ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿದ್ದ ಮೈತೇಯಿ ಕುಟುಂಬದ ಮೂವರನ್ನು ನದಿಗೆ ಎಸೆಯುವ ಮೊದಲು, ಅವರಿಗೆ ಹಲವು ಬಾರಿ ಗುಂಡು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಗಳು ಸೂಚಿಸಿವೆ ಎಂದು ದಿ ಹಿಂದೂ ಭಾನುವಾರ ವರದಿ ಮಾಡಿದೆ.
ನವೆಂಬರ್ 11 ರಂದು, ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿ ಭುಗಿಲೆದ್ದ ಹಿಂಸಾಚಾರದ ನಂತರ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 6 ಜನರು ಜಿರಿಬಾಮ್‌ನಿಂದ ನಾಪತ್ತೆಯಾಗಿದ್ದರು. ಆರು ವ್ಯಕ್ತಿಗಳನ್ನು ಶಸ್ತ್ರಸಜ್ಜಿತ ಹ್ಮಾರ್ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಮೈತೇಯಿ ಗುಂಪುಗಳು ಆರೋಪಿಸಿದ್ದವು. ಅಪಹರಣಕ್ಕೊಳಗಾಗಿದ್ದ ಮೈತೇಯಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅವರ ಶವಗಳು ನವೆಂಬರ್ 15 ಮತ್ತು ನವೆಂಬರ್ 18 ರ ನಡುವೆ ಜಿರಿ ಮತ್ತು ಬರಾಕ್ ನದಿಗಳಲ್ಲಿ ತೇಲುತ್ತಿದ್ದವು. ಮೂರು ವರ್ಷದ ಚಿಂಗ್‌ಖೀಂಗನ್‌ಬಾ ಸಿಂಗ್, ಅವರ ತಾಯಿ ಎಲ್ ಹೈಟೊನ್ಬಿ ದೇವಿ(25), ಮತ್ತು ಅಜ್ಜಿ ವೈ ರಾಣಿ ದೇವಿ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪ್ರತಿಯೊಬ್ಬರಿಗೂ ಗುಂಡು ಹಾರಿಸಲಾಗಿದೆ ಎಂದು ಸೂಚಿಸಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮೂರು ವರ್ಷದ ಮಗು ಚಿಂಗ್‌ಖೀಂಗನ್‌ಬಾ ಸಿಂಗ್ ಅವರ ಗಲ್ಲದ ಮೇಲೆ ಗುಂಡಿನ ಗಾಯ ಇದೆ ಎಂದು ವರದಿಯು ಹೇಳಿದೆ. ಅವರ ತಾಯಿ ಹೈಟೋನ್ಬಿ ದೇವಿ ಅವರ ಬೆನ್ನಿನ ಮೇಲೆ ಎರಡು ಗುಂಡುಗಳ ಗಾಯಗಳಾಗಿದ್ದರೆ, ಅವರ ಅಜ್ಜಿ ವೈ ರಾಣಿ ದೇವಿ ಮೇಲೆ ಐದು ಬುಲೆಟ್‌ಗಳ ಗಾಯಗಳು ಆಗಿವೆ ಎಂದು ವರದಿಗಳು ತಿಳಿಸಿವೆ.
ಅವರನ್ನು ಅಪಹರಿಸಿದ ದಿನ, ಶಂಕಿತ ಕುಕಿ ಉಗ್ರಗಾಮಿಗಳು ಜಕುರಾಧೋರ್‌ನಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಫೋರ್ಸ್ ಪೋಸ್ಟ್‌ನ ಮೇಲೆ ದಾಳಿ ನಡೆಸಿದ್ದರು. ಇದರ ನಂತರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ತು ಶಂಕಿತ ಉಗ್ರರು ಕೊಲ್ಲಲ್ಪಟ್ಟಿದ್ದಾರೆ.
ಆದಾಗ್ಯೂ, ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳು ಗ್ರಾಮದ ಸ್ವಯಂಸೇವಕರು ಎಂದು ಕುಕಿ ಸಂಘಟನೆಗಳು ಹೇಳಿಕೊಂಡಿವೆ. ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಹಳ್ಳಿಗಳನ್ನು ಕಾವಲು ಕಾಯುತ್ತಿರುವ ಶಸ್ತ್ರಸಜ್ಜಿತ ನಾಗರಿಕರಿಗೆ “ಗ್ರಾಮ ಸ್ವಯಂಸೇವಕರು” ಎಂಬ ಪದವನ್ನು ಬಳಸಲಾಗುತ್ತಿದೆ.
ನವೆಂಬರ್‌ನಲ್ಲಿ ಮಣಿಪುರದಲ್ಲಿ ಹಿಂಸಾಚಾರದಲ್ಲಿ ಏರಿಕೆ ಕಂಡುಬಂದಿದ್ದು, ನವೆಂಬರ್ 7 ರಿಂದ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ಮೈತೇಯಿ ಮತ್ತು ಕುಕಿ-ಝೋ-ಹ್ಮಾರ್‌ಗಳ ನಡುವಿನ ಘರ್ಷಣೆಗಳಿಂದ ಕನಿಷ್ಠ 258 ಜನರು ಸಾವನ್ನಪ್ಪಿದ್ದಾರೆ ಮತ್ತು 59,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ವಕ್ಫ್ ಮಸೂದೆ ವಿರುದ್ಧ ನಿರ್ಣಯ ಮಂಡಿಸಲಾಗುವುದು ಎಂದ ಪಶ್ಚಿಮ ಬಂಗಾಳ ಸಚಿವರು
ವಕ್ಫ್ ಮಸೂದೆ ವಿರುದ್ಧ ನಿರ್ಣಯ ಮಂಡಿಸಲಾಗುವುದು ಎಂದ ಪಶ್ಚಿಮ ಬಂಗಾಳ ಸಚಿವರು


