ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎ.ಎಸ್. ಪ್ರಭಾಕರ್ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’ ಸಮುದಾಯ ಅಧ್ಯಯನ ಕುರಿತ ಕಥನಗಳ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಣೆಯ ಈ ಕೃತಿಗೆ ಸಂಶೋಧನಾ ವಿಭಾಗದಲ್ಲಿ ಪ್ರಶಸ್ತಿ ಘೋಷಣೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
‘ಚಹರೆಗಳೆಂದರೆ ಗಾಯಗಳೂ ಹೌದು’ ಸಮುದಾಯ ಅಧ್ಯಯನಗಳ ಕುರಿತ ಕಥನಗಳು ಕೃತಿಯು, ವರ್ತಮಾನದಲ್ಲಿ ನಮ್ಮೊಡನೆ ಬದುಕುತ್ತಿರುವ ಬುಡಕಟ್ಟು, ಆದಿವಾಸಿ ಸಮುದಾಯಗಳ ವೈರುಧ್ಯಗಳಿಂದ ಕೂಡಿದ ಸಮಾಜೋ – ಆರ್ಥಿಕ ಬದುಕಿನ ವಾಸ್ತವಗಳೇ ಆಗಿದ್ದರೂ, ನಾಗರೀಕ ಜಗತ್ತಿನ ಚಿಂತನಾಕ್ರಮವಲ್ಲದ ವಾಸ್ತವಿಕ ಸತ್ಯಗಳನ್ನು ಓದುಗರ ಮುಂದಿಡುತ್ತದೆ.
ಪ್ರಶಸ್ತಿಯು 25 ಸಾವಿರ ರೂ.ಗಳ ಬಹುಮಾನ, ಫಲಕ, ಶಾಲು, ಹಾರ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ತಮ್ಮ ಕೃತಿಗೆ ಪ್ರಶಸ್ತಿ ಘೋಷಣೆಯಾಗಿರುವ ಬಗ್ಗೆ ಮಾತನಾಡಿದ ಪ್ರೊಫೆಸರ್ ಎ.ಎಸ್. ಪ್ರಭಾಕರ, “ಸಮಾಜವಿಜ್ಞಾನದ ಓದು ನನಗೆ ಹೊಸದಾಗಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ನಾನು ಭಾಗಿಯಾಗಿದ್ದ ಸಂಘಟನೆಗಳ ಸ್ಟಡಿ ಸರ್ಕಲ್‌ಗಳಲ್ಲಿ ಸಮಾಜ, ರಾಜಕೀಯಾರ್ಥ ಶಾಸ್ತ್ರವನ್ನು ಕಲಿಯುವ ಸಂದರ್ಭಗಳು ಒದಗಿಬಂದಿದ್ದವು. ಅಲ್ಲಿ ಕಲಿತ ಕೆಲವು ಪಾಠಗಳು ಇಲ್ಲಿ ನೆನಪಾಗತೊಡಗಿದವು. ಸರಿಸುಮಾರು ಇನ್ನೂರು ವರ್ಷಗಳ ಕಾಲ ಭಾರತವನ್ನು ತಿರುಗಾಡಿದ ಯುರೋಪ್ ಮತ್ತು ಅಮೆರಿಕದ ವಿದ್ವಾಂಸರು ಭಾರಿ ಗಾತ್ರದ ಅಧ್ಯಯನದ ಸರಕನ್ನು ಇಲ್ಲಿ ಬಿಟ್ಟು ಹೋಗಿರುವುದನ್ನು ನೋಡಿ ಬೆರಗಾದೆ.
ಪಾಶ್ಚಾತ್ಯರಲ್ಲಿ ನಾನು ಆಯ್ಕೆ ಮಾಡಿಕೊಂಡ ವಿದ್ವಾಂಸರನ್ನು ಓದುವುದೇ ಸವಾಲಿನ ಕೆಲಸವಾಗಿತ್ತು. ಕನ್ನಡದಲ್ಲಿ ಪಾಶ್ಚಾತ್ಯ ಅಧ್ಯಯನಕಾರರನ್ನು ಮೆಚ್ಚಿ ಬರೆದ ಬರಹಗಳೇ ಜಾಸ್ತಿ. ಅವರು ಕಟ್ಟಿಕೊಟ್ಟ ಪ್ರಮೆಯಗಳನ್ನು ಮತ್ತು ಅಧ್ಯಯನದ ಸೂತ್ರಗಳನ್ನು ಕಣ್ಮುಚ್ಚಿ ಅನುಕರಿಸುವ ಪರಿಪಾಠ ಕನ್ನಡದಲ್ಲಿ ಇಂದಿಗೂ ಮುಂದು ವರೆದಿದೆ. ಕನ್ನಡದಲ್ಲಿ ಅಷ್ಟರಮಟ್ಟಿಗೆ ಈ ಕ್ಲಾಸಿಕಲ್ ಅಧ್ಯಯನಗಳ ವಿಮರ್ಶಾತ್ಮಕ ಓದು ನಡೆದಿಲ್ಲ. ಸಮಾಜವಿಜ್ಞಾನದಲ್ಲಿ ಬರೆಯುವುದು, ಅದರಲ್ಲೂ ಕನ್ನಡದಲ್ಲಿ ಬರೆಯುವುದು ಸವಾಲಿನ ಸಂಗತಿ.” ಎಂದು ಹೇಳಿದರು.
“ಈ ಹಿಂಜರಿಕೆಯಲ್ಲಿಯೇ ಓದು ಬರಹ ಶುರು ಮಾಡಿದ ನನಗೆ ಕನ್ನಡ ವಿಶ್ವವಿದ್ಯಾಲಯದ ಬೇರೆ ಬೇರೆ ವಿಭಾಗಗಳ ಕೆಲ ಹಿರಿಯ ಪ್ರಾಧ್ಯಾಪಕರು ನೆರವಾಗಿದ್ದಾರೆ. ಅವರನ್ನೆಲ್ಲ ಅತ್ಯಂತ ಕೃತಜ್ಞತೆಯಿಂದ ನೆನೆಯುವೆ.
ಬುಡಕಟ್ಟು ಅಧ್ಯಯನ ವಿಭಾಗವನ್ನೂ ಒಳಗೊಂಡಂತೆ, ಬೇರೆ ಬೇರೆ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಕಳೆದ ಇಪ್ಪತ್ನಾಲ್ಕು ವರ್ಷಗಳಲ್ಲಿ ಅಧ್ಯಯನ ವಿಧಾನದ ಕುರಿತು ಪಾಠ ಮಾಡಿದ್ದೇನೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗುವ ಅನೇಕ ವಿಷಯಗಳ ಮೇಲೆ ನಾನು ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು” ಎಂದು ಹೇಳಿದರು.
ಪ್ರಶಸ್ತಿ ವಿಜೇತ ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಕ್ರಮವಾಗಿ ಮನೆ ಧ್ವಂಸ : ಯುಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಅಕ್ರಮವಾಗಿ ಮನೆ ಧ್ವಂಸ : ಯುಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್


