ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂ ಮಂಡಲದ ರಾಯಪೋಲ್ ಗ್ರಾಮದ ಬಳಿ ಸೋಮವಾರ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಆಕೆಯ ಸಹೋದರ ಬರ್ಬರವಾಗಿ ಹತ್ಯೆಗೈದಿರುವ ದುರ್ಘಟನೆ ವರದಿಯಾಗಿದೆ.
ಸಂತ್ರಸ್ತೆ ನಾಗಮಣಿ (26) ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 15 ದಿನಗಳ ಹಿಂದೆ ಅಂದರೆ ನ.21ರಂದು ಯಾದಗಿರಿಗುಟ್ಟಾದಲ್ಲಿ ದಲಿತ ಸಮುದಾಯದ ಯುವಕ ಶ್ರೀಕಾಂತ್ ಎಂಬಾತನನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ನಾಗಮಣಿ ರಾಯಪೋಲ್‌ನಿಂದ ಮಣ್ಣೇಗೌಡ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಆಕೆಯ ಸಹೋದರ ಪರಮೇಶ್ ಉದ್ದೇಶಪೂರ್ವಕವಾಗಿ ತನ್ನ ಕಾರಿಗೆ ಆಕೆಯ ಸ್ಕೂಟರ್ ಅನ್ನು ಡಿಕ್ಕಿ ಹೊಡೆಸಿದ್ದಾನೆ. ಆಕೆ ನೆಲಕ್ಕುರುಳಿ ಬಿದ್ದಾಗ ಆರೋಪಿ ಸಹೋದರ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಗಮಣಿಯ ಸಾವನ್ನು ದೃಢಪಡಿಸಿದ್ದಾರೆ. “ಅವಳ ಪ್ರೇಮ ವಿವಾಹದಿಂದ ಆಕೆಯ ಸಹೋದರ ಕೋಪಗೊಂಡಿದ್ದ ಮತ್ತು ಮರ್ಯಾದಾ ಹತ್ಯೆಯ ಕೃತ್ಯದಲ್ಲಿ ಅವಳನ್ನು ಕೊಂದಿದ್ದಾನೆ ಎಂದು ನಾವು ಶಂಕಿಸುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗಮಣಿ, 2020 ರ ಬ್ಯಾಚ್ ಪೊಲೀಸ್ ಕಾನ್ಸ್‌ಟೇಬಲ್, ಶ್ರೀಕಾಂತ್ ಅವರನ್ನು ಮದುವೆಯಾಗುವ ಮೂಲಕ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಮದುವೆಯು ಕುಟುಂಬದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು. ಹತ ಮಹಿಳೆ ಮತ್ತು ಸೋದರನ ನಡುವೆ ಆಸ್ತಿ ವಿವಾದವಿದ್ದು, ಈ ಕೋನದಿಂದಲೂ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ನಲ್ಲಿ ವಾಸವಿದ್ದ ದಂಪತಿ ವಾರಾಂತ್ಯದಲ್ಲಿ ಇಬ್ರಾಹೀಂಪಟ್ಟಣದಲ್ಲಿಯ ಶ್ರೀಕಾಂತ್ ಅವರ ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೊರಟು ಹೋಗಿದ್ದ ಶ್ರೀಕಾಂತ್ ಪತ್ನಿ ನಾಗಮಣಿ ಕೂಡ ಕೆಲಸಕ್ಕೆ ತೆರಳಿದ್ದಾಳೆಯೇ ಎನ್ನುವುದನ್ನು ತಿಳಿದುಕೊಳ್ಲಲು ಆಕೆಗೆ ಕರೆ ಮಾಡಿದ್ದ. ಈ ವೇಳೆ ತನ್ನ ಸೋದರ ಪರಮೇಶ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ ಎಂದು ನಾಗಮಣಿ ತಿಳಿಸಿದ್ದು, ಬಳಿಕ ಕರೆ ಕಡಿತಗೊಂಡಿತ್ತು.
ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯು ಬಳಿಕ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದ ನಾಗಮಣಿ ತನ್ನ ಸಹೋದರರನ್ನು ಮಾತ್ರ ಹೊಂದಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ…ಕನಿಮೋಳಿ, ಪೆರಿಯಾರ್ ಪ್ರತಿಮೆ ಕುರಿತು ವಿವಾದಾತ್ಮಕ ಹೇಳಿಕೆ; ತಮಿಳುನಾಡು ಬಿಜೆಪಿ ನಾಯಕನಿಗೆ 6 ತಿಂಗಳ ಜೈಲು ಶಿಕ್ಷೆ


