ಗುಜರಾತ್‌ನಲ್ಲಿ ನಕಲಿ ವೈದ್ಯರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಉದ್ಘಾಟನೆಗೊಂಡ ಮರುದಿನವೇ ಸರ್ಕಾರದ ಮುಚ್ಚಿಸಿದೆ.
ನಕಲಿ ವೈದ್ಯರ ಗುಂಪು ಸೂರತ್‌ನಲ್ಲಿ ಪೂರ್ಣ ಪ್ರಮಾಣದ ಆಸ್ಪತ್ರೆಯನ್ನು ತೆರೆದು, ಅದರ ಉದ್ಘಾಟನೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ಪ್ರಮುಖ ಅತಿಥಿಗಳಾಗಿ ಆಹ್ವಾನ ಪತ್ರದಲ್ಲಿ ಹೆಸರಿಸಿತ್ತು. ಆದರೆ, ನಕಲಿ ವೈದ್ಯರ ಅಸಲಿಯತ್ತು ಬೆಳಕಿಗೆ ಬರುತ್ತಿದ್ದಂತೆ, ಉದ್ಘಾಟನೆಗೊಂಡ ಒಂದೇ ದಿನದಲ್ಲಿ ಆಸ್ಪತ್ರೆಯನ್ನು ಸರ್ಕಾರ ಮುಚ್ಚಿಸಿದೆ.
ಆಸ್ಪತ್ರೆಯ ಐದು ಸಹ-ಸಂಸ್ಥಾಪಕರಲ್ಲಿ ಕನಿಷ್ಠ ಇಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇತರ ಮೂವರು ಸಹ-ಸಂಸ್ಥಾಪಕರು ಹೊಂದಿರುವ ವೈದ್ಯಕೀಯ ಪದವಿಗಳ ಬಗ್ಗೆಯೂ ಅನುಮಾನಗಳಿದ್ದು, ಈ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸೂರತ್‌ನ ಪಾಂಡೆಸರಾ ಪ್ರದೇಶದಲ್ಲಿ ಜನಸೇವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಭಾನುವಾರ (ನ.17) ರಂದು ಉದ್ಘಾಟಿಸಲಾಗಿತ್ತು. “ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿರುವ ಆಯುರ್ವೇದ ವೈದ್ಯಕೀಯ ಪದವಿ ಹೊಂದಿರುವ ವೈದ್ಯ ಎಂದು ಪರಿಚಯಿಸಲಾದ ಬಿಆರ್ ಶುಕ್ಲಾನ ವಿರುದ್ಧ ಗುಜರಾತ್ ವೈದ್ಯಕೀಯ ವೈದ್ಯರ ಕಾಯ್ದೆಯಡಿ ಪ್ರಕರಣವಿದೆ. ಆತ ನಕಲಿ ವೈದ್ಯನಾಗಿದ್ದಾನೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಗುರ್ಜರ್ ಹೇಳಿದ್ದಾರೆ.
ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ಪದವಿ ಪಡೆದಿರುವುದಾಗಿ ಹೇಳಿಕೊಳ್ಳುವ ಮತ್ತೊಬ್ಬ ಸಹ-ಸಂಸ್ಥಾಪಕ ಆರ್‌ಕೆ ದುಬೆ ಕೂಡಾ ವೈದ್ಯಕೀಯ ವೃತ್ತಿಗಾರರ ಕಾಯ್ದೆಯಡಿ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ವಿಜಯ್ ಸಿಂಗ್ ತಿಳಿಸಿದ್ದಾರೆ.
“ಇವರಿಬ್ಬರು ನಕಲಿ ಪದವಿಗಳನ್ನು ಹೊಂದಿದ್ದಾರೆ. ಮತ್ತೊಬ್ಬ ಸಹ-ಸಂಸ್ಥಾಪಕ ಜಿಪಿ ಮಿಶ್ರಾ ಅವರು ನಿಷೇಧ ಕಾಯ್ದೆಯಡಿ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ಪದವಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ನಾವು ಆಹ್ವಾನದಲ್ಲಿರುವ ಇತರ ಎರಡು ಹೆಸರುಗಳ ಪದವಿಗಳನ್ನೂ ಪರಿಶೀಲಿಸುತ್ತಿದ್ದೇವೆ” ಎಂದು ವಿಜಯ್ ಸಿಂಗ್ ಗುರ್ಜರ್ ವಿವರಿಸಿದ್ದಾರೆ.
ಸೂರತ್ ಮುನ್ಸಿಪಲ್ ಕಮಿಷನರ್ ಶಾಲಿನಿ ಅಗರ್ವಾಲ್, ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗಹ್ಲೌತ್ ಮತ್ತು ಜಂಟಿ ಪೊಲೀಸ್ ಕಮಿಷನರ್ ರಾಘವೇಂದ್ರ ವತ್ಸಾ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರುಗಳು ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿದ್ದವು. ಆದರೆ, ಅಂತಹ ಯಾವುದೇ ಆಹ್ವಾನದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅವರು ಯಾರೂ ಕಾರ್ಯಕ್ರಮಕ್ಕೆ ಹೋಗಿಲ್ಲ.
ಪ್ರಸ್ತುತ ಆಸ್ಪತ್ರೆ ಆವರಣವನ್ನು ಸೀಲ್ ಮಾಡಲಾಗಿದೆ. ಇತರ ಸಹ-ಸಂಸ್ಥಾಪಕರ ಪದವಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ ಚುನಾವಣೆ | ಹಣ ಹಂಚುವಾಗ ಸಿಕ್ಕಿಬಿದ್ದ ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ವಿನೋದ್ ತಾವ್ಡೆ : ಆರೋಪ


