ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ (ನ.28) ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2024’ ಸೇರಿದಂತೆ 9 ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದ್ದು, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಲು ನಿರ್ಧರಿಸಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು, ಈ ಕುರಿತು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ- 2024, ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ- 2024, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ-2024, ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ-2024, Karnataka State Allied and Healthcare Professions Councilನಿಯಮಗಳು-2024ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯಪಾಲರ ಅಧಿಕಾರ ಮೊಟಕು :
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ವಿಧೇಯಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಪ್ರಸ್ತುತ ವಿವಿಯ ಕುಲಪತಿಯಾಗಿ ರಾಜ್ಯಪಾಲರು ಇದ್ದಾರೆ. ತಿದ್ದುಪಡಿ ವಿಧೇಯಕ ರಾಜ್ಯಪಾಲರ ಬದಲು ಸಿಎಂ ವಿವಿ ಕುಲಪತಿಯಾಗುವ ಅವಕಾಶ ನೀಡಲಿದೆ. ವಿವಿಯ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ.
ಇದರ ಜೊತೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿವಿ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕಾಗಿರುತ್ತದೆ. ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.
ಚಾಣಕ್ಯ ವಿವಿಗೆ ರಾಜ್ಯ ಸರ್ಕಾರದ ಪ್ರತಿನಿಧಿ:
ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2024ರ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 2021ರಲ್ಲಿ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಜಾರಿಗೆ ಬಂದಿತ್ತು. 27 ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಪ್ರಬಂಧಕ ಮಂಡಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಣಕ್ಯ ಖಾಸಗಿ ವಿವಿ ಕಾಯ್ದೆಯಡಿ ಇದಕ್ಕೆ ಅವಕಾಶ ಇರಲಿಲ್ಲ. ಈ ತಿದ್ದುಪಡಿಯಿಂದ ಇದೇ ಅವಕಾಶವನ್ನು ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೂ ಸಹ ಕಲ್ಪಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2024
ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ-1965ಕ್ಕೆ ತಿದ್ದುಪಡಿ ಮಾಡುವ ಮೂಲಕ ಈ ಮೊದಲು ಪ್ರತಿ ಕಾರ್ಮಿಕರಿಂದ 20 ರೂ., ಮಾಲಕರಿಂದ ಕಾರ್ಮಿಕರ ಪಾಲು 40 ರೂ., ಸರ್ಕಾರದಿಂದ ಕಾರ್ಮಿಕರ ಪಾಲು 20 ರೂ.ಗಳನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸುವುದನ್ನು ಹೆಚ್ಚಿಸಿ ಕಾರ್ಮಿಕರಿಂದ 50 ರೂ., ಮಾಲಕರಿಂದ ಪ್ರತಿ ಕಾರ್ಮಿಕರಿಗೆ 100 ರೂ. ಹಾಗೂ ಸರ್ಕಾರದಿಂದ ಪ್ರತಿ ಕಾರ್ಮಿಕರಿಗೆ 50 ರೂ.ಗಳ ವಂತಿಗೆಯನ್ನು ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಯಡಿಯೂರಪ್ಪ ಕುಟುಂಬದ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮತ್ತೆ ಮನವಿ
ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿರುವ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಈ ಪ್ರಕರಣದಲ್ಲಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ವಿಜಯೇಂದ್ರ ಮತ್ತು ಅವರ ಸಂಬಂಧಿಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಬೆಂಗಳೂರಿನ ಬಿದರಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಸಮುಚ್ಚಯ ಯೋಜನೆಗೆ ಸಂಬಂಧಿಸಿದ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ, ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಬಿಡಿಎ ಗುತ್ತಿಗೆ ಪಡೆಯಲು ಎಂ.ಎಸ್ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಮತ್ತು ಕೆಲ ಶೆಲ್ ಕಂಪನಿಗಳಿಂದ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕೋಟ್ಯಾಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಟಿ.ಜೆ ಅಬ್ರಾಹಂ ಖಾಸಗಿ ದೂರು ನೀಡಿದ್ದರು. ಆದರೆ, ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದರು. ಹೀಗಾಗಿ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ 2021ರ ಜುಲೈ 8ರಂದು ಅಬ್ರಾಹಂ ದೂರನ್ನು ವಜಾಗೊಳಿಸಿತ್ತು.
ಯಡಿಯೂರಪ್ಪ ಪರವಾಗಿ ಐಎಎಸ್ ಅಧಿಕಾರಿ ಜಿಸಿ ಪ್ರಕಾಶ್ 12 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕಾಶ್ ವಸೂಲಿ ಮಾಡಿ ಮಗನ ಮೂಲಕ ಯಡಿಯೂರಪ್ಪಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ, ವಿಜಯೇಂದ್ರ, ಶಶಿದರ್ ಮರಡಿ ಮತ್ತು ಸಂಜಯ್ ಶ್ರೀಗಳು ಶೆಲ್ ಕಂಪನಿಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪಿಸಲಾಗಿತ್ತು.
ಈಗ ಪೂರ್ವಾನುಮತಿ ಏಕೆ?
ಯಡಿಯೂರಪ್ಪ ಪ್ರಸ್ತುತ ಶಾಸಕರು, ಸಂಸದರು ಅಲ್ಲ. ಹೀಗಿರುವಾಗ ಈಗ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಚ್.ಕೆ ಪಾಟೀಲ್, “ಯಡಿಯೂರಪ್ಪ ಸಿಎಂ ಆಗಿದ್ದಾಗ ನಿರ್ಣಯಗಳನ್ನು ಕೈಗೊಂಡಿದ್ದರಿಂದ ರಾಜ್ಯಪಾಲರ ಅನುಮತಿ ಅಗತ್ಯವಿದೆ” ಎಂದಿದ್ದಾರೆ.
ಇದನ್ನೂ ಓದಿ : ಮುಸ್ಲಿಮರ ವಿರುದ್ಧ ದ್ವೇಷ ಭಾಷಣ : ಚಂದ್ರಶೇಖರ ಸ್ವಾಮಿ ಮೇಲೆ ಎಫ್ಐಆರ್


