ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿಯಲ್ಲಿರುವ ಶಾಹಿ ಜಾಮಾ ಮಸೀದಿ ಆವರಣದಲ್ಲಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಇಂದು (ನ.29) ತಡೆ ನೀಡಿದ್ದು, ಶಾಂತಿ, ಸೌಹಾರ್ದತೆ ಕಾಪಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಸಮೀಕ್ಷೆ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಪಟ್ಟಿ ಮಾಡುವವರೆಗೆ ಸಮೀಕ್ಷೆ ವಿಚಾರದಲ್ಲಿ ಮುಂದುವರೆಯದಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
“ಮಸೀದಿ ಸಮೀಕ್ಷೆಗೆ ಸಂಬಂಧಿಸಿದ ಅಡ್ವೊಕೇಟ್ ಕಮಿಷನರ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡಬೇಕು. ಮುಂದಿನ ಆದೇಶದವರೆಗೆ ತೆರಯಬಾರದು. ಯಾವುದೇ ಬೆಲೆ ತೆತ್ತಾದರೂ ಸರ್ಕಾರ ಶಾಂತಿ, ಸೌಹಾರ್ದತೆ ಕಾಪಾಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ನಿರ್ದೇಶಿಸಿದೆ.
“ಮಸೀದಿಯ ಸಮೀಕ್ಷೆಗೆ ಆದೇಶ ನೀಡಿರುವ ವಿಚಾರಣಾ ನ್ಯಾಯಾಲಯ ಮುಂದಿನ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು. ಮಸೀದಿ ಸಮಿತಿ ಹೈಕೋರ್ಟ್‌ಗೆ ತೆರಳುವವರೆಗೆ ಏನೂ ಆಗಬಾರದು ಎಂದು ನಾವು ಬಯಸುತ್ತೇವೆ. ವಿಚಾರಣಾ ನ್ಯಾಯಾಲಯ ತನ್ನ ಆದೇಶವನ್ನು ಜಾರಿಗೆ ತರಬಾರದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಸೀದಿ ಈ ಹಿಂದೆ ದೇವಾಲಯವಾಗಿತ್ತು ಎಂದು ಅರ್ಜಿ ಸಲ್ಲಿಕೆಯಾದ ಕೂಡಲೇ ಜಿಲ್ಲಾ ನ್ಯಾಯಾಲಯ ತರಾತುರಿಯಲ್ಲಿ ಸಮೀಕ್ಷೆಗೆ ಆದೇಶ ನೀಡಿದೆ. ಜಿಲ್ಲಾ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರು ನವೆಂಬರ್ 19ರಂದು ಸಮೀಕ್ಷೆಗೆ ಆದೇಶಿಸಿ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಸಂಭಾಲ್‌ನ ಶಾಹಿ ಜಾಮಾ ಮಸೀದಿ ಸಮಿತಿ (ಎಸ್‌ಎಸ್‌ಜೆಂಸಿ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಮಸೀದಿ ಸಮಿತಿ ತನ್ನ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿತ್ತು. ಅದಕ್ಕೆ ಒಪ್ಪಿದ್ದ ಸುಪ್ರೀಂ ಕೋರ್ಟ್, ಇಂದು ವಿಚಾರಣೆ ನಿಗದಿ ಮಾಡಿತ್ತು.
ನವೆಂಬರ್ 19 ರಂದು, ಸಂಭಾಲ್‌ನ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ್ ಅವರು ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ನಡೆಸುವಂತೆ ಅಡ್ವೊಕೇಟ್ ಕಮಿಷನರ್‌ಗೆ ನಿರ್ದೇಶನ ನೀಡಿದ್ದರು. ನ.29ರೊಳಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿ, ರಮೇಶ್ ರಾಘವ್ ಅವರನ್ನು ಅಡ್ವೊಕೇಟ್ ಕಮಿಷನರ್ ಆಗಿ ನೇಮಿಸಿದ್ದರು.
ಮೊಘಲರ ಕಾಲದಲ್ಲಿ ಧ್ವಂಸಗೊಂಡ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ವಕೀಲ ಹರಿಶಂಕರ್ ಜೈನ್ ಮತ್ತು ಇತರ ಏಳು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಸಮೀಕ್ಷೆಗೆ ಆದೇಶಿಸಿದ್ದರು.
ನ್ಯಾಯಾಲಯದ ಆದೇಶದಂತೆ ಮಸೀದಿಯ ಸಮೀಕ್ಷೆ ಮುಂದಾದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ಆರು ಮುಸ್ಲಿಂ ಯುವಕರು ಕೊಲ್ಲಲ್ಪಟ್ಟಿದ್ದಾರೆ.
ಇದನ್ನೂ ಓದಿ : ವಕ್ಫ್ ಮಸೂದೆ | ಸಂಸದೀಯ ಸಮಿತಿ ಕಾರ್ಯಾವಧಿ ವಿಸ್ತರಣೆ


