ಬಹು ನಿರೀಕ್ಷಿತ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳ ಫಲಿತಾಂಶ ಇಂದು (ನ.23) ಪ್ರಕಟಗೊಳ್ಳಲಿದೆ. ಕರ್ನಾಟಕದ ಮೂರು ಕ್ಷೇತ್ರಗಳಾದ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣದ ಉಪಚುನಾವಣೆಯ ಮತ ಎಣಿಕೆಯೂ ಇಂದೇ ನಡೆಯಲಿದೆ.
ಈಗಾಗಲೇ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮತಗಳನ್ನು ಎಣಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಆಡಳಿತರೂಢ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟ ‘ಮಹಾಯುತಿ’ ಮತ್ತೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕೂಡ ಮಹಾಯುತಿಗೆ ಗೆಲುವಾಗಲಿದೆ ಎಂದಿವೆ.
ಮತ್ತೊಂದೆಡೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ ಶತಾಯಗತಾಯ ಅಧಿಕಾರಕ್ಕೇರುವ ತವಕದಲ್ಲಿದೆ.
ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಒಟ್ಟು 4,136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿ ಬಿಜೆಪಿ 149 ಸ್ಥಾನಗಳಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 81 ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) 59 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಪ್ರತಿಪಕ್ಷ ಬಣ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಶರದ್ ಪವಾರ್) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಜಾರ್ಖಂಡ್‌ನಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ಭರವಸೆಯಲ್ಲಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ರಾಜ್ಯವನ್ನು ತಮ್ಮ ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿದೆ.
ಇಲ್ಲಿ ಕೂಡ ಹೆಚ್ಚಿನ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ ಬಹುಮತ ಗಳಿಸುವುದಾಗಿ ಹೇಳಿವೆ.
ಜಾರ್ಖಂಡ್ ವಿಧಾನಸಭೆಯ ಒಟ್ಟು 81 ಸ್ಥಾನಗಳಿಗೆ 528 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆಡಳಿತರೂಢ ಇಂಡಿಯಾ ಮೈತ್ರಿಕೂಟದಿಂದ ಜೆಎಂಎಂ 43, ಕಾಂಗ್ರೆಸ್ 30, ಆರ್‌ಜೆಡಿ 6 ಮತ್ತು ಸಿಪಿಐ(ಎಂಎಲ್) 4 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಎನ್‌ಡಿಎ ಮೈತ್ರಿಕೂಟದಿಂದ ಬಿಜೆಪಿ 68, ಮಿತ್ರಪಕ್ಷಗಳಾದ ಎಜೆಎಸ್‌ಯು 10, ಜೆಡಿಯು 2 ಮತ್ತು ಲೋಕ ಜನಶಕ್ತಿ (ರಾಮ್ ವಿಲಾಸ್) ಒಂದರಲ್ಲಿ ಸ್ಪರ್ಧೆ ಮಾಡಿದೆ.
ರಾಜ್ಯದ ಮೂರು ಕ್ಷೇತ್ರಗಳ ಮತ ಎಣಿಕೆ ಇಂದು
ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಾದ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.
ಸಂಡೂರಿನಲ್ಲಿ ಕಾಂಗ್ರೆಸ್‌ನಿಂದ ಸಂಸದ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತ ಸ್ಪರ್ಧೆ ಮಾಡಿದ್ದಾರೆ.
ಶಿಗ್ಗಾವಿಯಲ್ಲಿ ಕಾಂಗ್ರೆಸ್‌ನಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತು ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಸಿ.ಪಿ ಯೋಗೇಶ್ವರ್ ಮತ್ತು ಎನ್‌ಡಿಎ (ಬಿಜೆಪಿ-ಜೆಡಿಎಸ್ ಮೈತ್ರಿ) ಅಭ್ಯರ್ಥಿಯಾಗಿ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಭವಿಷ್ಯ ಇಂದು ನಿರ್ಧಾರ
ರಾಹುಲ್ ಗಾಂಧಿಯಿಂದ ತೆರವಾಗಿರುವ ಕೇರಳದ ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಚೊಚ್ಚಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ – ದೆಹಲಿ ಗವರ್ನರ್ ಸಕ್ಸೇನಾ


