ಸರ್ಕಾರಿ ಕಛೇರಿಗಳಲ್ಲಿ ಕೆಲಸವಾಗಬೇಕೆಂದರೆ ಟೇಬಲ್ ಕೆಳಗಿನ ವ್ಯವಹಾರಕ್ಕೆ ಮುಂದಾಗಲೇ ಬೇಕು ಎಂಬುದು ಸಾಮಾನ್ಯವಷ್ಟರ ಮಟ್ಟಿಗೆ ಭಾರತದಲ್ಲಿ ಭ್ರಷ್ಟಾಚಾರ ಹಬ್ಬಿಹೋಗಿದೆ. ಇಂತಹ ಲಂಚದ ಬೇಗೆಗೆ ಸಿಲುಕಿದ್ದ ವ್ಯಕ್ತಿಯೊಬ್ಬ ತಾಳ್ಮೆ ಕಳೆದುಕೊಂಡು ಮಹಿಳಾ ತಹಶೀಲ್ದಾರ್ ಒಬ್ಬರನ್ನು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಹೈದರಾಬಾದ್‌ನ ಅಬ್ದುಲ್ಲಾಪುರದಲ್ಲಿ ನಡೆದಿದೆ.
ಅಬ್ದುಲ್ಲಾಪುರದ ತಹಶೀಲ್ದಾರ್ ವಿಜಯಾ ಆ ವ್ಯಕ್ತಿಯ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ವ್ಯಕ್ತಿಯೊಬ್ಬ ತನ್ನ ಕೆಲಸದ ನಿಮಿತ್ತ ಹಲವು ಬಾರಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದಾರೆ. ಆದರೆ ಲಂಚ ಕೊಡದೆ ಕೆಲಸ ಮಾಡಿಕೊಡುವುದಿಲ್ಲವೆಂದು ಹಿಂದಿರುಗಿ ಕಳಿಸಿದ್ದರು ಎನ್ನಲಾಗಿದೆ.
ಲಂಚ ಕೊಡಲಾಗದೆ ಬೇಸತ್ತಿದ್ದ ವ್ಯಕ್ತಿ ಇಂದು ಪೆಟ್ರೋಲ್ ಜೊತೆಗೆ ತಹಶೀಲ್ದಾರ್ ಕಚೇರಿಗೆ ನುಗ್ಗಿ, ಗದ್ದಲ ಮಾಡಿ ತಹಶೀಲ್ದಾರ್ ವಿಜಯಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್‌ನ ಬೆಂಕಿಗೆ ಸಿಲಿಕಿದ ತಹಶೀಲ್ದಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಬೆಂಕಿ ಹಚ್ಚಿದ ಆರೋಪಿ ತಕ್ಷಣವೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.


