ದೂರುದಾರರು ಮತ್ತು ಆರೋಪಿ ರಾಜಿ ಮಾಡಿಕೊಂಡ ಕಾರಣಕ್ಕೆ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ನ.7) ತೀರ್ಪು ನೀಡಿದೆ.
ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿಕ್ಷಕನ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗೊತ್ತಿದ್ದು, ಆರೋಪಿ ಶಿಕ್ಷಕನ ವಿರುದ್ದ ಕ್ರಮಕ್ಕೆ ಸೂಚಿಸಿದೆ.
ರಾಜಸ್ಥಾನದ ಗಂಗಾಪುರ ನಗರದ ದಲಿತ ಬಾಲಕಿಯೊಬ್ಬಳು 2022ರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಿಸಿದ್ದಳು. ಪೊಲೀಸರು ಪೋಕ್ಸೋ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಹೇಳಿಕೆ ಪಡೆದಿದ್ದರು.
ಈ ನಡುವೆ ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ, ಸ್ಟಾಂಪ್ ಪೇಪರ್‌ನಲ್ಲಿ ಬಾಲಕಿಯ ಕುಟುಂಬದಿಂದ ಹೇಳಿಕೆ ಪಡೆದಿದ್ದ. ಆ ಹೇಳಿಕೆಯಲ್ಲಿ ತಪ್ಪು ತಿಳುವಳಿಕೆಯಿಂದ ನಾನು ಪೊಲೀಸ್ ದೂರು ದಾಖಲಿಸಿದ್ದೆ. ಇನ್ನು ಮುಂದೆ ಶಿಕ್ಷಕನ ವಿರುದ್ಧ ಯಾವುದೇ ಕ್ರಮವನ್ನು ಬಯಸುವುದಿಲ್ಲ ಎಂದು ಬಾಲಕಿ ಹೇಳಿದ್ದಳು. ಅದನ್ನು ಸ್ವೀಕರಿಸಿದ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಕೆಳ ನ್ಯಾಯಾಲಯ ಈ ಹೇಳಿಕೆಯನ್ನು ತಿರಸ್ಕರಿಸಿತ್ತು. ನಂತರ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಹೈಕೋರ್ಟ್ ಬಾಲಕಿಯ ಹೇಳಿಕೆಯನ್ನು ಪರಿಗಣಿಸಿ ಆರೋಪಿ ಶಿಕ್ಷಕನ ವಿರುದ್ದದ ಎಫ್‌ಐಆರ್ ರದ್ದುಪಡಿಸಿತ್ತು.
ಇದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ರಾಮ್‌ಜಿ ಲಾಲ್ ಬೈರ್ವಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬೈರ್ವಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿ.ಟಿ ರವಿಕುಮಾರ್ ಮತ್ತು ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠ, ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದೆ. ಆರೋಪಿ ಶಿಕ್ಷಕ ವಿರುದ್ದ ಕ್ರಮಕ್ಕೆ ಸೂಚಿಸಿದೆ.
ಇದನ್ನೂ ಓದಿ : PMLA ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ಅಗತ್ಯ: ಸುಪ್ರೀಂ ಕೋರ್ಟ್


