ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರನ್ನು ಕಾಂಗ್ರೆಸ್ ಪಕ್ಷದಿಂದ ಇಂದು (ನ.30) ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಶಿಸ್ತು ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಅವರು ಗುರಪ್ಪ ನಾಯ್ಡು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಹೊರಿಸಿ ಶಿಕ್ಷಕಿಯೊಬ್ಬರು ನೀಡಿರುವ ದೂರ ಆಧರಿಸಿ ಬೆಂಗಳೂರಿನ ಚೆನ್ನಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಗುರಪ್ಪ ನಾಯ್ಡು ವಿರುದ್ದ ನ.28ರಂದು ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ತ್ಯಾಗರಾಜನಗರದ ಖಾಸಗಿ ಶಾಲೆಯೊಂದರ ಮುಖ್ಯಸ್ಥರಾಗಿರುವ ಗುರಪ್ಪ ನಾಯ್ಡು, ಅಲ್ಲಿನ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ.
ಶಿಕ್ಷಕಿ ನೀಡಿದ ದೂರಿನಲ್ಲಿ, “ಗುರಪ್ಪ ನಾಯ್ಡು ಕೆಲವು ಶಿಕ್ಷಕಿಯರು ಮತ್ತು ಮಹಿಳಾ ಸಿಬ್ಬಂದಿಯ ಬೆತ್ತಲೆ ಹಾಗೂ ಅಶ್ಲೀಲ ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡು ಹೆದರಿಸುತ್ತಿದ್ದಾರೆ. ಹೇಳಿದಂತೆ ಕೇಳದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಗುರಪ್ಪ ನಾಯ್ಡು ಉದ್ದೇಶಪೂರ್ವಕವಾಗಿಯೇ ಅವರ ಕೊಠಡಿಗೆ ನನ್ನನ್ನು ಕರೆಯುವುದು, ಯಾವಾಗ ರೆಡಿ ಆಗುತ್ತೀಯಾ? ಎಂದು ಕೇಳುವುದು, ನನ್ನ ಹಾವಾಭಾವಗಳನ್ನೇ ಗಮನಿಸುವುದು ಮಾಡುತ್ತಾರೆ. ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಲೈಂಗಿಕ ಚಟುವಟಿಕೆಗೆ ಪ್ರಚೋದಿಸಿ ತಮ್ಮ ಕೋಣೆಯಲ್ಲಿ ಕೈಹಿಡಿದು ಎಳೆದಾಡಿದ್ದಾರೆ. ಆ ರೀತಿ ವರ್ತಿಸಬೇಡಿ ಎಂದಾಗ ಕೋಪ ಮಾಡಿಕೊಂಡು ಬೂಟಿನಲ್ಲಿ ಹೊಡೆಯುತ್ತೇನೆಂದು ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಶಿಕ್ಷಕಿ ದೂರಿನಲ್ಲಿ ವಿವರಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ : ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 10 ವರ್ಷಗಳ ಜೈಲು; 27 ವರ್ಷಗಳ ಬಳಿಕ ಶಿಕ್ಷೆ ಪ್ರಕಟ


