“ಒಂದು ವೇಳೆ ಬಿಜೆಪಿಗೆ ಸೇರಿದರೆ ನನ್ನ ಮೇಲಿನ ಅಮಾನತು ತೆರವುಗೊಳ್ಳಲಿದೆ” ಎಂದು ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
ಉದ್ದೀಪನ ಮದ್ದು ಪರೀಕ್ಷೆಗೆ (ಡೋಪ್ ಟೆಸ್ಟ್) ಮಾದರಿ ನೀಡಲು ನಿರಾಕರಿಸಿದ ಕಾರಣಕ್ಕೆ ನಾಲ್ಕು ವರ್ಷಗಳ ಅವಧಿಗೆ ಮಾನತುಗೊಂಡ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಾರ್ಚ್ 10ರಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ಮಾದರಿ ನೀಡಲು ನಿರಾಕರಿಸುವ ಮೂಲಕ ಬಜರಂಗ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಹೇಳಿದೆ.
ಇದೇ ಆರೋಪದಲ್ಲಿ ಏಪ್ರಿಲ್ 23ರಂದು ಬಜರಂಗ್ ಅವರನ್ನು ನಾಡಾ ಅಮಾನತು ಮಾಡಿತ್ತು. ಅದರಂತೆ ವಿಶ್ವ ಕುಸ್ತಿ ಒಕ್ಕೂಟವೂ (ಯುಡಬ್ಲ್ಯುಡಬ್ಲ್ಯು) ಅಮಾನತು ಮಾಡಿತ್ತು.
“ನನಗೆ ಆಘಾತವಾಗಿಲ್ಲ. ಕಳೆದೆ ಒಂದು ವರ್ಷದಿಂದ ವಿವಾದದ ಕುರಿತು ಚರ್ಚೆ ನಡೆಯುತ್ತಿದೆ. ನಾಡಾಗೆ ಮಾದರಿ ನೀಡಲು ನಾನು ನಿರಾಕರಿಸಿಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ. ಉದ್ದೀಪನ ಮದ್ದು ಪರೀಕ್ಷೆ ನಡೆಸಲು ಅವಧಿ ಮುಗಿದ ಕಿಟ್‌ನೊಂದಿಗೆ (2023, ಡಿಸೆಂಬರ್) ನನ್ನ ಮನೆಗೆ ಭೇಟಿ ನೀಡಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ನಾನು ಪೋಸ್ಟ್ ಹಂಚಿದ್ದೇನೆ” ಎಂದು ಅವರು ಹೇಳಿದ್ದಾರೆ.
‘ಅವಧಿ ಮುಗಿದ ಕಿಟ್ ಆಟಗಾರನಿಗೆ ನೀಡುವಂತಿಲ್ಲ. ನನ್ನ ತಂಡದ ಗಮನಕ್ಕೂ ಬಂದಿದೆ. 2020, 2021, 2022ರ ಅವಧಿ ಮುಗಿದ ಕಿಟ್ ನೀಡಲಾಗಿತ್ತು. ನಾನು ಪರೀಕ್ಷೆಗೆ ಮೂತ್ರದ ಮಾದರಿಯನ್ನು ನೀಡಿದ್ದೇನೆ. ಆದರೆ, ನನ್ನ ತಂಡವು ಕಿಟ್ ಪರಿಶೀಲಿಸಿದಾಗ ಅವಧಿ ಮುಗಿದಿದೆ ಎಂದು ವಿಚಾರ ತಿಳಿದು ಬಂದಿದೆ. ಆದ್ದರಿಂದ ಕಿಟ್‌ನ ವಿಡಿಯೋ ಮಾಡಿ ನಾಡಾಗೆ ಮೇಲ್ ಮಾಡಿದ್ದೇವೆ. ಅವರ ತಪ್ಪಿನ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ತಪ್ಪು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ” ಎಂದು ಪುನಿಯಾ ತಿಳಿಸಿದ್ದಾರೆ.
“ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಗೆ ನಾವು ಬೆಂಬಲ ನೀಡಿದ್ದರಿಂದ ಸರ್ಕಾರ ನನ್ನ ಮೇಲೆ ಸೇಡು ತೀರಿಸಲು ಯತ್ನಿಸುತ್ತಿದೆ” ಎಂದು ಪುನಿಯಾ ಆರೋಪ ಮಾಡಿದ್ದಾರೆ.
“ನಾನು ಕಳೆದ 10-12 ವರ್ಷಗಳಿಂದ ಸ್ಪರ್ಧಿಸುತ್ತಿದ್ದೇನೆ. ಎಲ್ಲಾ ಪಂದ್ಯಾವಳಿಗಳಿಗೂ ಮುನ್ನ ಮಾದರಿಯನ್ನು ನೀಡಿದ್ದೇನೆ. ಆದರೆ, ಸರ್ಕಾರದ ಉದ್ದೇಶವು ನಮ್ಮನ್ನು ಒಡೆಯುವುದು, ಅವರಿಗೆ ತಲೆ ಬಾಗುವಂತೆ ಮಾಡುವುದು. ನಾನು ಬಿಜೆಪಿಗೆ ಸೇರಿದರೆ ನನ್ನ ವಿರುದ್ದದ ಎಲ್ಲಾ ಅಮಾನತು ಆದೇಶವನ್ನು ತೆಗೆದು ಹಾಕಬಹುದು ಎಂಬುದಾಗಿ ಭಾವಿಸುತ್ತೇನೆ” ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.
ಅಮಾನತು ಆದೇಶದಂತೆ ಬಜರಂಗ್ ಪುನಿಯಾ 2028ರ ಏಪ್ರಿಲ್‌ವರೆಗೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುವಂತಿಲ್ಲ. ಅಲ್ಲದೆ ವಿದೇಶದಲ್ಲಿ ತರಬೇತುದಾರ ಕೆಲಸ ವಹಿಸಲು ಸಾಧ್ಯವಿಲ್ಲ ಎಂದು ವರದಿಯಾಗಿದೆ.
ಕುಸ್ತಿಪಟುಗಳಾದ ಸಾಕ್ಷ್ಮಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಪೋಗಟ್ ಕಳೆದ ವರ್ಷ ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಭಾರತೀಯ ಕುಸ್ತಿ ಫೆಡರೇಶನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆ ಬಳಿಕ ಅವರು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಿಂಗಳ ಹಿಂದೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಗೂ ಮುನ್ನ ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ವಿನೇಶ್ ಪೋಗಟ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಶಾಸಕಿಯಾಗಿದ್ದಾರೆ. ಬಜರಂಗ್ ಪುನಿಯಾ ಈಗ ಅಮಾನತುಗೊಂಡಿದ್ದಾರೆ. ಮತ್ತೊಬ್ಬರು ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಗೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ : ದಲಿತ ಮೀಸಲಾತಿಯಡಿ ಉದ್ಯೋಗಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕ್ರೈಸ್ತ ಮಹಿಳೆ | ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್


