ರಷ್ಯಾದ ಸೈನ್ಯಕ್ಕೆ ಅಕ್ರಮವಾಗಿ ಸೇರ್ಪಡೆಗೊಂಡ ಹಲವಾರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ಮತ್ತು ನಾಪತ್ತೆಯಾದ ಇಬ್ಬರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ದಿ ಹಿಂದೂ ಭಾನುವಾರ ವರದಿ ಮಾಡಿದೆ. ನಾಪತ್ತೆಯಾದವರಲ್ಲಿ ಒಬ್ಬರನ್ನು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ಧರ್‌ನ 27 ವರ್ಷದ ಜಹೂರ್ ಶೇಖ್ ಎಂದು ಗುರುತಿಸಲಾಗಿದೆ. ರಷ್ಯಾದ ಸೇನೆಯಲ್ಲಿದ್ದ
ನಾಪತ್ತೆಯಾದ ಜಹೂರ್ ಶೇಖ್ ಅವರ ತಂದೆ ಮೊಹಮ್ಮದ್ ಅಮೀನ್ ಶೇಖ್ ಮಾತನಾಡಿ, ತನ್ನ ಮಗ ಡಿಸೆಂಬರ್ 31 ರಂದು ಕುಟುಂಬದೊಂದಿಗೆ ಕೊನೆಯದಾಗಿ ಮಾತನಾಡಿದ್ದಾನೆ ಎಂದು ಹೇಳಿದ್ದಾರೆ. “ತಾನು ತರಬೇತಿಗೆ ಹೋಗುತ್ತಿರುವುದಾಗಿ ಮತ್ತು ಮುಂದಿನ ಮೂರು ತಿಂಗಳು ಫೋನ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ” ಎಂದು ಜಮ್ಮು ಕಾಶ್ಮೀರದ ಸಾರ್ವಜನಿಕ ಆರೋಗ್ಯ ಇಲಾಖೆಯ ನಿವೃತ್ತ ಇನ್ಸ್‌ಪೆಕ್ಟರ್ ಆಗಿರುವ ಮೊಹಮ್ಮದ್ ಅಮೀನ್ ಶೇಖ್ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಅದಾಗ್ಯೂ, ಜನವರಿಯಲ್ಲಿ ರಷ್ಯಾದಲ್ಲಿ ಭಾರತೀಯರ ಸಾವಿನ ಬಗ್ಗೆ ಸುದ್ದಿಯನ್ನು ನೋಡಿ ನಾವು ಚಿಂತೆಗೊಳಗಾಗಿ, ಅವರ ಸಂಖ್ಯೆಗೆ ಕರೆ ಮಾಡಿದೆವು. ಆದರೆ ಅವರಿಗೆ ಸಂಪರ್ಕ ಸಾಧ್ಯವಾಗಲಿಲ್ಲ. ಅವರು ಕೂಡಾ ಇದುವರೆಗೆ ನಮಗೆ ಕರೆ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 24, 2022 ರಂದು ರಷ್ಯಾವು ಉಕ್ರೇನ್ ವಿರುದ್ಧ ಆಕ್ರಮಣ ಪ್ರಾರಂಭಿಸಿದ್ದು, ಎರಡನೇ ವಿಶ್ವ ಯುದ್ಧದ ನಂತರ ಯುರೋಪ್‌ನಲ್ಲಿ ನಡೆದ ಭಾರಿ ಸಂಘರ್ಷ ಇದಾಗಿದೆ. ಯುದ್ಧದಲ್ಲಿ ಸುಮಾರು ನೂರು ಭಾರತೀಯರನ್ನು ರಷ್ಯಾ ಸೈನ್ಯದ ಪರವಾಗಿ ಹೋರಾಡುವಂತೆ ಮಾಡಲಾಗಿದೆ ಎಂದು ನಂಬಲಾಗಿದೆ. ಅವರಲ್ಲಿ ಹತ್ತಾರು ಜನರು ಭಾರತಕ್ಕೆ ಮರಳಲು ಸರ್ಕಾರದ ಸಹಾಯವನ್ನು ಕೋರಿದ್ದರು.
ಜುಲೈ ವೇಳೆಗೆ ಸಂಘರ್ಷದಲ್ಲಿ ಕನಿಷ್ಠ ಎಂಟು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸಂಸತ್ತಿಗೆ ತಿಳಿಸಿದ್ದಾರೆ. ಬೇರೆ ದುಡಿಮೆಗೆ ಎಂದು ರಷ್ಯಾಕ್ಕೆ ಕರೆಸಿಕೊಂಡು ಭಾರತೀಯರನ್ನು ಸೇನೆಗೆ ಸೇರಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಕಳೆದ ವಾರ ಜಹೂರ್ ಶೇಖ್ ಬಗ್ಗೆ ಮಾಹಿತಿ ನೀಡಲು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿಫಲವಾದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಷ್ಯಾದ ರಾಯಭಾರ ಕಚೇರಿಯಿಂದ ಉತ್ತರಗಳನ್ನು ಪಡೆಯಲು ಮೊಹಮ್ಮದ್ ಅಮೀನ್ ಶೇಖ್ ಮತ್ತು ಅವರ ಇಬ್ಬರು ಪುತ್ರರು ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಷ್ಯಾದ ಸೇನೆಯಲ್ಲಿದ್ದ
“ನಾವು ರಷ್ಯಾದ ರಾಯಭಾರ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದೇವೆ” ಎಂದು ಜಹೂರ್ ಶೇಖ್ ಅವರ ಹಿರಿಯ ಸಹೋದರ 31 ವರ್ಷದ ಐಜಾಜ್ ಅಮೀನ್ ದಿ ಹಿಂದೂಗೆ ತಿಳಿಸಿದ್ದಾರೆ. “ಅವರು ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕನಿಷ್ಠ 15 ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ರಷ್ಯಾ ಸರ್ಕಾರವು ಸಹಕರಿಸುತ್ತಿದ್ದರೂ, ಸ್ಥಳದಲ್ಲಿ ಇರುವ ಅವರ ಕಮಾಂಡರ್‌ಗಳು ಸ್ಪಂದಿಸುತ್ತಿಲ್ಲ” ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಕೆಲಸಕ್ಕೆ ಸಂಬಂಧಿಸಿದ ಯೂಟ್ಯೂಬ್ ವಿಡಿಯೋ ನೋಡಿದ ನಂತರ ಜಹೂರ್ ಶೇಖ್ ರಷ್ಯಾಕ್ಕೆ ಪ್ರಯಾಣಿಸಿದ್ದರು ಎಂದು ಐಜಾಜ್ ಅಮೀನ್ ಹೇಳಿದ್ದಾರೆ. ಆದರೆ, ಅವರು ರಷ್ಯಾಕ್ಕೆ ತಲುಪಿದ ನಂತರ ಸೈನ್ಯಕ್ಕೆ ಸೇರುವಂತೆ ಆಗಿತ್ತು, ಅಲ್ಲಿ ಅವರು ವಂಚನೆಗೊಳಗಾಗಿದ್ದಾರೆ. ಜಹೋರ್ ಅವರದೇ ರೀತಿ, ಪಂಜಾಬ್‌ನ ಜಲಂಧರ್‌ನ 30 ವರ್ಷದ ಮಂದೀಪ್ ಕೂಡಾ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
“ನಾವು ಮಂದೀಪ್ ಅವರೊಂದಿಗೆ ಕೊನೆಯದಾಗಿ ಮಾರ್ಚ್ 3 ರಂದು ಮಾತನಾಡಿದ್ದೇವೆ” ಎಂದು ಮಂದೀಪ್ ಅವರ ಸಹೋದರ ಜಗದೀಪ್ ಕುಮಾರ್ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ. “ಅವರು ಆರಂಭದಲ್ಲಿ ಅರ್ಮೇನಿಯಾಕ್ಕೆ ಹೋಗಿದ್ದು, ಅಲ್ಲಿಂದ ಕೆಲಸ ಹುಡುಕಿಕೊಂಡು ಇಟಲಿಗೆ ಹೋಗಬೇಕಿತ್ತು. ಬದಲಾಗಿ, ಅವರು ವೀಸಾ ಏಜೆಂಟ್‌ನ ಮೋಸದಿಂದ ರಷ್ಯಾಕ್ಕೆ ಹೋಗಿ ಅವರ ಸೈನ್ಯಕ್ಕೆ ಸೇರುವಂತೆ ಆಯಿತು. ಕೆಲವು ದಿನಗಳ ತರಬೇತಿಯ ನಂತರ ಅವರನ್ನು ಯುದ್ಧ ವಲಯಕ್ಕೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ.
ದೆಹಲಿಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ ಎಂದು ಕುಮಾರ್ ಹೇಳಿದ್ದಾರೆ, ರಷ್ಯಾದಲ್ಲಿ ಕನಿಷ್ಠ 25 ಭಾರತೀಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಅಕ್ಟೋಬರ್ 21 ರಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ಸೈನ್ಯಕ್ಕೆ ಸೇರ್ಪಡೆಗೊಂಡ ಮತ್ತು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲಿದ್ದ 85 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
ರಷ್ಯಾದ ಸೇನೆಯಿಂದ ಇನ್ನೂ 20 ಭಾರತೀಯರನ್ನು ಬಿಡುಗಡೆ ಮಾಡಬೇಕಾಗಿದೆ ಮತ್ತು ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಹೊಸ ದೆಹಲಿ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಹೇಳಿದ್ದಾರೆ. ಜುಲೈನಲ್ಲಿ, ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದಾಗ, ರಷ್ಯಾವೂ ತನ್ನ ಮಿಲಿಟರಿಯಿಂದ ಎಲ್ಲಾ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.
ಇದನ್ನೂ ಓದಿ: ಬಿಜೆಪಿ ಸೋಲಿಸಲು ದಲಿತ-ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸಬೇಕು: ವಿಸಿಕೆ ಅಧ್ಯಕ್ಷ ತೊಳ್ ತಿರುಮಾವಳವನ್ ಕರೆ
ಬಿಜೆಪಿ ಸೋಲಿಸಲು ದಲಿತ-ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸಬೇಕು: ವಿಸಿಕೆ ಅಧ್ಯಕ್ಷ ತೊಳ್ ತಿರುಮಾವಳವನ್ ಕರೆ


