ವಸತಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ದ ಅವಹೇಳನಕಾರಿ ಪದ ಬಳಸಿ ಧರ್ಮ, ಜಾತಿ ನಿಂದನೆ ಮಾಡಿದಲ್ಲದೆ, ಬೆದರಿಕೆ ಹಾಕಿದ ಆರೋಪದಡಿ ಬಂಧಿತನಾಗಿದ್ದ ರಾಷ್ಟ್ರ ರಕ್ಷಣೆ ಪಡೆ ಮುಖಂಡ ಪುನೀತ್ ಕೆರೆಹಳ್ಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ನ.11ರಂದು ಪುನೀತ್ ಕೆರೆಹಳ್ಳಿ ಯಾವುದೋ ಸ್ಥಳದಲ್ಲಿ ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ವಿರುದ್ದ ಧರ್ಮ ಮತ್ತು ಜಾತಿಯ ಹೆಸರು ಬಳಸಿ ನಿಂದನೆ ಮಾಡಿದ್ದ. ಬೆದರಿಕೆ ಹಾಕಿದ್ದ. ಝಮೀರ್ ಅಹ್ಮದ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುರಿತು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ನೆಪದಲ್ಲಿ ಕೋಮು ದ್ವೇಷದ ಮಾತುಗಳನ್ನಾಡಿದ್ದ.
ಈ ಸಂಬಂಧ, “ಪುನೀತ್ ಕೆರೆಹಳ್ಳಿ ಧರ್ಮ-ಧರ್ಮಗಳ ನಡುವೆ ದ್ವೇಷ ಬಿತ್ತುವ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಅವಾಚ್ಯ ಶಬ್ದ ಬಳಸಿ ಸಚಿವರನ್ನು ನಿಂದಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ದ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಸಹಾಯಕ ಬಿ.ಎಸ್ ಅಶೋಕ್ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಆಧರಿಸಿ ಪುನೀತ್ ಕೆರೆಹಳ್ಳಿಯನ್ನು ನಿನ್ನೆ (ನ.13) ತಡರಾತ್ರಿ ಪೊಲೀಸರು ಬಂಧಿಸಿದ್ದರು. ಬಳಿಕ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಿಜೆಪಿ ಆಡಳಿತದ ಅವಧಿಯಲ್ಲಿ ನಿರಾವರಿ ನಿಗಮದಿಂದ ₹300 ಕೋಟಿ ಮಠ – ಮಂದಿರಗಳಿಗೆ ದುರುಪಯೋಗ!


