ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಮಹಾಯುತಿ ಭಾರಿ ಬಹುಮತದತ್ತ ಸಾಗುತ್ತಿದ್ದು, ವಿಪಕ್ಷಗಳ ಮೈತ್ರಿಯಾದ ಮಹಾ ವಿಕಾಸ್ ಅಘಾಡಿಗೆ ತೀವ್ರ ಅಘಾತವಾಗಿದೆ. ಒಟ್ಟು 288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯುತಿ ಮೈತ್ರಿಗೆ ಈ ವರೆಗೆ 224 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾವಿಕಾಸ್ ಅಘಾಡಿಗೆ ಕೇವಲ 60 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರ ಪಕ್ಷಗಳು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಶನಿವಾರ ಎಣಿಕೆ ಆರಂಭವಾಗುತ್ತಿದ್ದಂತೆ ಆಡಳಿತಾರೂಢ ಮಹಾಯುತಿ ಬಹುಮತದ 105 ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹಾಗೂ ಇರತ ಪಕ್ಷಗಳು ಇವೆ. ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಇತರ ಮಿತ್ರ ಪಕ್ಷಗಳು ಇವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈವರೆಗಿನ ಫಲಿತಾಂಶದಂತೆ ಬಿಜೆಪಿ ತಾನು ಸ್ಪರ್ಧಿಸಿದ್ದ 149 ಕ್ಷೇತ್ರಗಳಲ್ಲಿ 133 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆಯಲ್ಲಿದೆ. ಬಿಜೆಪಿ ರಾಜ್ಯದಲ್ಲಿ ಶಕ್ತಿ ಹೆಚ್ಚಿಸಿಕೊಂಡಿದ್ದು, 2019ರ ಚುನಾವಣೆಯಲ್ಲಿ ಪಕ್ಷವೂ 164 ಸ್ಥಾನಗಳಲ್ಲಿ ಸ್ಪರ್ಧಿಸಿ 105 ಕ್ಷೇತ್ರಗಳಲ್ಲಿ ಗೆದ್ದಿತ್ತು.
ಮಹಾಯುತಿ ಮೈತ್ರಿಯ ಶಿಂಧೆ ನೇತೃತ್ವದ ಶಿವಸೇನೆ 82 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು 50 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆಯಲ್ಲಿದೆ. ಅವಿಭಜಿತ ಶಿವಸೇನೆ 2019ರಲ್ಲಿ 126 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 56 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಆದರೆ, ಪಕ್ಷವೂ ಒಡೆದು ಶಿಂಧೆ ಬಣ ಬಿಜೆಪಿ ಜೊತೆಗೆ ಸೇರಿದ್ದರೆ, ಉದ್ಧವ್ ಠಾಕ್ರೆ ಬಣ ಕಾಂಗ್ರೆಸ್ ಜೊತೆಗೆ ಉಳಿದುಕೊಂಡಿತ್ತು.
ಮಹಾಯುತಿ ಮೈತ್ರಿಯಲ್ಲಿ ಇರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 37 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆಯಲ್ಲಿದೆ. 2019ರಲ್ಲಿ ಅವಿಭಜಿತ ಎನ್‌ಸಿಪಿ 121 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 54 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಆದರೆ ನಂತರ, ಪಕ್ಷವೂ ಒಡೆದು ಅಜಿತ್ ಪವಾರ್ ಬಣ ಬಿಜೆಪಿ ಜೊತೆಗೆ ಸೇರಿದ್ದರೆ, ಶರದ್ ಪವಾರ್ ಬಣ ಕಾಂಗ್ರೆಸ್ ಜೊತೆಗೆ ಉಳಿದುಕೊಂಡಿತ್ತು.
ಅಷ್ಟೆ ಅಲ್ಲದೆ, ಮಹಾಯುತಿ ಮೈತ್ರಿಯಲ್ಲಿ ಇರುವ ಜೆಎಸ್‌ಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಆರ್‌ವೈಎಸ್‌ಪಿ ಮತ್ತು ಆರ್‌ಎಸ್‌ವಿಎ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ವಿಪಕ್ಷಗಳ ಮೈತ್ರಿಯಾದ ಮಹಾವಿಕಾಸ್ ಅಘಾಡಿಯ ಕಾಂಗ್ರೆಸ್ ಒಟ್ಟು 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 17 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆಯಲ್ಲಿದೆ. ಪಕ್ಷವೂ 2019ರಲ್ಲಿ 147 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 44 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಮಹಾವಿಕಾಸ್ ಅಘಾಡಿಯ ಶರದ್ ಪವಾರ್ ನೇತೃತ್ವದ ಎನ್‌ಸಿಪಿ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಕೇವಲ13 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆ ಕಾಯ್ದುಕೊಂಡಿದೆ. ಜೊತೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 96 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 26 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆಯಲ್ಲಿದೆ. ಅದೇ ರೀತಿ ಮೈತ್ರಿಯ ಪಕ್ಷಗಳಾದ ಸಮಾಜವಾದಿ ಪಕ್ಷ ಎರಡು ಕ್ಷೇತ್ರಗಳಲ್ಲಿ, ಸಿಪಿಐಎಂ ಮತ್ತು ಆರ್‌ಡಬ್ಲ್ಯೂಪಿಐ ಕ್ರಮವಾಗಿ ಒಂದೊಂದು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಎರಡು ಪ್ರಮುಖ ಮೈತ್ರಿಗಳಲ್ಲಿ ಇಲ್ಲದ ಇತರ ಪಕ್ಷಗಳಾದ SBP, AIMIM, ISLAM, RSPK ಪಕ್ಷಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಇದನ್ನೂಓದಿ ಉಪಚುನಾವಣೆ : ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು


