ಅದಾನಿ ದೋಷಾರೋಪಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮುಖಂಡರು ಇಂದು (ಡಿ.4) ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅವರು ‘ಮೋದಿ-ಅದಾನಿ ಒಂದೇ’ ಎಂಬ ಬ್ಯಾನರ್ ಹಿಡಿದುಕೊಂಡಿದ್ದರು. ಪ್ರತಿಪಕ್ಷಗಳ ಪ್ರತಿಭಟನೆಯಿಂದ ಟಿಎಂಸಿ ದೂರವಿತ್ತು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆಯೇ ಕಾಂಗ್ರೆಸ್ ನಿಯೋಗದೊಂದಿಗೆ ಹಿಂಸಾಚಾರ ನಡೆದಿರುವ ಉತ್ತರ ಪ್ರದೇಶದ ಸಂಭಾಲ್‌ಗೆ ತೆರಳಿದ್ದ ಹಿನ್ನೆಲೆ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.
ಸಂಸತ್ತಿನ ಗೇಟ್‌ಗಳ ಮುಂದೆ ಪ್ರತಿಭಟನೆ ನಡೆಸದಂತೆ ಸಂಸದರಿಗೆ ಲೋಕಸಭೆ ಸಚಿವಾಲಯ ಮಂಗಳವಾರ ಸಲಹೆ ನೀಡಿತ್ತು. ಸಂಚಾರಕ್ಕೆ ಅಡ್ಡಿ ಮತ್ತು ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿತ್ತು. ಇಂದು ಪ್ರತಿಭಟಿಸಿದ ಜಾಗದಲ್ಲೇ ಮಂಗಳವಾರ ಪ್ರತಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದರು.
ಲಂಚ, ವಂಚನೆ ಆರೋಪದ ಮೇಲೆ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಕಂಪನಿಯ ಇತರ ಅಧಿಕಾರಿಗಳ ವಿರುದ್ದ ಯುಎಸ್ ಪ್ರಾಸಿಕ್ಯೂಟರ್‌ಗಳು ದೋಷಾರೋಪಣೆ ಮಾಡಿರುವ ಹಿನ್ನೆಲೆ, ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಈ ಪ್ರಕರಣದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿವೆ.
ಯುಎಸ್ ನ್ಯಾಯಾಲಯದಲ್ಲಿ ಅದಾನಿ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು ಬಿಲಿಯನೇರ್ ಕೈಗಾರಿಕೋದ್ಯಮಿಗಳ ಸಮೂಹವನ್ನು ಒಳಗೊಂಡಿರುವ ವಿವಿಧ ‘ವಂಚನೆಗಳ’ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ. ಅದಾನಿಯವರನ್ನು ತಕ್ಷಣ ಬಂಧಿಸುವಂತೆ ರಾಹುಲ್ ಗಾಂಧಿ ಈಗಾಗಲೇ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ | ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದ ಫಡ್ನವಿಸ್


