ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಜೊತೆಗೆ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಕಾರ್ಯದಕ್ಷತಾ ಇಲಾಖೆ (ಡಿಒಜಿಒ)ಯ ಉಸ್ತುವಾರಿಯಾಗಿ ನಾಮನಿರ್ದೇಶನಗೊಂಡಿರುವ ಭಾರತ ಮೂಲದ ಉದ್ಯಮಿ ಹಾಗೂ ರಾಜಕಾರಣಿ ವಿವೇಕ್ ರಾಮಸ್ವಾಮಿ ಯುಎಸ್ ಸರ್ಕಾರಿ ಉದ್ಯೋಗಗಳಲ್ಲಿ ಭಾರೀ ಕಡಿತದ ಮುನ್ಸೂಚನೆ ನೀಡಿದ್ದಾರೆ.
ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಗುರುವಾರ (ನ.16) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿವೇಕ್ ರಾಮಸ್ವಾಮಿ, “ಎಲೋನ್ ಮಸ್ಕ್ ಮತ್ತು ನಾನು ಲಕ್ಷಾಂತರ ಚುನಾಯಿತ ಫೆಡರಲ್ ಅಧಿಕಾರಶಾಹಿಗಳನ್ನು ವಾಷಿಂಗ್ಟನ್ ಡಿಸಿ ಅಧಿಕಾರಶಾಹಿಯಿಂದ ತೆಗೆದು ಹಾಕಲು ಸಿದ್ಧರಿದ್ದೇವೆ. ಈ ರೀತಿ ನಾವು ಈ ದೇಶವನ್ನು ಉಳಿಸುತ್ತೇವೆ” ಎಂದು ನೇರವಾಗಿ ಹೇಳಿದ್ದಾರೆ.
ಅಧಿಕಾರಶಾಹಿಯನ್ನು ನಿಭಾಯಿಸಲು ಮಸ್ಕ್‌ನ ವಿಧಾನವನ್ನು ವಿವರಿಸಿದ ರಾಮಸ್ವಾಮಿ, “ನೀವು ಇನ್ನೂ ಎಲೋನ್ ಅವರನ್ನು ಭೇಟಿ ಮಾಡಿದ್ದೀರೋ..ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ, ಅವರು ‘ಉಳಿ ತರುವುದಿಲ್ಲ..ಗರಗಸ’ ತರಲಿದ್ದಾರೆ (ನಿಧಾನವಲ್ಲ, ತ್ವರಿತ ಕಡಿತ) ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ವಿವೇಕ್ ರಾಮಸ್ವಾಮಿ ಅಮೆರಿಕದ ನವೀಕರಣ ಸಾಮರ್ಥ್ಯದ ಬಗ್ಗೆ ತಮ್ಮ ನಂಬಿಕೆಯನ್ನು ಒತ್ತಿ ಹೇಳಿದ್ದು, ದೇಶವು ಬದಲಾಯಿಸಲಾಗದ ಅವನತಿಯಲ್ಲಿದೆ ಎಂಬ ಕಲ್ಪನೆಯನ್ನು ತಿರಸ್ಕರಿಸಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ನಾವು ಮುಂದುವರೆದಿದ್ದೇವೆ. ಅಮೆರಿಕ ಇನ್ನೂ ಮುಂದುವರಿಯಲಿದೆ ಎಂದಿದ್ದಾರೆ.
ದೇಶದ ಭವಿಷ್ಯವನ್ನು ‘ಹೊಸ ಉದಯ’ ಎಂದು ಬಣ್ಣಿಸಿದ ಸ್ವಾಮಿ, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಅರ್ಹತೆಯ ಮೂಲಕ ಯಶಸ್ವಿಯಾಗುತ್ತೇವೆ ಎಂದು ತಿಳಿದು ನಮ್ಮ ಮಕ್ಕಳು ಮುನ್ನಡೆಯಲಿದ್ದಾರೆ. ನಿಮಗೆ ಅನಿಸಿದ್ದನ್ನು ಮಾತನಾಡಲು ನೀವು ಮುಕ್ತರಾಗಿರುತ್ತೀರಿ. ಉತ್ತಮ ವ್ಯಕ್ತಿಗೆ ಅವರ ಹಿನ್ನೆಲೆಯ ಹೊರತಾಗಿಯೂ ಕೆಲಸ ಸಿಗಲಿದೆ ಎಂದು ಹೇಳಿದ್ದಾರೆ.
ಸರ್ಕಾರ ಮತ್ತು ಜನರ ನಡುವಿನ ಅಂತವನ್ನು ಕಡಿಮೆ ಮಾಡಲು ದಕ್ಷತೆ ಇಲಾಖೆಯ ಪ್ರಗತಿಯ ಕುರಿತು ಪ್ರತಿ ವಾರ ನಾನು ಮತ್ತು ಎಲೋನ್ ಲೈವ್ ಬಂದು ಮಾತನಾಡುತ್ತೇವೆ. ಜನರೊಂದಿಗೆ ಸಾಧ್ಯವಾದಷ್ಟು ಪಾರದರ್ಶಕವಾಗಿರಲು ಪ್ರಯತ್ನಿಸುತ್ತೇವೆ ಎಂದು ರಾಮಸ್ವಾಮಿ ಭರವಸೆ ನೀಡಿದ್ದಾರೆ.
ವಿವೇಕ್ ರಾಮಸ್ವಾಮಿಯ ಈ ಹೇಳಿಕೆ ಸಂಚಲನ ಸೃಷ್ಟಿಸಿದ್ದು, ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕಾರಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಭಾರತೀಯ ಉದ್ಯೋಗಳಲ್ಲೂ ಆತಂಕ ಉಂಟು ಮಾಡಿದೆ ಎಂದು ವರದಿಗಳು ಹೇಳಿವೆ.
ಎಲೋನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಉಸ್ತುವಾರಿ ವಹಿಸಲಿರುವ ಡಿಒಜಿಒ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಲಿದೆ. ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಗೆ ಚಾಲನೆ ನೀಡಲು, ಸರ್ಕಾರಕ್ಕೆ ಉದ್ಯಮಶೀಲತೆಯ ವಿಧಾನವನ್ನು ರಚಿಸಲು ವೈಟ್ ಹೌಸ್, ಆಫೀಸ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಬಜೆಟ್‌ನೊಂದಿಗೆ ಕೆಲಸ ಮಾಡಲಿದೆ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ : COP29 | ಅಭಿವೃದ್ದಿ ಹೊಂದಿದ ದೇಶಗಳು ‘ಹೂಡಿಕೆಯ ಗುರಿ’ ನೋಡಬಾರದು : ಭಾರತ ಅಭಿಪ್ರಾಯ


