ಅಮೆರಿಕದ ಪ್ರಜೆಗಳನ್ನು ಮದುವೆಯಾಗಿರುವ ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಜೋ ಬೈಡೆನ್ ಆಡಳಿತ ಜಾರಿಗೊಳಿಸಿದ್ದ ನೀತಿಯೊಂದನ್ನು ಯುಎಸ್ ಫೆಡರಲ್ ನ್ಯಾಯಾಧೀಶರು ಗುರುವಾರ (ನ.8) ರದ್ದುಗೊಳಿಸಿದ್ದಾರೆ.
ಯುಎಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುವ ಮುನ್ನವೇ, ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಇದು ಟ್ರಂಪ್ ಆಡಳಿತದ ಪ್ರಥಮ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಟ್ರಂಪ್ ಕೂಡ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಒಲವು ಹೊಂದಿದ್ದರು ಎಂದು ವರದಿಗಳು ಹೇಳಿವೆ.
ಅಮೆರಿಕದ ಪ್ರಜೆಗಳನ್ನು ಮದುವೆಯಾಗಿರುವ ವಲಸಿಗರು ತಮ್ಮ ಬಳಿಕ ಸೂಕ್ತ ದಾಖಲೆಗಳು ಇಲ್ಲದಿದ್ದರೂ ದೇಶವನ್ನು ತೊರೆಯದೆ ‘ಗ್ರೀನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಬೈಡೆನ್ ಆಡಳಿತದ ನೀತಿ ಅವಕಾಶ ಮಾಡಿಕೊಟ್ಟಿತ್ತು. ವಲಸಿಗ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಯುಎಸ್ ಅಧ್ಯಕ್ಷರು ಜಾರಿಗೊಳಿಸಿದ ಅತಿದೊಡ್ಡ ನೀತಿ ಇದು ಎಂದು ಬಣ್ಣಿಸಲಾಗಿತ್ತು.
ಈ ನೀತಿಯಿಂದ ಭಾರತೀಯರು ಸೇರಿದಂತೆ ಗಡಿಪಾರು ಆತಂಕ ಎದುರಿಸುತ್ತಿರುವ ಸುಮಾರು 5 ಲಕ್ಷ ವಲಸಿಗರು ನಿರಾಳರಾಗಿದ್ದರು. ಆದರೆ, ಈ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಅನೇಕ ಅರ್ಜಿಗಳು ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಫೆಡರಲ್ ನ್ಯಾಯಾಧೀಶ. ಕೆ. ಕ್ಯಾಂಪ್‌ಬೆಲ್ ಬಾರ್ಕರ್ ಅವರು ಕಳೆದ ಆಗಸ್ಟ್ ತಿಂಗಳಲ್ಲಿ ತಡೆ ನೀಡಿತ್ತು.
ಗುರುವಾರ ನೀತಿಯನ್ನು ರದ್ದುಗೊಳಿಸಿ ನ್ಯಾಯಾಧೀಶರು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಈ ವಲಸೆ ನೀತಿ ಅನುಷ್ಠಾನಗೊಳಿಸುವ ಮೂಲಕ ಬೈಡೆನ್ ಆಡಳಿತ ತನ್ನ ಅಧಿಕಾರ ನೀತಿಯನ್ನು ಮೀರಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ನ್ಯಾಯಾಲಯದ ಆದೇಶದಿಂದ ಇದೀಗ ಲಕ್ಷಾಂತರ ವಲಸಿಗ ಜನರಲ್ಲಿ ಆತಂಕ ಶುರುವಾಗಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಆಡಳಿತ ಜಾರಿಗೊಳಿಸಿದ್ದ ವಲಸೆ ನೀತಿಗೆ ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕ್ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಬೈಡೆನ್ ನೀತಿ ದೇಶದ ಆರ್ಥಿಕ ಹೊರೆಯನ್ನು ಹೆಚ್ಚಿಸುವುದಲ್ಲದೆ, ಇನ್ನಷ್ಟು ವಲಸಿಗರು ದೇಶಕ್ಕೆ ಬರಲು ಅನುವು ಮಾಡಿಕೊಡುತ್ತದೆ ಎಂದಿತ್ತು.
ಇದನ್ನೂ ಓದಿ : ಪಾಕಿಸ್ತಾನ | ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ : 20 ಸಾವು, 30 ಮಂದಿಗೆ ಗಾಯ


