ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಸ್ಲಾಮಾಬಾದ್‌ನಲ್ಲಿ ಇಂದು (ನ.26) ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, 6 ಮಂದಿ ಮೃತಪಟ್ಟಿದ್ದಾರೆ.
ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಸರ್ಕಾರದ ಗುಂಡಿನ ದಾಳಿಯ ಬೆದರಿಕೆಯನ್ನು ನಿರ್ಲಕ್ಷಿಸಿ ಪ್ರತಿಭಟನಾಕಾರರು ಮುನ್ನುಗ್ಗಿದ್ದಾರೆ ಎಂದು ವರದಿಗಳು ಹೇಳಿವೆ.
ಮೃತಪಟ್ಟವರಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ಒಬ್ಬರು ಪೊಲೀಸ್ ಮತ್ತು ಒಬ್ಬರು ನಾಗರಿಕ ಒಳಗೊಂಡಿದ್ದಾರೆ. ಪ್ರತಿಭಟನಾಕಾರರ ಜೊತೆಗಿನ ಸಂಘರ್ಷದಲ್ಲಿ ಭದ್ರತಾ ಸಿಬ್ಬಂದಿ ಬಲಿಯಾಗಿದ್ದು, ನಾಗರಿಕ ಇದೇ ವೇಳೆ ನಡೆದ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸ್ ಸಿಬ್ಬಂದಿ ಪ್ರತ್ಯೇಕ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬಳಿಕ ಇಸ್ಲಾಮಾಬಾದ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸೇನೆಯನ್ನು ನಿಯೋಜಿಸಲಾಗಿದೆ. ಹಿಂಸಾಚಾರ ನಿಯಂತ್ರಿಸಲು ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ.
ಪ್ರಧಾನಿ ಶೆಹಬಾಝ್ ಷರೀಫ್ ಭದ್ರತಾ ಸಿಬ್ಬಂದಿ ಮೇಲಿನ ದಾಳಿಯನ್ನು ಖಂಡಿಸಿದ್ದು, ‘ಅರಾಜಕತಾವಾದಿ ಗುಂಪು’ ಉದ್ದೇಶಪೂರ್ವಕವಾಗಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಬಳಸಿದರೆ ಭದ್ರತಾ ಪಡೆಗಳು ನೇರವಾಗಿ ಗುಂಡಿನ ಮೂಲಕ ಪತ್ಯುತ್ತರ ನೀಡಲಿದ್ದಾರೆ ಎಂದು ಸಚಿವ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನತ್ತ ಹೊರಟಿದ್ದ ಇಮ್ರಾನ್ ಖಾನ್ ಬೆಂಬಲಿಗರನ್ನು ಪೊಲೀಸರು ಪಂಜಾಬ್‌ನ ಹಾರೊ ಬಳಿ ರವಿವಾರ ತಡರಾತ್ರಿ ತಡೆದಿದ್ದರು. ಸೋಮವಾರ ಬೆಳಿಗ್ಗೆ ರ್‍ಯಾಲಿ ಪುನರಾರಂಭ ಮಾಡಿದ್ದ ಪ್ರತಿಭಟನಾಕಾರರು, ಇಸ್ಲಾಮಾಬಾದ್‌ನತ್ತ ಪ್ರಯಾಣ ಬೆಳೆಸಿದ್ದರು.
ಖಾನ್ ಬೆಂಬಲಿಗರಿಂದ ಹಲ್ಲೆಗೊಳಗಾದ ಪತ್ರಕರ್ತರು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನೆ ದೃಶ್ಯ ಸೆರೆ ಹಿಡಿಯುತ್ತಿದ್ದ ಅಸೋಸಿಯೇಟೆಡ್ ಪ್ರೆಸ್ ವಿಡಿಯೋಗ್ರಾಫರ್ ಮೇಲೆ ಖಾನ್ ಬೆಂಬಲಿಗರು ದಾಳಿ ನಡೆಸಿದ್ದು, ಅವರ ಕ್ಯಾಮರಾವನ್ನು ಕಿತ್ತುಕೊಂಡಿದ್ದಾರೆ. ಘಟನೆಯಲ್ಲಿ ವಿಡಿಯೋಗ್ರಾಫರ್ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳು ಪ್ರತಿಭಟನೆಯ ಚಿತ್ರೀಕರಣ ಮತ್ತು ಛಾಯಾಗ್ರಹಣವನ್ನು ಬಹುತೇಕ ನಿಲ್ಲಿಸಿವೆ ಎಂದು ವರದಿಯಾಗಿದೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಹಾಗೂ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ದೇಶದಾದ್ಯಂತ ನ. 24ರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಮ್ರಾನ್ ಖಾನ್ ತಮ್ಮ ಬೆಂಬಲಿಗರಿಗೆ ಈ ಮೊದಲು ಕರೆ ನೀಡಿದ್ದರು.
ಸುಮಾರು 150ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಕಳೆದ ಒಂದು ವರ್ಷದಿಂದ ಜೈಲಿನದ್ದಾರೆ. ಅವರ ಪಕ್ಷ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಥವಾ ಪಿಟಿಐ, ಖಾನ್ ಮೇಲಿನ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಹೇಳುತ್ತಿವೆ.
ಇದನ್ನೂ ಓದಿ : ಅದಾನಿ ಯೋಜನೆಗಳ ತನಿಖೆಗೆ ಆದೇಶಿಸಿದ ಶ್ರೀಲಂಕಾ ಸರ್ಕಾರ : ವರದಿ


