು “ಇದೆಲ್ಲ ಈ ಜಿಹಾದಿಗಳ ಪ್ಲಾನ್. ಹಿಂದೂಗಳು ಮತ್ತು ಹಿಂದೂಗಳ ಸಹೋದರಿಯರು ಮತ್ತು ಹಿಂದೂಗಳ ಹೆಣ್ಣು ಮಕ್ಕಳನ್ನು ಕೊಲ್ಲಲಾಗುತ್ತಿದೆ. ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಈ ವೀಡಿಯೋ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ, ಆದರೆ ಹೆಣ್ಣಿನ ಮೇಲೆ ವಾಹನಗಳನ್ನು ಓಡಿಸುವ ಉದ್ದೇಶವೂ ಅದೇ, ಈ ಮುಸ್ಲಿಂ ಯುವಕರು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ. ಹಿಂದೂಗಳು ಶಾಂತಿಯುತವಾಗಿ ಮೇಣದ ಬತ್ತಿಗಳನ್ನು ಬೆಳಗಿಸುವುದು ಬಿಟ್ಟು ಬೇರೇನೂ ಮಾಡಲ್ಲ ಅಂತ ಅವರಿಗೂ ಗೊತ್ತು” ಎಂದು ಬರೆದುಕೊಳ್ಳಲಾಗಿತ್ತು.

‘ಅರುಣ್ ಕುಮಾರ್‘ ಎಂಬ ಮತ್ತೋರ್ವ ಎಕ್ಸ್ ಬಳಕೆದಾರ ನವೆಂಬರ್ 1,2024ರಂದು ವಿಡಿಯೋ ಹಂಚಿಕೊಂಡು “ಜಿಹಾದಿಗಳ ಪಿತೂರಿ ಅರಿಯದೆ ನಾವು ಮೋಸ ಹೋಗುತ್ತಿದ್ದೇವೆ. ಹಿಂದೂ ಹೆಣ್ಣುಮಕ್ಕಳನ್ನು ಆ್ಯಕ್ಸಿಡೆಂಟ್ ಮೂಲಕ ಕೊಲ್ಲಲಾಗುತ್ತಿದೆ, ಇದು ಅಪಘಾತ ಎಂದು ಹಿಂದೂಗಳು ಭಾವಿಸುತ್ತಿದ್ದಾರೆ. ಎಚ್ಚೆತ್ತು ಕೊಳ್ಳಿ ಹಿಂದೂ ಬಾಂಧವರೆ” ಎಂದು ಬರೆದುಕೊಂಡಿದ್ದರು.

ಇನ್ನೂ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ ಹಂಚಿಕೊಂಡು ಇದೇ ರೀತಿ ಬರೆದುಕೊಂಡಿದ್ದರು.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ವಿಡಿಯೋಗೆ ಸಂಬಂಧಿಸಿದ ಅನೇಕ ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿದೆ.
ವರದಿಗಳ ಪ್ರಕಾರ, ಘಟನೆಯ ಹಿಂದೆ ಯಾವುದೇ ಕೋಮು ಆಯಾಮ ಇಲ್ಲ. ಅದೊಂದು ಸಾಮಾನ್ಯ ಅಪಘಾತವಾಗಿದ್ದು, ಅಪಘಾತವೆಸಗಿದ ಆರೋಪದ ಮೇಲೆ ಬಂಧಿತ ವ್ಯಕ್ತಿ ಕೂಡ ಹಿಂದೂ ಎಂದು ಗೊತ್ತಾಗಿದೆ.
ಘಟನೆಯ ಕುರಿತು ಎಬಿಪಿ ನ್ಯೂಸ್, ಎನ್ಬಿಟಿ ಮತ್ತು ಟಿವಿ-9 ಭಾರತವರ್ಷ ಅಕ್ಟೋಬರ್ 29, 2024 ರಂದು ಪ್ರಕಟಿಸಿದ ವರದಿಗಳನ್ನು ನಾವು ಪರಿಶೀಲಿಸಿದ್ದೇವೆ. ಈ ಎಲ್ಲಾ ವರದಿಗಳು ಆರೋಪಿ ಕಾರು ಚಾಲಕನ ಹೆಸರನ್ನು ತುಷಾರ್ ಅಗರ್ವಾಲ್ ಎಂದು ಉಲ್ಲೇಖಿಸಿದೆ.
‘ಇಂದೋರ್‌ನ ಜೈಭವಾನಿ ನಗರದಲ್ಲಿ ಇಬ್ಬರು ಹುಡುಗಿಯರು ನವ್ಯಾ ಪ್ರಜಾಪತ್ ಮತ್ತು ಪ್ರಿಯಾಂಶು ತಮ್ಮ ಮನೆಯ ಹೊರಗೆ ರಂಗೋಲಿ ಹಾಕುತ್ತಿದ್ದರು. ಈ ವೇಳೆ ತುಷಾರ್ ಅಗರ್ವಾಲ್ ಅತಿ ವೇಗವಾಗಿ ಬಂದು ಬಾಲಕಿಯರ ಮೇಲೆ ಕಾರು ಹತ್ತಿಸಿದ್ದಾನೆ. ಕಾರಿನ ಸಂಖ್ಯೆ MP 09 ZW 7287 ಆಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರು ಚಾಲಕ ತುಷಾರ್ ಅಗರ್ವಾಲ್, ಹುಕುಮಚಂದ್ ಕಾಲೋನಿ ನಿವಾಸಿಯಾಗಿದ್ದಾನೆ. ಈತ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ” ಎಂದು ವರದಿಗಳು ವಿವರಿಸಿದೆ.

ಎಎನ್‌ಐ ಸುದ್ದಿ ಸಂಸ್ಥೆ ಅಕ್ಟೋಬರ್ 29,2024ರಂದು ತನ್ನ ಎಕ್ಸ್ ಖಾತೆಯಲ್ಲಿ ಈ ಘಟನೆಯ ಕುರಿತು ಇಂದೋರ್ ವಲಯ-1 ಡಿಸಿಪಿ ವಿನೋದ್ ಕುಮಾರ್ ಮೀನಾ ಅವರು ನೀಡಿದ್ದ ಹೇಳಿಕೆಯನ್ನು ಹಂಚಿಕೊಂಡಿತ್ತು. ಇದರಲ್ಲೂ ಅವರು ಆರೋಪಿಯನ್ನು ತುಷಾರ್ ಅಗರ್ವಾಲ್ ಎಂದು ಹೇಳಿದ್ದರು.
#WATCH जयभवानी नगर में दो लड़कियां अपने घर के बाहर रंगोली बना रही थीं, उसी दौरान एक कार चालक तेज गति से आया और लड़कियों को कुचल दिया। उन्हें अस्पताल पहुंचाया गया। 19 वर्षीय लड़की की हालत स्थिर है, 13 वर्षीय लड़की की हालत गंभीर बनी हुई है। आरोपी के खिलाफ मामला दर्ज़ करके उसे पकड़… pic.twitter.com/4ynTAhZXT6
— ANI_HindiNews (@AHindinews) October 28, 2024
ಒಟ್ಟಿನಲ್ಲಿ, ಹುಡುಗಿಯರ ಮೇಲೆ ಕಾರು ಹತ್ತಿದ ಅಪಘಾತದ ವಿಡಿಯೋ ಹಿಂದೆ ಯಾವುದೇ ಕೋಮು ಆಯಾಮ ಇಲ್ಲ. ಅಪಘಾತ ಹಿಂದೂ ಹೆಣ್ಣುಮಕ್ಕಳನ್ನು ಕೊಲ್ಲುವ ಯೋಜನೆಯ ಭಾಗ ಎಂಬುವುದು ಸುಳ್ಳು.
ಇದನ್ನೂ ಓದಿ : FACT CHECK : ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಡೆ ನಿಲ್ಲಿಸಿ ಅವಮಾನಿಸಲಾಗಿದೆಯಾ?


