ಬ್ಲಾಕ್, ಜಿಲ್ಲೆ, ರಾಜ್ಯ ಸಮಿತಿ ಸೇರಿದಂತೆ ಉತ್ತರ ಪ್ರದೇಶ ಕಾಂಗ್ರೆಸ್‌ನ ಸಂಪೂರ್ಣ ಘಟಕವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ಡಿ.5) ವಿಸರ್ಜಿಸಿದ್ದಾರೆ.
ಮುಂಬರುವ 2027ರ ವಿಧಾನಸಭೆಯ ಚುನಾವಣೆಗೆ ತಯಾರಿ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಪುನರ್‌ರಚನೆಯ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, “ತಕ್ಷಣದಿಂದ ಜಾರಿಗೆ ಬರುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳೊಂದಿಗೆ ಪಿಸಿಸಿಯ ಸಂಪೂರ್ಣ ರಾಜ್ಯ ಘಟಕವನ್ನು ವಿಸರ್ಜಿಸುವ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
2019 ಮತ್ತು 2024ರ ಲೋಕಸಭೆ ಚುನಾವಣೆ ಮತ್ತು 2022ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ನಿರಾಶಾದಾಯಕವಾಗಿತ್ತು. ಆದ್ದರಿಂದ, ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮತ್ತೆ ಬಲಪಡಿಸುವ ಅನಿವಾರ್ಯತೆ ಅದರ ನಾಯಕರಿಗೆ ಎದುರಾಗಿದೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ತಳ ಮಟ್ಟದಿಂದ ಬಲಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಯುವ ಜನರಿಗೆ ಅವಕಾಶಗಳನ್ನು ಕೊಟ್ಟು ಶಕ್ತಿ ತುಂಬುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಬರೋಬ್ಬರಿ 403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಅತಿ ದೊಡ್ಡ ರಾಜ್ಯದ ಚುನಾವಣೆ ಪಕ್ಷಕ್ಕೆ ಬಹಳ ಮಹತ್ವದ್ದಾಗಿದೆ. ಹಾಗಾಗಿ, ಈಗಲೇ ಪಕ್ಷ ಸಂಘಟನೆಗೆ ಎಐಸಿಸಿ ಮುಂದಾಗಿದೆ. ಅದರ ಮೊದಲ ಹಂತವೇ ಸಮಿತಿಗಳ ವಿಸರ್ಜನೆ ಎಂದು ಹೇಳಲಾಗುತ್ತಿದೆ.
ನವೆಂಬರ್ 6ರಂದು ಮಲ್ಲಿಕಾರ್ಜುನ ಖರ್ಗೆ ಅವರು ಹಿಮಾಚಲ ಪ್ರದೇಶದ ಬ್ಲಾಕ್, ಜಿಲ್ಲೆ, ರಾಜ್ಯ ಸಮಿತಿ ಸೇರಿದಂತೆ ಎಲ್ಲಾ ಘಟಕಗಳನ್ನು ವಿಸರ್ಜಿಸಿದ್ದರು.
ಇದನ್ನೂ ಓದಿ : ರಾಹುಲ್ ವಿರುದ್ಧ ಅವಹೇಳನಕಾರಿ ಭಾಷೆ: ಬಿಜೆಪಿ ಸಂಸದರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ


