ವಿಕಿಪೀಡಿಯಾದಲ್ಲಿ ಪ್ರಕಟವಾಗುವ ಲೇಖನಗಳ ಬಗ್ಗೆ ‘ಪಕ್ಷಪಾತ ಮತ್ತು ಅಸ್ಪಷ್ಟತೆ’ ಆರೋಪಗಳು ಕೇಳಿ ಬಂದಿದ್ದು, ಈ ಕುರಿತು ವಿವರಣೆ ನೀಡುವಂತೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ.
ವಿಕಿಪೀಡಿಯಾವನ್ನು ಮಧ್ಯವರ್ತಿ ಬದಲಿಗೆ ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು? ಎಂದು ವಿವರಣೆ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ನೋಟಿಸ್‌ನಲ್ಲಿ ವಿಕಿಪೀಡಿಯಾ ವಿರುದ್ದದ ಹಲವು ದೂರುಗಳನ್ನು ಉಲ್ಲೇಖಿಸಿದೆ. ವಿಕಿಪೀಡಿಯಾದ ಸಂಪಾದಕೀಯ ನಿಯಂತ್ರಣವು ಒಂದು ಸಣ್ಣ ಗುಂಪಿನ ಕೈಯಲ್ಲಿದೆ ಎಂದು ತೋರುತ್ತದೆ. ಇದು ತಟಸ್ಥ, ಸ್ವಯಂ ಸೇವಕ ಆಧಾರಿತ ಸಂಪನ್ಮೂಲ ಎಂಬ ವಿಕಿಪೀಡಿಯಾದ ಹಕ್ಕನ್ನು ಪ್ರಶ್ನಿಸುತ್ತದೆ ಎಂದು ಹೇಳಿದೆ.
ವಿಕಿಪೀಡಿಯಾ ಮತ್ತು ಎಎನ್‌ಐನ ಪ್ರಕರಣದ ವಿಚಾರಣೆ ವೇಳೆ ವಿಕಿಪೀಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ನವೀನ್ ಚಾವ್ಲಾ ಅವರು “ವಿಕಿಪೀಡಿಯಾ ಮೂಲತಃ ಭಾರತದ್ದು ಆಗಿರದೇ ಇರಬಹುದು. ಆದರೆ, ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಇಲ್ಲಿನ ಕಾನೂನು ಪಾಲಿಸಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ. ನಿಮ್ಮ ಕಾರ್ಯಾಚರಣೆಯನ್ನು ಭಾರತದಲ್ಲಿ ನಿಷೇಧಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು.
ವಿಕಿಪೀಡಿಯ ತನ್ನನ್ನು ತಾನು ಉಚಿತ ಆನ್‌ಲೈನ್ ವಿಶ್ವಕೋಶವಾಗಿ ಪ್ರಚಾರ ಮಾಡುತ್ತದೆ. ಇದು ಬಳಕೆದಾರರಿಗೆ ಯಾವುದೇ ವಿಷಯಗಳ ಮೇಲೆ ಪುಟಗಳನ್ನು ರಚಿಸಲು ಮತ್ತು ಸಂಪಾದಿಸಲು ಅನುಮತಿಸುತ್ತದೆ. ಪ್ರಸ್ತುತ ಸುದ್ದಿ ಸಂಸ್ಥೆ ಎಎನ್‌ಐ ಕುರಿತು ಆಪಾದಿತ ಮಾನನಷ್ಟ ಮತ್ತು ತಪ್ಪಾದ ಮಾಹಿತಿಯನ್ನು ಪ್ರಕಟಿಸಿದ ಆರೋಪದಲ್ಲಿ ಭಾರತದಲ್ಲಿ ವಿಕಿಪೀಡಿಯಾಗೆ ಕಾನೂನು ಸವಾಲು ಎದುರಾಗಿದೆ.
ವಿಕಿಪೀಡಿಯಾ ಪುಟದಲ್ಲಿ ಎಎನ್‌ಐ ಸುದ್ದಿ ಸಂಸ್ಥೆಯನ್ನು “ಕೇಂದ್ರ ಸರ್ಕಾರದ ಪ್ರಚಾರ ಸಾಧನ” ಎಂದು ಉಲ್ಲೇಖಿಸಿರುವ ಆರೋಪವಿದೆ. ಈ ಕಾರಣಕ್ಕೆ ವಿಕಿಪೀಡಿಯಾ ವಿರುದ್ದ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ಈ ಪ್ರಕರಣದಲ್ಲಿ ಮಾಹಿತಿ ಸಂಪಾದಿಸಿ ಮೂವರು ವ್ಯಕ್ತಿಗಳ ಗುರುತನ್ನು ಬಹಿರಂಗಪಡಿಸುವಂತೆ ವಿಕಿಪೀಡಿಯಾಗೆ ನ್ಯಾಯಾಲಯ ಆದೇಶಿಸಿತ್ತು.
ಭಾರತದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರದ ಕಾರಣ ಆದೇಶ ಪಾಲಿಸಲು ಹೆಚ್ಚಿನ ಸಮಯವಕಾಶವನ್ನು ನೀಡುವಂತೆ ವಿಕಿಪೀಡಿಯಾ ನ್ಯಾಯಾಲವನ್ನು ಕೋರಿತ್ತು. ಆದರೆ, ನ್ಯಾಯಮೂರ್ತಿ ಚಾವ್ಲಾ ಅವರು ಮನವಿಯನ್ನು ತಳ್ಳಿ ಹಾಕಿ, ತಕ್ಷಣವೇ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದ್ದಾರೆ. ನ್ಯಾಯಾಲಯದ ಆದೇಶ ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ : ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಭುತ್ವಕ್ಕೆ ಅವಕಾಶವಿಲ್ಲ : ಸುಪ್ರೀಂಕೋರ್ಟ್


