ಕಹಿ ಸತ್ಯಗಳನ್ನು ಹೇಳಿದರೆ, ರಕ್ತವನ್ನೆ ಬೆಲೆತೆರಬೇಕಾಗುತ್ತದೆ ಎಂದು ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಡಾ. ಮೀನಾ ಕಂದಸಾಮಿ ಮಂಗಳವಾರ ಹೇಳಿದ್ದಾರೆ. ಅವರು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಐದನೇ ಪಿ.ಪಿ.ಗೋಮತಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರತಿರೋಧಕ್ಕಾಗಿ ಬರವಣಿಗೆ’ ಕುರಿತು ಮಾತನಾಡುತ್ತಿದ್ದರು.
ಕರ್ನಾಟಕ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಪಿ.ಪಿ.ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಲೇಖಕಿ, ಕವಯಿತ್ರಿ, ಜಾತಿ ವಿರೋಧಿ ಹೋರಾಟಗಾರ್ತಿಯು ಆಗಿರುವ ಮೀನಾ ಕಂದಸಾಮಿ ಅವರು ಮಾತನಾಡುತ್ತಾ, ಯೂನಿವರ್ಸಿಟಿಗಳಲ್ಲಿ ದೊಡ್ಡ ಮಟ್ಟದಲ್ಲಿ ತಳಸಮುದಾಯಗಳ ವಿದ್ಯಾರ್ಥಿಗಳು ಮಾನಸಿಕ, ಹಾಗೂ ದೈಹಿಕ ಶೋಷಣೆ ಅನುಭವಿಸುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಒಂದು ವ್ಯವಸ್ಥೆಯಾಗಿ ಯೂನಿವರ್ಸಿಟಿಗಳು ಬ್ರಾಹ್ಮಣವಾದದ ಅಡ್ಡೆಗಳಾಗಿವೆ. ದೇವಸ್ಥಾನಗಳಲ್ಲಿ ಪುರೋಹಿತರು ಸನಾತನಾವಾದಿಗಳಾಗಿರದೇ ಇರಬಹುದು, ಆದರೆ ಯೂನಿವರ್ಸಿಟಿಗಳಲ್ಲಿ ಇರುವ ಸನಾತನವಾದ ಬಹುಜನರನ್ನು ಉಸಿರುಗಟ್ಟಿಸುವ ಮಟ್ಟಿಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಕಾಲೀನ ಭಾರತದಲ್ಲಿ ಬರವಣಿಗೆ, ಪ್ರತಿರೋಧ ಮತ್ತು ಸೆನ್ಸಾರ್‌ಶಿಪ್‌ಗಳ ಅಪಾಯಗಳ ಬಗ್ಗೆ ಮಾತನಾಡಿದ ಅವರು, ಅಹಿತಕರ ಸತ್ಯಗಳನ್ನು ಮಾತನಾಡಲು ಮುಂದೆ ಬರುತ್ತಿರುವ ಬರಹಗಾರರು ಎದುರಿಸುತ್ತಿರುವ ಹೋರಾಟಗಳತ್ತ ಅವರು ಗಮನ ಸೆಳೆದರು. ”ಸಾಹಿತಿಗಳಾದ ಎಂ.ಎಂ. ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರಿಬ್ಬರೂ ತಮ್ಮ ನಿರ್ಭೀತ ಮಾತುಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಹತ್ಯೆಯಾದರು. ನೀವು ಕಹಿ ಸತ್ಯಗಳನ್ನು ಹೇಳಿದರೆ, ರಕ್ತವನ್ನೆ ಬೆಲೆತೆರಬೇಕಾಗುತ್ತದೆ” ಎಂದು ಅವರು ಟೀಕಿಸಿದರು.
ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಪ್ರಸ್ತುತ ವಾತಾವರಣದ ಬಗ್ಗೆ ಅವರು ವಿಷಾದಿಸಿದ ಅವರು, “ವಿಮರ್ಶಾತ್ಮಕ ಧ್ವನಿಗಳನ್ನು ರಾಷ್ಟ್ರಕ್ಕೆ ಬೆದರಿಕೆ ಎಂದು ಹೇಳಲಾಗುತ್ತದೆ. ಲೇಖಕರನ್ನು ಯಾಕೆ ಕೊಲ್ಲಲಾಗುತ್ತದೆ ಅಥವಾ ಜೈಲಿಗೆ ಹಾಕಲಾಗುತ್ತಿದೆ?. ಇಂತಹ ಜನರನ್ನು ಅರ್ಬನ್ ನಕ್ಸಲರು ಎಂದು ಬ್ರಾಂಡ್ ಮಾಡುವ ಮೂಲಕ ಸರ್ಕಾರವು ಹೋರಾಟಗಾರರು ಮತ್ತು ಬರಹಗಾರರ ಲೇಖನಿಗಳನ್ನು ಹಾಗೂ ದಂಗೆಕೋರರ ಬಂದೂಕುಗಳಿಗೆ ಸಮೀಕರಿಸುತ್ತಿದೆ. ಅಂತಹ ಹೋಲಿಕೆಗಳು ಭಿನ್ನಾಭಿಪ್ರಾಯದ ಧ್ವನಿಗಳಿಗೆ ಸರ್ಕಾರಿ ಕಿರುಕುಳವನ್ನು ಕಾನೂನುಬದ್ಧಗೊಳಿಸುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ.
“ರಾಜಕೀಯ ವ್ಯಕ್ತಿಗಳು ಮತ್ತು ಹೋರಾಟಗಾರರನ್ನು ಮೌನಗೊಳಿಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ನಂತಹ ಸರ್ಕಾರಿ ಯಂತ್ರಗಳ ದುರುಪಯೋಗ ಮಾಡಲಾಗುತ್ತಿದೆ. ಮೂಲತಃ ನ್ಯಾಯವನ್ನು ಎತ್ತಿಹಿಡಿಯಲು ರಚಿಸಲಾಗಿರುವ ಈ ಏಜೆನ್ಸಿಗಳು ಜನರ ನಿಗ್ರಹದ ಸಾಧನಗಳಾಗಿ ಮಾರ್ಪಟ್ಟಿವೆ. ಬರಹಗಾರರು ಸೆನ್ಸಾರ್‌ಶಿಪ್‌ನ ಬಲಿಪಶುಗಳಾಗಿದ್ದಾರೆ. ಈ ದೇಶದಲ್ಲಿ, ಕೇವಲ ಬರವಣಿಗೆ ಮಾತ್ರವಲ್ಲ, ಓದುವುದು ಸಹ ಪ್ರತಿರೋಧವಾಗಿದೆ. ವ್ಯಾಪಕವಾದ ದಮನದ ಸಮಯದಲ್ಲಿ ಸಾಹಿತ್ಯದೊಂದಿಗೆ ವಿಮರ್ಶಾತ್ಮಕವಾಗಿ ತೊಡಗಿಸಿಕೊಳ್ಳಬೇಕು” ಎಂದು ಮೀನಾ ಕಂದಸಾಮಿ ಅವರು ಪ್ರೇಕ್ಷಕರನ್ನು ಒತ್ತಾಯಿಸಿದ್ದಾರೆ.
ದ್ವೇಷ ಭಾಷಣವನ್ನು ಬಹಿರಂಗಪಡಿಸುವುದಕ್ಕಾಗಿ ಅನೇಕ ಕಾನೂನು ಸವಾಲುಗಳನ್ನು ಎದುರಿಸುತ್ತಿರುವ ಪತ್ರಕರ್ತ ಮತ್ತು ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಜುಬೈರ್ ಅವರ ಉದಾಹರಣೆಯನ್ನು ಅವರು ಉಲ್ಲೇಖಿಸಿದ ಅವರು, ಸತ್ಯ ಹೇಳುವವರನ್ನು ದೇಶದ ಶತ್ರುಗಳಾಗಿ ಬಿಂಬಿಸುವ ಪ್ರವೃತ್ತಿಯು ಬೆಳೆಯುತ್ತಿರುವ ಬಗ್ಗೆ ಎತ್ತಿತೋರಿಸಿದ್ದಾರೆ. ಸತ್ಯ ಮಾತನಾಡುವ, ಅನ್ಯಾಯವನ್ನು ಬಯಲಿಗೆಳೆದು, ಶೋಷಿತರಿಗೆ ಸಾಂತ್ವನ ಹೇಳುವವರೇ ನಿಜವಾದ ದೇಶಭಕ್ತರೆಂದು ಗುರುತಿಸಲ್ಪಡುತ್ತಾರೆ ಎಂದು ಡಾ.ಕಂದಸಾಮಿ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುಪಿ ಪೊಲೀಸರ ಎಫ್ಐಆರ್ ಪ್ರಶ್ನಿಸಿ ಪತ್ರಕರ್ತ ಝುಬೈರ್ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ಪೀಠ
ಯುಪಿ ಪೊಲೀಸರ ಎಫ್ಐಆರ್ ಪ್ರಶ್ನಿಸಿ ಪತ್ರಕರ್ತ ಝುಬೈರ್ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ಪೀಠ


