ಲೋಕಾಯುಕ್ತ ಎಸ್‌ಐಟಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಅವರು ನೀಡಿರುವ ದೂರು ಆಧರಿಸಿ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕ ಸುರೇಶ್ ಬಾಬು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕುಮಾರಸ್ವಾಮಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ಇನ್ನಷ್ಟೇ ನಿಗದಿಯಾಗಬೇಕಿದೆ.
ತಮ್ಮ ರಾಜಕೀಯ ಎದುರಾಳಿಗಳ ಪ್ರಚೋದನೆಗೆ ಒಳಗಾಗಿ ಚಂದ್ರಶೇಖರ್ ಅವರು ನಮ್ಮ ವಿರುದ್ದ ಆರೋಪ ಮಾಡಿ, ಘನತೆಗೆ ಹಾನಿ ಮಾಡಿದ್ದಾರೆ. ಹಲವು ರಾಜಕೀಯ ವಿರೋಧಿಗಳು ಚಂದ್ರಶೇಖರ್ ಅವರನ್ನು ಪ್ರಚೋದಿಸಿದ್ದು, ಅವರು ಬರೆದಿರುವ ಪತ್ರವನ್ನು ಪೊಲೀಸ್ ಇಲಾಖೆಯಲ್ಲಿ ಹಂಚಿಕೆ ಮಾಡಲಾಗಿದೆ. ಈಗ ದೂರಿನಲ್ಲಿ ಮಾಡಿರುವ ಆರೋಪಗಳು ಸೃಷ್ಟಿತವಾಗಿದ್ದು, ಎಫ್‌ಐಆರ್ ದಾಖಲಿಸುವ ಉದ್ದೇಶದಿಂದ ಮಾಡಲಾಗಿದೆ. ಹೀಗಾಗಿ, ಅದನ್ನು ವಜಾ ಮಾಡಬೇಕು ಎಂದು ಕುಮಾರಸ್ವಾಮಿ ಮತ್ತು ಇತರರು ಕೋರಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಕುಮಾರಸ್ವಾಮಿ ನನ್ನ ವಿರುದ್ದ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ. ಸುಳ್ಳು ವೈದ್ಯಕೀಯ ದಾಖಲಾತಿಯನ್ನು ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರೆಯುತ್ತಿರುವುದಾಗಿಯೂ, ಲಂಚ ಪಡೆದಿದ್ದಾಗಿಯೂ ಆರೋಪಿಸಿದ್ದಾರೆ ಎಂದು ಚಂದ್ರಶೇಖರ್ ದೂರು ನೀಡಿದ್ದರು.
ದೂರು ಆಧರಿಸಿ ಎನ್‌ಸಿಆರ್ ದಾಖಲಿಸಿಕೊಂಡಿದ್ದ ಬೆಂಗಳೂರಿನ ಸಂಜಯ್ ನಗರ ಠಾಣೆ ಪೊಲೀಸರು, ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಆಧರಿಸಿ, ನಿನ್ನೆ(ನ.5) ಕುಮಾರಸ್ವಾಮಿ, ನಿಖಿಲ್ ಮತ್ತು ಸುರೇಶ್ ಬಾಬು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | ಮುಡಾ ಪ್ರಕರಣ : ಲೋಕಾಯುಕ್ತ ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ


