ಗುಂಡೇಟಿಗೊಳಗಾಗಿ ಮೃತಪಟ್ಟ ವ್ಯಕ್ತಿಯ ಶವ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಾಗಲೆ ಒಂದು ಕಣ್ಣು ಕಾಣೆಯಾಗಿರುವ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಂಭವಿಸಿದೆ. ವ್ಯಕ್ತಿಯು ಮೃತಪಟ್ಟ ಕೆಲವೆ ಗಂಟೆಗಳಲ್ಲಿ ಇದು ನಡೆದಿದ್ದು, ಮೃತ ಶರೀರದಿಂದ ಇಲಿಗಳು ಕಚ್ಚಿ ತೆಗೆದಿದೆ ಎಂದು ವೈದ್ಯರು ದೂಷಿಸಿದ್ದಾಗಿ ಹೇಳಿದ್ದು, ಕುಟುಂಬ ಸದಸ್ಯರು ವೈದ್ಯರ ನಿರ್ಲಕ್ಷ್ಯ ಎಂದು ಹೇಳಿದ್ದಾರೆ. ಬಿಹಾರ
ನವೆಂಬರ್ 15 ರಂದು ಅಪರಿಚಿತ ದುಷ್ಕರ್ಮಿಗಳಿಂದ ಗುಂಡೇಟಿಗೊಳಗಾಗಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (NMCH) ದಾಖಲಾಗಿದ್ದ ಫಂತುಷ್ ಕುಮಾರ್ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದರು. ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಅವರ ಶವವನ್ನು ಐಸಿಯು ಬೆಡ್ ಮೇಲೆ ಇಡಲಾಗಿತ್ತು. ಶನಿವಾರ ಬೆಳಗ್ಗೆ ಶವ ಪರೀಕ್ಷೆ ನಡೆಸಲಾಗಿತ್ತು. ಬಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದರೆ ಮೃತದೇಹವನ್ನು ಶವಾಗಾರದಿಂದ ತರುತ್ತಿದ್ದಾಗ ಎಡಗಣ್ಣು ಕಾಣೆಯಾಗಿದ್ದು, ಶವದ ಪಕ್ಕದಲ್ಲಿ ಸ್ಟ್ರೆಚರ್ ಮೇಲೆ ಸರ್ಜಿಕಲ್ ಬ್ಲೇಡ್ ಬಿದ್ದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದು, ಕೆಲವು ವೈದ್ಯರು ಇಲಿಗಳು ಕಣ್ಣನ್ನು ಕಚ್ಚಿರಬಹುದು ಎಂದು ಶಂಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಎಂಸಿಎಚ್ ವೈದ್ಯಕೀಯ ಅಧೀಕ್ಷಕ ಬಿನೋದ್ ಕುಮಾರ್ ಸಿಂಗ್, ಈ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ತಂಡವನ್ನು ರಚಿಸಲಾಗಿದೆ, ಇದು ಗಂಭೀರ ಸಮಸ್ಯೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
“ವೈದ್ಯರ ಗುಂಪು ಇಲಿಗಳು ಕಣ್ಣನ್ನು ಕಚ್ಚಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದೆ. ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ” ಎಂದು ಅವರು ಹೇಳಿದರು.
“ಕಣ್ಣು ಹೇಗೆ ಹೋಗಿದೆ ಎಂಬುದು ಶವಪರೀಕ್ಷೆ ವರದಿ ಬಂದ ನಂತರವಷ್ಟೇ ತಿಳಿಯಬಹುದು. ಈ ಬಗ್ಗೆ ಆಸ್ಪತ್ರೆ ಆಡಳಿತವು ಅಲಂಗಂಜ್ ಪೊಲೀಸ್ ಠಾಣೆಗೆ ಔಪಚಾರಿಕ ದೂರು ಸಲ್ಲಿಸಿದೆ” ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.
ಭಾನುವಾರ ಪಿಟಿಐ ಜೊತೆ ಮಾತನಾಡಿದ ಅಲಂಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೀವ್ ಕುಮಾರ್, “ಆಸ್ಪತ್ರೆ ಆಡಳಿತ ಮಂಡಳಿ ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಾವು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಜೊತೆಗೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಸ್ಪಷ್ಟೀಕರಣವನ್ನು ಕೋರಿದ್ದೇವೆ. ನಾವು ಮೃತರ ಕುಟುಂಬ ಸದಸ್ಯರನ್ನು ಮತ್ತು ಇತರ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಮೃತರ ಕುಟುಂಬಸ್ಥರು ಇದುವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಚುನಾವಣೆ ಹೊತ್ತಿನಲ್ಲಿ ‘ಎಎಪಿ’ಗೆ ಭಾರೀ ಹಿನ್ನಡೆ; ಪಕ್ಷ ತೊರೆದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್
ಚುನಾವಣೆ ಹೊತ್ತಿನಲ್ಲಿ ‘ಎಎಪಿ’ಗೆ ಭಾರೀ ಹಿನ್ನಡೆ; ಪಕ್ಷ ತೊರೆದ ದೆಹಲಿ ಸಚಿವ ಕೈಲಾಶ್ ಗಹ್ಲೋಟ್


