ಉಪರಾಷ್ಟ್ರಪತಿ, ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕೋರ್ಟ್‌ಗೆ ರಾಜ್ಯಸಭೆಯಿಂದ ಡಾ.ಕೆ. ಲಕ್ಷ್ಮಣ್, ಡಾ. ಸುಮರ್ ಸಿಂಗ್ ಸೋಲಂಕಿ ಮತ್ತು ಡಾ. ಅನಿಲ್ ಸುಖದೇರಾವ್ ಬೋಂಡೆ ಸೇರಿದಂತೆ ಮೂವರು ಬಿಜೆಪಿ ಸಂಸದರನ್ನು ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ.
ಜೆಎನ್‌ಯು ಕೋರ್ಟ್ ವಿಶ್ವವಿದ್ಯಾನಿಲಯದ ಸರ್ವೋಚ್ಚ ಪ್ರಾಧಿಕಾರವಾಗಿದ್ದು, ಅದು ಕಾರ್ಯಕಾರಿ ಮಂಡಳಿ ಮತ್ತು ಅಕಾಡೆಮಿಕ್ ಕೌನ್ಸಿಲ್‌ನ ಕ್ರಮಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆ. ವಾರ್ಷಿಕವಾಗಿ ಸಭೆ ಸೇರುವ ಈ ಕೋರ್ಟ್ ವಿಶ್ವವಿದ್ಯಾನಿಲಯದ ವಾರ್ಷಿಕ ವರದಿ, ಲೆಕ್ಕಪತ್ರಗಳು, ಆಡಿಟ್ ವರದಿ ಮತ್ತು ಬಜೆಟ್ ಅನ್ನು ಪರಿಗಣಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಾ. ಲಕ್ಷ್ಮಣ್ ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಲ್ಲಿ ಒಬ್ಬರು. ಅಷ್ಟೆ ಅಲ್ಲದೆ, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷದ ಮುಂಬರುವ ಸಾಂಸ್ಥಿಕ ಚುನಾವಣೆಯ ರಾಷ್ಟ್ರೀಯ ಚುನಾವಣಾಧಿಕಾರಿಯಾಗಿ ಲಕ್ಷ್ಮಣ್ ಅವರನ್ನು ನೇಮಿಸಲಾಗಿದೆ.
ಡಾ. ಸುಮೇರ್ ಸಿಂಗ್ ಸೋಲಂಕಿ ಅವರು ಮಧ್ಯಪ್ರದೇಶದ ಸಂಸದರಾಗಿದ್ದು, ಅವರು ಈ ಹಿಂದೆ ಬರ್ವಾನಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಇತಿಹಾಸ) ಕೆಲಸ ಮಾಡಿದ್ದರು. ಅವರು ಆರೆಸ್ಸೆಸ್‌ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಕೂಡಾ ಹೇಳಲಾಗುತ್ತದೆ.
ಮಹಾರಾಷ್ಟ್ರದವರಾಗಿರುವ ಡಾ. ಅನಿಲ್ ಸುಖದೇವರಾವ್ ಬೋಂಡೆ ಅವರು ವೈದ್ಯಕೀಯ ವೃತ್ತಿಪರರಾಗಿದ್ದು, ಪ್ರಸ್ತುತ ರಾಜಕೀಯಕ್ಕೆ ಇಳಿದಿದ್ದಾರೆ. ಸಂಸತ್ತಿನ ಕಳೆದ ಅಧಿವೇಶನದಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ದೂರವಿಡುವಂತೆ ಅವರು ಧ್ವನಿ ಎತ್ತಿದ್ದರು.
ಜೆಎನ್‌ಯು ಕೋರ್ಟ್ ಸಭೆಯು ಅದರ ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಜೆಎನ್‌ಯು ಕೋರ್ಟ್ ಕಾರ್ಯಕಾರಿ ಮಂಡಳಿಯ ಸದಸ್ಯರು, ರೆಕ್ಟರ್, ವಿದ್ಯಾರ್ಥಿಗಳ ಡೀನ್‌ಗಳು, ಮುಖ್ಯ ರಕ್ಷಕ ಹಣಕಾಸು ಅಧಿಕಾರಿ, ವಿಶ್ವವಿದ್ಯಾಲಯದ ಗ್ರಂಥಪಾಲಕರು, ಹಿರಿಯ ವಾರ್ಡನ್‌ಗಳು ಮತ್ತು ಸಂಸತ್ತಿನ ಹತ್ತು ಪ್ರತಿನಿಧಿಗಳನ್ನು ಒಳಗೊಂಡಿದೆ.
ಸಂಸತ್ತಿನ ಪ್ರತಿನಿಧಿಗಳಲ್ಲಿ ಲೋಕಸಭೆಯ ಸ್ಪೀಕರ್ ನಾಮನಿರ್ದೇಶನ ಮಾಡಿದ ಆರು ಸದಸ್ಯರು ಮತ್ತು ರಾಜ್ಯಸಭೆಯ ಸ್ಪೀಕರ್ ನಾಮನಿರ್ದೇಶನ ಮಾಡಿದ ನಾಲ್ಕು ಸದಸ್ಯರು ಸೇರಿದ್ದಾರೆ. ಅಲ್ಲದೆ, ಉಪಕುಲಪತಿಯಿಂದ ನಾಮನಿರ್ದೇಶನಗೊಂಡ ಪ್ರತಿ ಮಾನ್ಯತೆ ಪಡೆದ ಸಂಸ್ಥೆಗಳ ಪ್ರತಿನಿಧಿಯೂ ಸಹ ಈ ಕೋರ್ಟ್‌ನ ಸದಸ್ಯರಾಗಿ ಉಳಿಯುತ್ತಾರೆ.
ಹೊಸ ನಾಮನಿರ್ದೇಶನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ, ”ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇದು ನಿರೀಕ್ಷಿತ ನಡೆಯಾಗಿದೆ. ಆದರೆ, ಜೆಎನ್‌ಯುವಿನಲ್ಲಿ ನಡೆಯುತ್ತಿದ್ದ ವಿದ್ವತ್‌ಪೂರ್ಣ ಚರ್ಚೆಗಳು, ಅಕಾಡೆಮಿಕ್ ಚರ್ಚೆಗಳು ಈಗ ನಡೆಯುತ್ತಿಲ್ಲ. ಈಗ ಏನಿದ್ದರೂ, ಗುರುಪೂಜೆ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಅಲ್ಲಿ ಬೆಲೆ. ಒಂದು ವಿಶ್ವವಿದ್ಯಾನಿಲಯವನ್ನು ಹಾಳುಗೆಡವಲು ಏನು ಮಾಡಬೇಕೊ ಅದನ್ನು ಬಿಜೆಪಿ ಮಾಡುತ್ತಲೆ ಬಂದಿದೆ. ಆದರೆ, ಭಾರತೀಯ ಇತಿಹಾಸದಲ್ಲಿ ಇದು ಒಂದು ಹಂತ ಅಷ್ಟೆ. ಆದರೆ, ಇದು ಹೀಗೆಯೆ ಇರುವುದಿಲ್ಲ, ಮುಂದೊಂದು ದಿನ ಇವೆಲ್ಲಾ ಇಲ್ಲವಾಗಿ ಎಲ್ಲವೂ ಸರಿಯಾಗುತ್ತದೆ ಎಂಬ ಆಶಾವಾದವಿದೆ” ಎಂದು ಹೇಳಿದರು.
ಇದನ್ನೂ ಓದಿ: ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ
ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ


