ಟೆಲ್ ಅವಿವ್: ಇಸ್ರೇಲ್-ಲೆಬನಾನ್ ನ ಹಿಜ್ಬುಲ್ಲಾಗಳ ಯುದ್ಧದ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇಸ್ರೇಲ್‌ನ ಭದ್ರತಾ ಸಚಿವಾಲಯವು ಯುಎಸ್ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 7:30 ರಿಂದ ಜಾರಿಗೆ ಬರಲಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಔಪಚಾರಿಕವಾಗಿ ಘೋಷಿಸಿದ್ದಾರೆ. ಇಸ್ರೇಲ್ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಮಧ್ಯಪ್ರಾಚ್ಯದ ಮುಖವನ್ನು ಬದಲಾಯಿಸುತ್ತಿದ್ದೇವೆ. ಉತ್ತಮ ಒಪ್ಪಂದವು ಕಾರ್ಯಗತಗೊಳಿಸಬಹುದಾದವುಗಳಲ್ಲಿ ಒಂದಾಗಿದೆ. ಕದನ ವಿರಾಮಕ್ಕೆ ಪ್ರಾಥಮಿಕ ಕಾರಣವೆಂದರೆ ಹಮಾಸ್ ಅನ್ನು ಪ್ರತ್ಯೇಕಿಸುವುದು ಮತ್ತು ಒತ್ತೆಯಾಳುಗಳನ್ನು ಹಿಂದಿರುಗಿಸುವುದು ಎಂದು ನೆತನ್ಯಾಹು ಹೇಳಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಸಂಜೆ ಟೆಲ್ ಅವಿವ್‌ನಲ್ಲಿ ತಮ್ಮ ವಾರ್ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದರು. ಇದರಲ್ಲಿ ಲೆಬನಾನಿನ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ಜೊತೆ 60 ದಿನಗಳ ಕದನ ವಿರಾಮದ ಕುರಿತು ಚರ್ಚಿಸಲಾಯಿತು. ಇಸ್ರೇಲಿ ವಾರ್ ಕ್ಯಾಬಿನೆಟ್, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ ಎಂದು ಅಮೆರಿಕದ ಸುದ್ದಿ ವೆಬ್‌ಸೈಟ್ ದಿ ಹಿಲ್ ವರದಿ ಮಾಡಿದೆ. ಈ ಕದನ ವಿರಾಮ ಇಂದು ಬೆಳಿಗ್ಗೆ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು, ಲೆಬನಾನಿನ ಅಲ್ ಜದೀದ್ ವರದಿಯ ಪ್ರಕಾರ, ಅಮೆರಿಕ ಮತ್ತು ಫ್ರಾನ್ಸ್ ರಾತ್ರಿ 10 ಗಂಟೆಗೆ (ಸ್ಥಳೀಯ ಕಾಲಮಾನ) ಕದನ ವಿರಾಮವನ್ನು ಘೋಷಿಸುತ್ತವೆ ಮತ್ತು ಈ ಕದನ ವಿರಾಮ ಒಪ್ಪಂದವು ಬೆಳಿಗ್ಗೆ 10 ಗಂಟೆಗೆ ಜಾರಿಗೆ ಬರಲಿದೆ ಎಂದು ವರದಿ ಮಾಡಿತ್ತು.
ಕದನವಿರಾಮ ಘೋಷಣೆಯಾದರೆ ಅದನ್ನು ಜಾರಿಗೊಳಿಸಲು 60 ದಿನಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಹಿಬ್ಬುಲ್ಲಾದ ಹಿಡಿತದಲ್ಲಿರುವ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಇಸ್ರೇಲ್ ವಾಪಸ್ ಕರೆಸಿಕೊಳ್ಳಬೇಕು. ಜೊತೆಗೆ, ಈ ಪ್ರದೇಶದಲ್ಲಿ ಲೆಬನಾನ್ ತನ್ನ ಸೈನ್ಯ ನಿಯೋಜನೆಗೊಳ್ಳಬೇಕು. ಜೊತೆಗೆ, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯೂ ಇರಲಿದೆ ಎನ್ನಲಾಗಿದೆ.
ಕದನವಿರಾಮ ಕುರಿತು ನಿಗಾ ಇರಿಸಲು ಅಮೆರಿಕ ಅಧ್ಯಕ್ಷತೆಯ ಅಂತರರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಹೇಳಲಾಗಿದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ದಾಳಿಗೆ ಲೆಬನಾನ್ 3,750 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ...ಪಾಕಿಸ್ತಾನದಲ್ಲಿ ಹಿಂಸಾಚಾರಕ್ಕೆ ತಿರುಗಿದ ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ : 6 ಮಂದಿ ಸಾವು, ಕಂಡಲ್ಲಿ ಗುಂಡು ಆದೇಶ


