ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಸಂಭಾಲ್ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಹೊಣೆ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಹಿಂಸಾಚಾರವನ್ನು ಆಯೋಜಿಸುತ್ತಿದೆ ಎಂದು ಆರೋಪಿಸಿದ ಅವರು, ಇದು ಯುಪಿ ಉಪಚುನಾವಣೆ ಸಮಯದಲ್ಲಿ “ಚುನಾವಣಾ ದುಷ್ಕೃತ್ಯದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ” ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅಖಿಲೇಶ್, ”ಮಸೀದಿಯನ್ನು ಈಗಾಗಲೇ ಸರ್ವೆ ಮಾಡಿದ್ದರೆ, ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಎರಡನೇ ಸಮೀಕ್ಷೆ ಏಕೆ ನಡೆಸಲಾಯಿತು? ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ಸಮಯದಲ್ಲಿ ಬೆಳಿಗ್ಗೆ ಏಕೆ ಮಾಡಲಾಯಿತು” ಎಂದು ಪ್ರಶ್ನಿಸಿದರು.
ಅಖಿಲೇಶ್ ಯಾದವ್ ಅವರು ಚುನಾವಣಾ ಅಕ್ರಮಗಳ ಮೇಲಿನ ಚರ್ಚೆಗಳನ್ನು ನಿಗ್ರಹಿಸಲು ಹಿಂಸಾಚಾರವನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ ಎಂದು ಆರೋಪಿಸಿದರು. “ಇದು ಚುನಾವಣಾ ಪ್ರಕ್ರಿಯೆಯ ಪರಿಶೀಲನೆಯನ್ನು ತಪ್ಪಿಸಲು ಲೆಕ್ಕಾಚಾರದ ತಂತ್ರವಾಗಿದೆ” ಎಂದು ಪ್ರತಿಪಾದಿಸಿದರು.
ಸಂಭಾಲ್‌ನಲ್ಲಿನ ಘರ್ಷಣೆಯು ಮೊಘಲರ ಕಾಲದ ಮಸೀದಿಯ ಎರಡನೇ ಸಮೀಕ್ಷೆಯ ಸಮಯದಲ್ಲಿ ಸ್ಫೋಟಿಸಿತು. ಕೆಲವರು ಇದನ್ನು ಮೂಲತಃ ಪ್ರಾಚೀನ ಹಿಂದೂ ದೇವಾಲಯದ ಸ್ಥಳವೆಂದು ಹೇಳಿಕೊಳ್ಳುತ್ತಾರೆ. ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು “ಮೈನರ್ ಫೋರ್ಸ್” ಅನ್ನು ಆಶ್ರಯಿಸಿದರು. ಈ ಪ್ರದೇಶದಲ್ಲಿ ಗುಂಪೊಂದು ಪೊಲೀಸರ ಮೇಲೆ ದಾಳಿ ಮಾಡಿದ ನಂತರ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಗಮನಾರ್ಹವೆಂದರೆ, ಇತ್ತೀಚಿನ ಉಪಚುನಾವಣೆ ಫಲಿತಾಂಶಗಳ ನಂತರ ನಡೆದ ಘಟನೆಯು ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಏಳು ಸ್ಥಾನಗಳನ್ನು ಪಡೆದುಕೊಂಡಿತು. ಸಮಾಜವಾದಿ ಪಕ್ಷವು ಕೇವಲ ಎರಡನ್ನು ಮಾತ್ರ ಹೊಂದಿದೆ.
ಮುರಾದಾಬಾದ್ ಕಮಿಷನರ್ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ ಮತ್ತು ಹಿಂಸಾಚಾರದ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಪೊಲೀಸರೊಂದಿಗೆ ಘರ್ಷಣೆ; 3 ಸಾವು
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಯನ್ನು ವಿರೋಧಿಸಿದ ಗುಂಪೊಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ ಹಿಂಸಾತ್ಮಕ ಘರ್ಷಣೆಯಲ್ಲಿ ಮೂರು ಜನರು ಸಾವನ್ನಪ್ಪಿದರು. ಮೊಘಲರು ಮಸೀದಿಯನ್ನು ನಿರ್ಮಿಸಲು ದೇವಾಲಯವನ್ನು ಕೆಡವಿದರು ಎಂಬ ದೂರಿನ ಆಧಾರದ ಮೇಲೆ ನ್ಯಾಯಾಲಯದ ಆದೇಶದ ನಂತರ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು.
ಸಮೀಕ್ಷಾ ತಂಡ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಜಮಾಯಿಸಿ ಈ ಕ್ರಮವನ್ನು ವಿರೋಧಿಸಿದರು. ಭಾರೀ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಮೀಕ್ಷಾ ತಂಡದ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ಪ್ರತೀಕಾರವಾಗಿ, ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.
ಮೃತರನ್ನು ನೌಮನ್, ಬಿಲಾಲ್ ಮತ್ತು ನೈಮ್ ಎಂದು ಗುರುತಿಸಲಾಗಿದೆ ಎಂದು ಮೊರಾದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ಸಾವನ್ನು ದೃಢಪಡಿಸಿದ್ದಾರೆ. ಆದರೆ, ಬಲಿಪಶುಗಳ ಗುರುತುಗಳನ್ನು ಬಹಿರಂಗಪಡಿಸಿಲ್ಲ. ಬಲಿಪಶುಗಳಿಗೆ ಬುಲೆಟ್ ಗಾಯಗಳಾಗಿವೆ ಎಂದು ಹೇಳಲಾಗಿದ್ದರೂ, ಶವಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
“ಇಬ್ಬರು ಮಹಿಳೆಯರು ಸೇರಿದಂತೆ ಕೆಲವರನ್ನು ಬಂಧಿಸಲಾಗಿದೆ. ಮಹಿಳೆಯರು ಛಾವಣಿಯ ಮೇಲೆ ಕಲ್ಲು ಎಸೆಯುತ್ತಿದ್ದರು. ಇಲ್ಲಿಯವರೆಗೆ ಸಂಭಾಲ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 15 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ; ಯುಪಿ: ಸಂಭಾಲ್ ಮಸೀದಿ ಸಮೀಕ್ಷೆ ಸಂದರ್ಭದಲ್ಲಿ ಘರ್ಷಣೆ; ಕಲ್ಲು ತೂರಾಟ, ಪೊಲೀಸರಿಂದ ಅಶ್ರುವಾಯು ಪ್ರಯೋಗ


