ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ 55 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವುವಂತೆ ಆಗ್ರಹಿಸಿ ಬಿಜೆಪಿ ಪರ ಸಂಘಟನೆಗಳು ನಡೆಸುತ್ತಿರುವ ಕೃತ್ಯದಿಂದ ಬೇಸತ್ತು ಮಸೀದಿಯ ಮಂಡಳಿಯು ನೈನಿತಾಲ್ ಹೈಕೋರ್ಟ್ ಮಟ್ಟಿಲೇರಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಮತ್ತು ನ್ಯಾಯಮೂರ್ತಿ ರಾಕೇಶ್ ಥಪ್ಲಿಯಾಲ್ ಅವರಿದ್ದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದೆ. ಉತ್ತರಾಖಂಡ
ವಿಚಾರಣೆಯ ನಂತರ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನಗಳನ್ನು ನೀಡಿದ್ದು, ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿಹೇಳಿದೆ. ಉತ್ತರಾಖಂಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶುಕ್ರವಾರ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲರಾದ ಡಾ. ಕಾರ್ತಿಕೇ ಹರಿ ಗುಪ್ತಾ, ಇಮ್ರಾನ್ ಅಲಿ ಖಾನ್, ಪಲ್ಲವಿ ಬಹುಗುಣ, ರಫತ್ ಮುನೀರ್ ಅಲಿ ಮತ್ತು ಇರುಮ್ ಝೆಬಾ ಅವರು ಮುಸ್ಲಿಮರನ್ನು ಉದ್ದೇಶಿಸಿ ನಡೆಸಲಾಗುತ್ತಿರುವ ದ್ವೇಷ ಭಾಷಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
“ಸಂಯುಕ್ತ ಸನಾತನ ಧರಮ್ ರಕ್ಷಾ ಸಂಘದ ಸದಸ್ಯರು ಮತ್ತು ಅವರ ಸಹಚರರು ಮುಸ್ಲಿಮರು ಮತ್ತು ಮಸೀದಿಯ ವಿರುದ್ಧ ತೀವ್ರವಾದ ದ್ವೇಷದ ಭಾಷಣದಲ್ಲಿ ತೊಡಗಿದ್ದಾರೆ” ಎಂದು ಅವರು ವಾದಿಸಿದ್ದಾರೆ. ಇಂತಹ ಕ್ರಮಗಳು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸುತ್ತವೆ ಎಂದು ಒತ್ತಿ ಹೇಳಿದ್ದಾರೆ.
‘ಉತ್ತರಕಾಶಿಯ ಭಟ್ವಾರಿ ರಸ್ತೆಯಲ್ಲಿರುವ ಜಾಮಾ ಮಸೀದಿಯನ್ನು 1969ರಲ್ಲಿ ಖಾಸಗಿಯಾಗಿ ಖರೀದಿಸಿದ ಜಮೀನಿನಲ್ಲಿ ನಿರ್ಮಿಸಲಾಗಿದೆ’ ಎಂದು ಪ್ರತಿಪಾದಿಸಿ ‘ಅಲ್ಪಸಂಖಾಯಕ್ ಸೇವಾ ಸಮಿತಿ’ ರಿಟ್ ಅರ್ಜಿ ಸಲ್ಲಿಸಿದೆ. 1986 ರಲ್ಲಿ ಉತ್ತರ ಪ್ರದೇಶದ ಸಹಾಯಕ ವಕ್ಫ್ ಕಮಿಷನರ್ ವಿಚಾರಣೆ ನಡೆಸಿ ಮುಸ್ಲಿಂ ಸಮುದಾಯದ ಸದಸ್ಯರು ಧರ್ಮಾರ್ಥ ನಿಧಿಯನ್ನು ಬಳಸಿ ನಿರ್ಮಿಸಿದ ಖಾಸ್ರಾ ನಂ. 2223 ರಲ್ಲಿ ಮಸೀದಿ ಅಸ್ತಿತ್ವದಲ್ಲಿದೆ ಎಂದು ದೃಢಪಡಿಸಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೆಚ್ಚುವರಿಯಾಗಿ, ವಕ್ಫ್ ಆಯುಕ್ತರ ವರದಿಯು “ಮಸೀದಿಯನ್ನು ಸುನ್ನಿ ಸಮುದಾಯವು ಸಕ್ರಿಯವಾಗಿ ಬಳಸುತ್ತದೆ” ಎಂದು ಪ್ರಮಾಣೀಕರಿಸಿದೆ ಅರ್ಜಿದಾರರು ಕೋರ್ಟ್‌ಗೆ ತಿಳಿಸಿದ್ದಾರೆ.
“1987 ರಲ್ಲಿ, ಭಟ್ವಾರಿ ರಸ್ತೆಯಲ್ಲಿರುವ ಜಾಮಾ ಮಸೀದಿಯನ್ನು ಅಧಿಕೃತವಾಗಿ ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಯಿತು. ಆದರೆ, ಸೆಪ್ಟೆಂಬರ್ 2024 ರಲ್ಲಿ, ಬಿಜೆಪಿ ಬೆಂಬಲಿತ ಸಂಘಟನೆಯ ನಾಯಕರಾದ ಜಿತೇಂದ್ರ ಸಿಂಗ್ ಚೌಹಾಣ್, ಸ್ವಾಮಿ ದರ್ಶನ್ ಭಾರತಿ, ಸೋನು ಸಿಂಗ್ ನೇಗಿ, ಲಖ್ಪತ್ ಸಿಂಗ್ ಭಂಡಾರಿ ಮತ್ತು ಅನುಜ್ ವಾಲಿಯಾ ಸೇರಿದಂತೆ ಸಂಯುಕ್ತ ಸನಾತನ ಧರ್ಮ ರಕ್ಷಾ ಸಂಘದ ಸದಸ್ಯರು ಮತ್ತು ವಿಶ್ವ ಹಿಂದೂ ಪರಿಷತ್, ಮಸೀದಿ ಕೆಡವುವುದಾಗಿ ಬೆದರಿಕೆ ಹಾಕಲು ಆರಂಭಿಸಿತು” ಎಂದು ಅರ್ಜಿದಾದರರು ಕೋರ್ಟ್‌ಗೆ ಹೇಳಿದ್ದಾರೆ.
ಈ ನಾಯಕರು ಮಸೀದಿಯ ಕಾನೂನುಬದ್ಧತೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾಷಣದಲ್ಲಿ ತೊಡಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ವರುಣಾವತ್ ಪರ್ವತದ ಬುಡದಲ್ಲಿರುವ ಮಸೀದಿಯನ್ನು ಕೆಡವಲು ಒತ್ತಾಯಿಸುತ್ತಿರುವ ಸಂಯುಕ್ತ ಸನಾತನ ಧರ್ಮ ರಕ್ಷಣಾ ಸಂಘದ ನೇತೃತ್ವದಲ್ಲಿ ವ್ಯಾಪಕ ಅಭಿಯಾನ ನಡೆಸಲಾಗುತ್ತಿದೆ. ಆರೆಸ್ಸೆಸ್‌ನ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಹ ಡಿಸೆಂಬರ್ 1 ರಂದು ತಮ್ಮ ಹೋರಾಟಕ್ಕೆ ಬೆಂಬಲವಾಗಿ ಮಹಾಪಂಚಾಯತ್ ನಡೆಸುವ ಯೋಜನೆಯನ್ನು ಪ್ರಕಟಿಸಿದೆ.
ಬಿಜೆಪಿ ಪರ ಸಂಘಟನೆಗಳು ಕೃತ್ಯಗಳ ಕಾರಣಕ್ಕೆ ಪ್ರದೇಶದಲ್ಲಿ ಈಗಾಗಲೇ ಹಿಂಸಾಚಾರ ನಡೆದಿದ್ದು, ಅಕ್ಟೋಬರ್ 24 ರಂದು, ಉದ್ವಿಗ್ನತೆ ಭುಗಿಲೆದ್ದಿತ್ತು. ಈ ವೇಳೆ ಕಲ್ಲು ತೂರಾಟ ನಡೆಸಲಾಗಿದ್ದು, ಪೋಲೀಸರು ಲಾಠಿ ಚಾರ್ಜ್ ಮಾಡಿದ್ದರು. ಘಟನೆಯಲ್ಲಿ ಒಂಬತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ. ಘಟನೆಗೆ ಪ್ರತಿಕ್ರಿಯೆಯಾಗಿ, ಪೊಲೀಸರು 200 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಎಂಟು ಶಂಕಿತರನ್ನು ಹೆಸರಿಸಿದ್ದಾರೆ. ಮೂವರು ಪ್ರಮುಖ ಸಂಘಟಕರನ್ನು ಬಂಧಿಸಲಾಗಿದ್ದರೂ, ಅವರು ನಂತರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
ಇದನ್ನೂ ಓದಿ: ಲೂಟಿಯಾದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವಂತೆ ಕುಕಿ ಶಾಸಕರ ಒತ್ತಾಯ; ಮಣಿಪುರದಾದ್ಯಂತ ‘ಎಎಫ್‌ಎಸ್‌ಪಿಎ’ ವಿಸ್ತರಣೆಗೆ ಆಗ್ರಹ


