ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೋಯಾ ಹಸನ್ ಅವರು ಪ್ಯಾಲೆಸ್ತೀನ್ ಸಂಘರ್ಷದ ಕುರಿತು ನಡೆಸಬೇಕಿದ್ದ ಭಾಷಣವನ್ನು ಗುರುಗ್ರಾಮ್ ವಿಶ್ವವಿದ್ಯಾಲಯವು ಇತ್ತೀಚೆಗೆ ರದ್ದುಗೊಳಿಸಿದೆ ಎಂದು ದಿ ವೈರ್ ಬುಧವಾರ ವರದಿ ಮಾಡಿದೆ. “ಸಮಾನ ಹಕ್ಕುಗಳಿಗಾಗಿ ಪ್ಯಾಲೆಸ್ಟೀನಿಯನ್ ಹೋರಾಟ: ಭಾರತ ಮತ್ತು ಜಾಗತಿಕ ಪ್ರತಿಕ್ರಿಯೆ” ಎಂಬ ಶೀರ್ಷಿಕೆಯಡಿಯಲ್ಲಿ, ನವೆಂಬರ್ 12 ರಂದು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗವು ಈ ಭಾಷಣವನ್ನು ಆಯೋಜಿಸಿತ್ತು.
ನವೆಂಬರ್ 10 ರಂದು ಸಂಘಟಕರು ಜೋಯಾ ಅವರಿಗೆ ಕರೆ ಮಾಡಿದ್ದು, ಕಾರ್ಯಕ್ರಮ ರದ್ದು ಮಾಡಲಾಗಿರುವ ಬಗ್ಗೆ ತಿಳಿಸಲಾಗಿತ್ತು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವಿಶ್ವವಿದ್ಯಾನಿಲಯದ ಉಪಕುಲಪತಿ ದಿನೇಶ್ ಕುಮಾರ್, ಆಹ್ವಾನ ಪತ್ರಿಕೆಯಲ್ಲಿ ತನ್ನನ್ನು “ಮುಖ್ಯ ಪೋಷಕ” ಎಂದು ವಿವರಿಸಲಾಗಿತ್ತಾದರೂ, ಈ ಕಾರ್ಯಕ್ರಮಕ್ಕೆ ಅವರ ಅನುಮೋದನೆಯನ್ನು ಕೋರಲಾಗಿರಲಿಲ್ಲ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ವಿಶ್ವವಿದ್ಯಾನಿಲಯದ ಶಿಕ್ಷಕರೊಬ್ಬರು ಚರ್ಚೆಯನ್ನು ಏರ್ಪಡಿಸಿದ್ದರು. ಅಂದು ನಾನು ಕ್ಯಾಂಪಸ್‌ನಲ್ಲಿ ಇರಲಿಲ್ಲವಾದ್ದರಿಂದ ಇದು ನನಗೆ ತಿಳಿದಿರಲಿಲ್ಲ. ಆದರೆ ಭಾಷಣದ ವಿಷಯವು ವಿವಾದಾಸ್ಪದವಾಗಿರುವುದರಿಂದ ನಾವು ಅದನ್ನು ನಂತರ ರದ್ದುಗೊಳಿಸಿದ್ದೇವೆ.” ಎಂದು ಅವರು ತಿಳಿಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಆಗಿರುವ ಜೋಯಾ ಅವರು ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಪತ್ರಿಕೆಯಲ್ಲಿ ಬರೆದ ಬರಹದ ನಂತರ ಗುರುಗ್ರಾಲ್ ಯುನಿವರ್ಸಿಟಿಯ ರಾಜ್ಯಶಾಸ್ತ್ರ ವಿಭಾಗವು ತನ್ನನ್ನು ಸಂಪರ್ಕಿಸಿತ್ತು ಎಂದು ಹೇಳಿದ್ದಾರೆ.
“ಪ್ಯಾಲೆಸ್ತೀನ್ ಸಂಘರ್ಷಕ್ಕೆ ಭಾರತದ ಪ್ರತಿಕ್ರಿಯೆಯ ಕುರಿತು ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಈ ಚರ್ಚೆಯನ್ನು ನಡೆಸುವುದು ಬಹಳ ಮುಖ್ಯ ಎಂದು ಅವರು ನನಗೆ ಹೇಳಿದ್ದರು. ಹಾಗಾಗಿ ನಾನು ಅದಕ್ಕೆ ತಕ್ಷಣ ಒಪ್ಪಿಕೊಂಡೆ” ಎಂದು ಜೋಯಾ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
“ಉಪನ್ಯಾಸ ಶೀರ್ಷಿಕೆಯ ಬಗ್ಗೆ ವಿಚಾರಿಸಲು ನವೆಂಬರ್ 5 ರಂದು ಸಂಘಟಕರು ಮತ್ತೆ ನನಗೆ ಕರೆ ಮಾಡಿದ್ದರು. ಅಂದು ಅವರು ನವೆಂಬರ್ 12 ರಂದು ನಿಗದಿಯಾಗಿದ್ದ ಕಾರ್ಯಕ್ರಮದ ಸಾರಿಗೆ ಸೇರಿದಂತೆ ಭಾಷಣದ ವ್ಯವಸ್ಥೆಯನ್ನು ಖಚಿತಪಡಿಸಿದ್ದರು” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅದೇ ವೇಳೆ ಅವರು ಕಾರ್ಯಕ್ರಮಕ್ಕೆ ಅನುಮೋದನೆ ಪಡೆದಿದ್ದಾರೆ ಎಂದು ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.
ಅದಾಗ್ಯೂ, ನವೆಂಬರ್ 10 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಯೋಜಕರಿಗೆ ಆರೋಗ್ಯ ಸರಿಯಾಗಿಲ್ಲ ಎಂದು ತಿಳಿಸಲಾಯಿತು. “ಆರೋಗ್ಯದ ಸಮಸ್ಯೆಯಾಗಿದ್ದರೆ, ನೀವು ಮೊದಲೇ ಏರ್ಪಡಿಸಿದ ಈವೆಂಟ್ ಅನ್ನು ರದ್ದುಗೊಳಿಸುವುದು ಯಾಕೆ? ಅವರು ಪ್ಯಾಲೆಸ್ಟೈನ್ ಕುರಿತು ಭಾಷಣವನ್ನು ನಡೆಸಲು ಆಸಕ್ತಿ ಹೊಂದಿದ್ದರು ಎಂಬುದು ಅಧ್ಯಾಪಕರ ಹೇಳಿಕೆಯಾಗಿದೆ, ಆದರೂ ಅಂತಿಮವಾಗಿ ಅದು ನಡೆಯಲಿಲ್ಲ” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪಶ್ಚಿಮ ಏಷ್ಯಾದ ಅಧ್ಯಯನಗಳ ಕೇಂದ್ರದಲ್ಲಿ ಭಾರತ, ಇರಾನ್, ಪ್ಯಾಲೇಸ್ಟಿನಿಯನ್ ಮತ್ತು ಲೆಬನಾನಿನ ರಾಯಭಾರಿಗಳನ್ನು ಒಳಗೊಂಡ ಮೂರು ಸೆಮಿನಾರ್‌ಗಳನ್ನು ರದ್ದುಗೊಳಿಸಲಾಗಿತ್ತು.
ಅಕ್ಟೋಬರ್ 7, 2023 ರಂದು ಪ್ರಾರಂಭವಾದ ಗಾಜಾ ವಿರುದ್ಧದ ಇಸ್ರೇಲ್‌ನ ಮಿಲಿಟರಿ ಆಕ್ರಮಣದ ಹಿನ್ನೆಲೆಯಲ್ಲಿ ಇದು ನಡೆದಿದೆ. 2023ರ ಅಕ್ಟೋಬರ್‌ನಿಂದ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳಿಂದ 16,500 ಮಕ್ಕಳು ಸೇರಿದಂತೆ 40,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ‘ಮುರಿದ ಮೂಳೆಗಳು, ದೇಹದಿಂದ ಬೇರ್ಪಟ್ಟ ತಲೆಬುರುಡೆ..’; ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟ ಮಹಿಳೆಯ ಶವಪರೀಕ್ಷೆ ವರದಿ ಬಹಿರಂಗ


