ತಮಿಳುನಾಡು ಸರ್ಕಾರದ ವಿರೋಧದ ನಡುವೆಯೂ ಮದ್ರಾಸ್ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ ತನ್ನ ಖಾಸಗಿ ಭೂಮಿಯಲ್ಲಿ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಿದೆ.
“ಒಬ್ಬ ವ್ಯಕ್ತಿ ತನ್ನ ಖಾಸಗಿ ಭೂಮಿಯಲ್ಲಿ ಸ್ಮಾರಕ ಅಥವಾ ಪ್ರತಿಮೆ ಸ್ಥಾಪಿಸುವುದನ್ನು ಸರ್ಕಾರ ತಡೆಯಲು ಸಾಧ್ಯವಿಲ್ಲ” ಎಂದು ನವೆಂಬರ್ 24ರಂದು ಹೈಕೋರ್ಟ್ ಹೇಳಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತನ್ನ ಖಾಸಗಿ ಜಮೀನಿನಲ್ಲಿ ಸ್ಟ್ಯಾನ್ ಸ್ವಾಮಿಯವರ ಚಿತ್ರವಿರುವ ಕಲ್ಲಿನ ಕಂಬದ ಸ್ಮಾರಕವನ್ನು ನಿರ್ಮಿಸಲು ಪರಿಸರ ಹೋರಾಟಗಾರ ಪಿಯೂಷ್ ಸೇಥಿಯಾ ಅವರಿಗೆ ನ್ಯಾಯಮೂರ್ತಿ ಎಂ.ದಂಡಪಾಣಿ ಅನುಮತಿ ನೀಡಿದ್ದಾರೆ.
ಸ್ಮಾರಕ ನಿರ್ಮಿಸದಂತೆ ಸೇಥಿಯಾ ಅವರಿಗೆ ನಿರ್ಬಂಧ ವಿಧಿಸಿ ನಲ್ಲಂಪಲ್ಲಿ ತಾಲೂಕು ತಹಶೀಲ್ದಾರ್ 16 ಜುಲೈ 2021ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ತಹಶೀಲ್ದಾರ್ ಪ್ರತಿಮೆ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಸೇಥಿಯಾ ಪತ್ರ ಬರೆದಿದ್ದರು. ಅದನ್ನು ಜಿಲ್ಲಾಧಿಕಾರಿ ತಿರಸ್ಕೃಸಿದ್ದರು. ಈ ಹಿನ್ನೆಲೆ ಸೇಥಿಯಾ ಅವರು ವಕೀಲ ವಿ ಸುರೇಶ್ ಮೂಲಕ ಅರ್ಜಿ ಹೈಕೋರ್ಟ್ ಮೊರೆ ಹೋಗಿದ್ದರು.
“ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದಂತೆ ಸ್ಟ್ಯಾನ್ ಸ್ವಾಮಿ ಅವರ ಹೋರಾಟದಿಂದ ತಾನು ಸ್ಫೂರ್ತಿ ಪಡೆದಿದ್ದೇನೆ. ಅವರು ನನ್ನ ಆರಾಧ್ಯ ದೈವ ಮತ್ತು ಮಾರ್ಗದರ್ಶಕರಾಗಿದ್ದಾರೆ. ಆದ್ದರಿಂದ, ನನ್ನ ಖಾಸಗಿ ಜಮೀನಿನಲ್ಲಿ ಸ್ಮಾರಕ ನಿರ್ಮಿಸುವ ಮೂಲಕ ಸ್ವಾಮಿ ಅವರ ಪರಂಪರೆ ಮುಂದುವರೆಸಲು ಬಯಸುತ್ತೇನೆ” ಎಂದು ಸೇಥಿಯಾ ಮನವಿ ಮಾಡಿದ್ದರು.
ಹೈಕೋರ್ಟ್‌ನಲ್ಲಿ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಮತ್ತು ಧರ್ಮಪುರಿ ಜಿಲ್ಲಾಧಿಕಾರಿ, “ನಕ್ಸಲರು ಮತ್ತು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯ ಕೆಲಸ ಸ್ಮರಿಸಲೆಂದು ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು. ಸ್ಮಾರಕ ನಿರ್ಮಾಣದಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುತ್ತದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತ್ತು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸ್ಮಾರಕ ನಿರ್ಮಿಸುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದು ಸೂಚಿಸಿ ಪ್ರತಿಮೆ ನಿರ್ಮಿಸಲು ಅವಕಾಶ ನೀಡಿದೆ.
ಸಾಮಾನ್ಯ ತತ್ವದ ಅನ್ವಯ ತಮ್ಮ ಖಾಸಗಿ ಜಮೀನಿನಲ್ಲಿ ಪ್ರತಿಮೆ ಸ್ಥಾಪಿಸುವ ಹಕ್ಕು ನಾಗರಿಕರಿಗೆ ಇದೆ. ಪ್ರತಿಮೆಯ ಸ್ಥಾಪನೆಯಿಂದ ಯಾವುದೇ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಾರದು ಅಥವಾ ನಿರ್ದಿಷ್ಟ ಸಮಾಜದ ಭಾವನೆಗಳಿಗೆ ಧಕ್ಕೆ ತರಬಾರದು ಎಂಬುವುದು ಒಂದೇ ನಿರ್ಬಂಧ. ಖಾಸಗಿ ಪಟ್ಟಾ ಭೂಮಿಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಿದರೆ ಯಾವುದೇ ಕಾನೂನು ಅಡ್ಡಿ ಇರದು ಎಂದು ನ್ಯಾಯಾಲಯ ಹೇಳಿದೆ. ಸೇಥಿಯಾ ಅವರೇ ಎಲ್ಲಾ ವೆಚ್ಚ ಭರಿಸಿ ಸ್ಮಾರಕ ನಿರ್ಮಿಸುತ್ತಿದ್ದಾರೆ ಎಂಬ ವಿಚಾರವನ್ನೂ ನ್ಯಾಯಾಲಯ ಗಮನಿಸಿದೆ.
ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ವಿಚಾರಣಾಧೀನ ಆರೋಪಿಯಾಗಿದ್ದ ಸ್ಟ್ಯಾನ್ ಸ್ವಾಮಿ ಅವರು ವೈದ್ಯಕೀಯ ಜಾಮೀನಿನ ನಿರೀಕ್ಷೆಯಲ್ಲೇ ಜುಲೈ 5,2021 ರಂದು ನಿಧನರಾಗಿದ್ದರು.
ಇದನ್ನೂ ಓದಿ : ಅದಾನಿ ಯೋಜನೆಗಳ ತನಿಖೆಗೆ ಆದೇಶಿಸಿದ ಶ್ರೀಲಂಕಾ ಸರ್ಕಾರ : ವರದಿ


