ಮಸೀದಿ ಸಮೀಕ್ಷೆ ಸಂಧರ್ಭದಲ್ಲಿ ಹಿಂಸಾಚಾರ ನಡೆದ ಸಂಭಾಲ್‌ಗೆ ತೆರಳುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ಇಲ್ಲಿನ ಗಾಜಿಪುರ ಗಡಿಯಲ್ಲಿ ತಡೆದಿದ್ದಾರೆ.
“ನಾನು ಪೊಲೀಸರೊಂದಿಗೆ ಸಂಭಾಲ್‌ಗೆ ಏಕಾಂಗಿಯಾಗಿ ಹೋಗಲು ಸಿದ್ಧನಿದ್ದೇನೆ. ಆದರೆ, ಅವರು ಅನುಮತಿಸಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
ರಾಯ್ ಬರೇಲಿ ಸಂಸದ ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಬೆಳಿಗ್ಗೆ ಘಾಜಿಪುರ ಗಡಿಯನ್ನು ತಲುಪಿದರು. ಅಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಂಭಾಲ್‌ಗೆ ಪ್ರವೇಶಿಸುವುದನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಯಿತು. ಹಲವು ಹೊತ್ತಿನ ಮಾತುಕತೆ ಬಳಿಕ ರಾಹುಲ್ ಗಾಂಧಿ ದೆಹಲಿಗೆ ತೆರಳಿದರು.
ನಂತರ ಮಾತನಾಡಿದ ಅವರು, “ನಾವು ಸಂಭಾಲ್‌ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ, ಪೊಲೀಸರು ನಿರಾಕರಿಸುತ್ತಿದ್ದು, ನಮಗೆ ಅವಕಾಶ ನೀಡುತ್ತಿಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಸ್ಥಳಕ್ಕೆ ಹೋಗುವುದು ನನ್ನ ಹಕ್ಕು.. ನಾನು ಒಬ್ಬನೇ ಹೋಗಲು ಸಿದ್ಧ ಎಂದು ಪೊಲೀಸರೊಂದಿಗೆ ಹೇಳಿದೆ. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
“ಕೆಲವು ದಿನಗಳಲ್ಲಿ ಹಿಂತಿರುಗಿದರೆ, ಅವರು ನಮ್ಮನ್ನು ಬಿಡುತ್ತಾರೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಇದು ಲೋಕಸಭೆಯ ವಿರೋಧ ಪಕ್ಷದ ನಾಯಕನ ಹಕ್ಕಿಗೆ ವಿರುದ್ಧವಾಗಿದೆ. ನನಗೆ ಹೋಗಲು ಅವಕಾಶ ನೀಡಬೇಕು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡ ಗಾಂಧಿ, ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
“ನಾವು ಸಂಭಾಲ್‌ಗೆ ಹೋಗಿ ಅಲ್ಲಿ ಏನಾಯಿತು ಎಂಬುದನ್ನು ನೋಡಲು ಬಯಸುತ್ತೇವೆ. ನಾವು ಜನರನ್ನು ಭೇಟಿಯಾಗಲು ಬಯಸುತ್ತೇವೆ. ಆದರೆ, ನನ್ನ ಸಾಂವಿಧಾನಿಕ ಹಕ್ಕನ್ನು ನನಗೆ ಅನುಮತಿಸಲಾಗುತ್ತಿಲ್ಲ. ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಾವು ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
ವಯನಾಡ್ ಸಂಸದೆ ಪ್ರಿಯಾಂಕಾ ವಾದ್ರಾ ಮಾತನಾಡಿ, “ಸಂಭಾಲ್‌ನಲ್ಲಿ ನಡೆದದ್ದು ತಪ್ಪಾಗಿದೆ. ರಾಹುಲ್ ವಿರೋಧ ಪಕ್ಷದ ನಾಯಕ. ಅವರಿಗೆ ಸಾಂವಿಧಾನಿಕ ಹಕ್ಕಿದೆ. ಅವರು ಇತರ ಜನರಿಗಿಂತ ಭಿನ್ನರು. ಅವರನ್ನು ತಡೆಯಲು ಸಾಧ್ಯವಿಲ್ಲ, ಸಂತ್ರಸ್ತರನ್ನು ಭೇಟಿ ಮಾಡಲು ಸಾಂವಿಧಾನಿಕ ಹಕ್ಕು ಇದೆ; ಅವರಿಗೆ ಅವಕಾಶ ನೀಡಬೇಕು” ಎಂದರು.
ಸಂಭಾಲ್‌ನಲ್ಲಿ ಭಾನುವಾರದಂದು ಮುಕ್ತಾಯಗೊಳ್ಳಲಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163 (ಉಪದ್ರವ ಅಥವಾ ಅಪಾಯದ ತುರ್ತು ಪ್ರಕರಣಗಳಲ್ಲಿ ಆದೇಶವನ್ನು ನೀಡುವ ಅಧಿಕಾರ) ಅಡಿಯಲ್ಲಿ ನಿರ್ಬಂಧಗಳನ್ನು ಈಗ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.
ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಅವರು ಮಂಗಳವಾರ ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್‌ನ ಪೊಲೀಸ್ ಕಮಿಷನರ್‌ಗಳು, ಅಮ್ರೋಹಾ ಮತ್ತು ಬುಲಂದ್‌ಶಹರ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ರಾಹುಲ್ ಗಾಂಧಿಯನ್ನು ತಮ್ಮ ಜಿಲ್ಲೆಗಳ ಗಡಿಯಲ್ಲಿ ನಿಲ್ಲಿಸುವಂತೆ ಸೂಚಿಸಿದ್ದಾರೆ.
“ನಾವು ರಾಹುಲ್ ಗಾಂಧಿಯವರನ್ನು ಸಂಭಾಲ್ ಪ್ರವೇಶಕ್ಕೆ ಅನುಮತಿಸುವುದಿಲ್ಲ. ಏಕೆಂದರೆ, ಅಲ್ಲಿನ ಆಡಳಿತವು ನಿಷೇಧಾಜ್ಞೆಗಳನ್ನು ಹೊರಡಿಸಿದೆ. ಪೊಲೀಸರು ಅವರನ್ನು ಯುಪಿ ಗೇಟ್‌ನಲ್ಲಿ ನಿಲ್ಲಿಸುತ್ತಾರೆ” ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.
ನವೆಂಬರ್ 19 ರಿಂದ ಸಂಭಾಲ್‌ನಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಮೊಘಲರ ಕಾಲದ ಮಸೀದಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಈ ಹಿಂದೆ ಹರಿಹರ ದೇವಾಲಯವೊಂದು ಆ ಸ್ಥಳದಲ್ಲಿತ್ತು ಎಂಬ ಹೇಳಿಕೆಯ ಮೇರೆಗೆ ಸಮೀಕ್ಷೆ ನಡೆಸಲಾಯಿತು.
ನವೆಂಬರ್ 24 ರಂದು ನಡೆದ ಎರಡನೇ ಸಮೀಕ್ಷೆಯ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಜಮಾಯಿಸಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ; ಸಂಭಾಲ್ ಹಿಂಸಾಚಾರ: ಪರಿಸ್ಥಿತಿ ಅವಲೋಕಿಸಲು ಘಟನಾ ಸ್ಥಳಕ್ಕೆ ಹೊರಟ ರಾಹುಲ್-ಪ್ರಿಯಾಂಕಾ


