ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆಗೆ ಬೆಂಬಲ ನೀಡಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಮೂಲಕ 11 ದಿನಗಳಿಮದ ನಡೆಯುತ್ತಿರುವ ಸರ್ಕಾರ ರಚನೆಯ ಸರ್ಕಸ್ ಇನ್ನು ಮುಂದುವರೆಯಲಿದ್ದು ಇನ್ನು ಮೂರು ದಿನದಲ್ಲಿ ಹೊ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಡಳಿತ ಹೇರುವ ಭೀತಿ ಎದುರಾಗಿದೆ.
ಈ ಕುರಿತು ನಿನ್ನೆ ಎರಡು ಹೈ ಲೆವೆಲ್ ಸಭೆಗಳು ನಡೆದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ರವರು ಗೃಹಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದು ಮಾತುಕತೆ ನಡೆಸಿದ್ದಾರೆ. ಅಲ್ಲಿ ಅವರು ನಾವೇ ಸರ್ಕಾರ ರಚಿಸುತ್ತೇವೆಂಬ ವಿಶ್ವಾಸ ಹೊಂದಿದ್ದಾರೆ. ಆದರೆ ಮೈತ್ರಿ ಹೇಗೆ ಎಂಬ ಸ್ಪಷ್ಟನೆಯನ್ನು ನೀಡಿಲ್ಲ.
ಇನ್ನೊಂದೆಡೆ ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್‌ರವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಅಲ್ಲಿ ಬಿಜೆಪಿ ರಾಜ್ಯಕ್ಕೆ ಅಧಿಕಾರಕ್ಕೆ ಬರದಂತೆ ತಡೆಯಲು ಇಂತಹ ಮೈತ್ರಿಕೂಟದ ಅಗತ್ಯವಾಗಿದೆ ಎಂದು ಪವಾರ್ ಹೇಳಿದ್ದಾರೆ. ಆದರೆ ಅದಕ್ಕೆ ಸೋನಿಯಾ ಗಾಂಧಿಯವರು ಒಪ್ಪಿದಂತೆ ಕಾಣುತ್ತಿಲ್ಲ.
ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪವಾರ್ ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸುವ ಅಗತ್ಯವಿದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಶಿವಸೇನೆ – ಬಿಜೆಪಿ ಜಗಳವು ಅವರ “ಆಂತರಿಕ ವಿಷಯ”ವಾಗಿದೆ. ನಾವು ಶಿವಸೇಗೆ ಯಾವುದೇ ಭರವಸೆ ನೀಡಿಲ್ಲ ಎಂದಿದ್ದಾರೆ.
ಇನ್ನು ಶಿವಸೇನೆ ಪಕ್ಷದ ಹಿರಿಯ ಮುಖಂಡ ಸಂಜಯ್ ರಾವತ್ ಅವರು ಸೋಮವಾರ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಲ್ಲದೇ ಸರ್ಕಾರ ರಚಿಸುವ ಹೊಣೆಗಾರಿಕೆ ಬಿಜೆಪಿಯದ್ದು ಎಂದು ತಿಳಿಸಿದ್ದಾರೆ. “ಯಾರು ಜನಾದೇಶವನ್ನು ಹೊಂದಿದ್ದಾರೆ, ಅವರು ಸರ್ಕಾರ ರಚಿಸುತ್ತಾರೆ. ನಾನು ರಾಜ್ಯಪಾಲರಿಗೆ ಸಲಹೆ ನೀಡಲು ಸಾಧ್ಯವಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅವರು ನುಡಿದಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಲ್ಲಿ ಒಂದು ಭಾಗವು ಮೈತ್ರಿಯ ಪರವಾಗಿದೆ ಎಂದು ಹೇಳಲಾಗಿದೆ. ಆದರೆ ಪವಾರ್ ಅವರ ಸಲಹೆಗಳಿಗೆ ಸೋನಿಯಾಗಾಂಧಿಯವರು ಒಪ್ಪದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಭಣಿಸಿದೆ.


