ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಕಾನೂನು ಘಟಕ ಭಾನುವಾರ (ಡಿ.8) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ‘ಸಂವಿಧಾನ ವಿರೋಧಿ’ ಹೇಳಿಕೆ ನೀಡಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ಗ್ರಂಥಾಲಯ ಸಭಾಂಗಣದಲ್ಲಿ ವಿಹೆಚ್‌ಪಿಯ ‘ಕಾಶಿ ಪ್ರಾಂತ’ (ವಾರಣಾಸಿ ವಲಯ) ಮತ್ತು ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಅಗತ್ಯತೆ’ಯ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ “ಇದು ಹಿಂದುಸ್ತಾನ. ಈ ದೇಶ, ಕಾನೂನು ಬಹುಸಂಖ್ಯಾತರ ಇಚ್ಚೆಯಂತೆ ನಡೆಯುತ್ತದೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ” ಎಂದಿದ್ದಾರೆ.
“ಬಹುಸಂಖ್ಯಾತರಿಗೆ ಅನುಗುಣವಾಗಿ ಕಾನೂನು ಕಾರ್ಯನಿರ್ವಹಿಸುತ್ತದೆ. ಅದು ಹೇಗೆ ಎಂಬುವುದನ್ನು ಕುಟುಂಬ ಅಥವಾ ಸಮಾಜದ ಹಿನ್ನೆಲೆಯಲ್ಲಿ ನೋಡಿ. ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷಕ್ಕೆ ಯಾವುದು ಕಾರಣವಾಗುತ್ತದೋ ಅದನ್ನು ಒಪ್ಪಲಾಗುತ್ತದೆ. ಇದು ಕಾನೂನು, ಹೈಕೋರ್ಟ್ ನ್ಯಾಯಾಧೀಶರು ಹೀಗೆ ಹೇಳಿದ್ರಾ? ಎಂದು ನೀವು ಕೇಳುವಂತಿಲ್ಲ” ಎಂದು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ, ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ, ಸತಿ ಸಹಗಮನ ಪದ್ದತಿಯಂತಹ ಆಚರಣೆಗಳನ್ನು ಏಕೆ ರದ್ದುಗೊಳಿಸಲಾಯಿತು? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ, ಮುಸ್ಲಿಂ ಸಮುದಾಯ ಬಹು ಪತ್ನಿತ್ವ ಅಭ್ಯಾಸವನ್ನು ಮುಂದುವರೆಸಿದೆ. ಈ ಪದ್ಧತಿ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಶಾಸ್ತ್ರಗಳು ಮತ್ತು ವೇದಗಳಂತಹ ಹಿಂದೂ ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ದೇವತೆಗಳಾಗಿ ಪೂಜಿಸಲಾಗಿದ್ದರೂ, ಒಂದು ಸಮುದಾಯದ ಜನರು ಇನ್ನೂ ಅನೇಕ ಹೆಂಡತಿಯರನ್ನು ಹೊಂದಲು, ಹಲಾಲಾದಲ್ಲಿ ತೊಡಗಿಸಿಕೊಳ್ಳಲು ಅಥವಾ ತ್ರಿವಳಿ ತಲಾಖ್ ಅಭ್ಯಾಸ ಮಾಡಲು ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ
ಈ ದೇಶವು ಒಂದು ಸಂವಿಧಾನ ಮತ್ತು ಒಂದು ದಂಡದ ಕಾನೂನುಗಳನ್ನು ಹೊಂದಿರುವುದರಿಂದ, ನಾಗರಿಕ ಕಾನೂನುಗಳನ್ನು ಸಹ ಏಕೀಕರಿಸುವುದು ತಾರ್ಕಿಕವಾಗಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದಿದ್ದಾರೆ.
“ನಮ್ಮ ಶಾಸ್ತ್ರಗಳು ಮತ್ತು ವೇದಗಳಲ್ಲಿ ದೇವತೆ ಎಂದು ಪರಿಗಣಿಸಲ್ಪಟ್ಟ ಹೆಣ್ಣನ್ನು ನೀವು ಅಗೌರವಿಸಲು ಸಾಧ್ಯವಿಲ್ಲ. ನೀವು ನಾಲ್ವರು ಪತ್ನಿಯರನ್ನು ಹೊಂದಲು, ಹಲಾಲಾ ಮಾಡಲು ಅಥವಾ ತ್ರಿವಳಿ ತಲಾಖ್ ಹೇಳುವ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ನಮಗೆ ತ್ರಿವಳಿ ತಲಾಕ್ ಹೇಳುವ ಹಕ್ಕಿದೆ, ನಾವು ಜೀವನಾಂಶ ನೀಡುವುದಿಲ್ಲ ಎಂದು ನೀವು ಹೇಳುತ್ತೀರಿ. ನೀವು ಆ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ಆ ಹಕ್ಕು ವಿಎಚ್‌ಪಿ, ಆರ್‌ಎಸ್‌ಎಸ್ ಅಥವಾ ಹಿಂದೂ ಧರ್ಮದ ಪರವಾಗಿಲ್ಲ. ಈ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಈ ಬಗ್ಗೆ ಮಾತನಾಡಿದೆ. ಇದು ನ್ಯಾಯಾಲಯ ಐತಿಹಾಸಿಕ ಗ್ರಂಥಾಲಯ, ಇಲ್ಲಿ ಅನೇಕ ಮಹನಿಯರು ಬಂದು ಹೋಗಿದ್ದಾರೆ. ನಾನು ಅವರಲ್ಲಿ ಒಬ್ಬನಾಗಿ ಮಾತನಾಡುತ್ತಿದ್ದೇನೆ. ನಾನು ಸುಮ್ಮನೆ ಹೇಳುತ್ತಿಲ್ಲ, ಪ್ರತಿಜ್ಞೆ ಮಾಡುತ್ತಿದ್ದೇನೆ. ಶೀಘ್ರದಲ್ಲಿ ಏಕರೂಪ ಕಾನೂನು ಬರಲಿದೆ” ಎಂದು ಹೇಳಿದ್ದಾರೆ.
ತನ್ನ ಭಾಷಣದ ಆರಂಭದಲ್ಲಿ, ನಾನು ಗಂಗೆ ಹರಿಯುವ ದೇಶದ ನಿವಾಸಿ ಎಂದು ಹೇಳುವವರೆ ನನ್ನ ಪರಿಚಯ ಪರಿಪೂರ್ಣವಾಗದು. ಗಾಯ್ (ಹಸು) ಗಂಗಾ (ಗಂಗೆ) ಗೀತಾ(ಗೀತೆ) ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದು ನ್ಯಾಯಮೂರ್ತಿ ಪ್ರತಿಪಾದಿಸಿದ್ದಾರೆ.
ಗಂಗೆಯಲ್ಲಿ ಸ್ನಾನ ಮಾಡುವವರು ಅಥವಾ ಚಂದನ ಹಾಕಿಕೊಳ್ಳುವವರು ಮಾತ್ರ ಹಿಂದೂಗಳಲ್ಲ. ಈ ದೇಶವನ್ನು ತಾಯಿ ಎಂದು ಪರಿಗಣಿಸುವರು, ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುವವರು ಹಿಂದೂಗಳು. ಅವರ ಧಾರ್ಮಿಕ ಆಚರಣೆಗಳು ಅಥವಾ ನಂಬಿಕೆಗಳ ಕುರಾನ್ ಅಥವಾ ಬೈಬಲ್ ಆಗಿರಲಿ ಅವರು ಹಿಂದೂಗಳು ಎಂದಿದ್ದಾರೆ.
ನಮ್ಮ ಹಿಂದೂ ಧರ್ಮದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿ, ಹೆಣ್ಣುಮಗುವಿನ ಹತ್ಯೆಯಂತಹ ಅನೇಕ ಸಾಮಾಜಿಕ ಅನಿಷ್ಟಗಳು ಇತ್ತು. ಆದರೆ, ರಾಮ್ ಮೋಹನ್ ರಾಯ್ ಅವರಂತಹ ಸುಧಾರಕರು ಈ ಪದ್ಧತಿಗಳನ್ನು ಕೊನೆಗೊಳಿಸಲು ಹೋರಾಡಿದರು. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ಅನಿಷ್ಟಗಳಾದ ಹಲಾಲಾ, ತ್ರಿವಳಿ ತಲಾಖ್ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ. ಅವುಗಳನ್ನು ಕೊನೆಗೊಂಡಿಲ್ಲ, ಅದನ್ನು ಎದುರಿಸುವ ಧೈರ್ಯವೂ ಇಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರು ಬೆಂಕಿಯ ಸುತ್ತಲೂ ಏಳು ಸುತ್ತು ಹಾಕಿ ಮದುವೆಯಾಗಬೇಕು, ಗಂಗಾ ಸ್ನಾನ ಮಾಡಿ ಚಂದನ ಹಚ್ಚಿಕೊಳ್ಳಬೇಕು ಎಂದು ನಾವು ಭಯಸುವುದಿಲ್ಲ. ಈ ದೇಶದ ಸಂಸ್ಕೃತಿ, ಮಹಾನ್ ವ್ಯಕ್ತಿಗಳು ಮತ್ತು ಈ ನೆಲದ ದೇವರನ್ನು ಗೌರವಿಸುವುದನ್ನು ಬಯಸುತ್ತೇವೆ ಅಷ್ಟೇ ಎಂದಿದ್ದಾರೆ.
ನ್ಯಾ. ಶೇಖರ್ ಕುಮಾರ್ ಯಾದವ್ ಅವರು ಸುಪ್ರೀಂ ಕೋರ್ಟ್‌ನ ಅಯೋಧ್ಯೆ ತೀರ್ಪಿನ ಬಗ್ಗೆಯೂ ಮಾತನಾಡಿದ್ದಾರೆ. ರಾಮಲಲ್ಲಾನನ್ನು ವಿಮೋಚನೆಗೊಳಿಸಲು ಮತ್ತು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುವುದನ್ನು ಕಾಣಲು ನಮ್ಮ ಪೂರ್ವಜರು ಅನೇಕ ತ್ಯಾಗ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಹಿಂದೂಗಳು ತಮ್ಮ ಅಹಿಂಸೆ ಮತ್ತು ದಯೆಗೆ ಹೆಸರುವಾಸಿಯಾಗಿದ್ದು, ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು. ನಮ್ಮ ಧಾರ್ಮಿಕ ಆಚರಣೆಗಳು ಮತ್ತು ನಮ್ಮ ಪೂಜ್ಯ ವ್ಯಕ್ತಿಗಳು ಯಾವಾಗಲೂ ಮೊದಲ ಸ್ಥಾನದಲ್ಲಿರಬೇಕು ಎಂದು ಮಕ್ಕಳಿಗೆ ಕಲಿಸುವ ಮಹತ್ವವನ್ನು ಒತ್ತಿ ಹೇಳಿದರು.
“ಕಠ್‌ಮುಲ್ಲಾಗಳು’ ದೇಶ ವಿರೋಧಿಗಳು”
ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ವಿರುದ್ಧ ಸಾಮಾನ್ಯವಾಗಿ ಬಳಸಲಾಗುವ ‘ಕಠ್‌ಮುಲ್ಲಾ’ ಎಂಬ ಪದ ಬಳಕೆಯೂ ಸೇರಿದಂತೆ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನ್ಯಾಯಮೂರ್ತಿ, ‘ಕಠ್‌ಮುಲ್ಲಾ’ ಎಂಬ ಪದ ಉಲ್ಲೇಖಿಸಿ, ದೇಶವು ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
I am pretty sure “kathmullah” is a racist pejorative. Never thought that I would hear a High Court judge use such a term in public. Gogoi, who as CJI, reversed Dipak Misra to bring this chap as HC judge and Bobde who confirmed him have a lot to answer.
— sanjoy ghose (@advsanjoy) December 9, 2024
“ಇದು (ಕಠ್‌ಮುಲ್ಲಾ) ಸರಿಯಾದ ಪದ ಅಲ್ಲದಿರಬಹುದು. ಆದರೆ, ಅದನ್ನು ಹೇಳಲು ನಾನು ಹಿಂಜರಿಯಲಾರೆ. ಏಕೆಂದರೆ ಅವರು ದೇಶಕ್ಕೆ ಮಾರಕ ಅವರು ಹಾನಿಕಾರಕ. ಅವರು ರಾಷ್ಟ್ರ ವಿರೋಧಿಗಳು ಮತ್ತು ಜನರಿಗೆ ಕುಮ್ಮಕ್ಕು ನೀಡುವವರು. ಅವರು ದೇಶದ ಪ್ರಗತಿ ಬಯಸದಂತಹ ಜನ. ಅವರ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು” ಎಂದು ಹೇಳಿದ್ದಾರೆ.
ಆಕ್ರೋಶಕ್ಕೆ ಕಾರಣವಾದ ನ್ಯಾಯಾಧೀಶರ ಭಾಷಣ
ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಸಂವಿಧಾನ ವಿರೋಧಿ, ಮುಸ್ಲಿಂ ವಿರೋಧಿ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಎಐಎಂಐಎಂ ಪಕ್ಷದ ಮುಖಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
“ವಿಹೆಚ್‌ಪಿಯನ್ನು ವಿವಿಧ ಸಂದರ್ಭಗಳಲ್ಲಿ ನಿಷೇಧಿಸಲಾಗಿತ್ತು. ಸರ್ದಾರ್ ವಲ್ಲಭಾಯಿ ಪಟೇಲ್ ಅವರು ‘ದ್ವೇಷ ಮತ್ತು ಹಿಂಸೆಯ ಶಕ್ತಿ’ ಎಂದು ನಿಷೇಧಿಸಿದ ಸಂಘಟನೆಯಾದ ಆರ್‌ಎಸ್‌ಎಸ್‌ನೊಂದಿಗೆ ಇದು ಸಂಬಂಧ ಹೊಂದಿದೆ. ಇಂತಹ ಸಂಘಟನೆಯ ಸಮಾವೇಶದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಭಾಗವಹಿಸಿರುವುದು ದುರದೃಷ್ಟಕರ ಎಂದಿದ್ದಾರೆ.
The VHP was banned on various occasions. It is associated with RSS, an organisation that Vallabhai Patel banned for being a ‘force of hate and violence.’
It is unfortunate that a High Court judge attended the conference of such an organisation. This “speech” can be easily… https://t.co/IMce7aYbcf
— Asaduddin Owaisi (@asadowaisi) December 9, 2024
“ಹೈಕೋರ್ಟ್ ನ್ಯಾಯಮೂರ್ತಿಯವರ ಭಾಷಣವನ್ನು ಸುಲಭವಾಗಿ ತಿರಸ್ಕರಿಸಬಹುದು. ಆದರೆ, ಅವರಿಗೆ ಭಾರತದ ಸಂವಿಧಾನವು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದನ್ನು ಬಯಸುತ್ತದೆ ಎಂದು ಅವರಿಗೆ ನೆನಪಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
“ಭಾರತದ ಸಂವಿಧಾನವು ಬಹುಸಂಖ್ಯಾತರ ಪರವಾಗಿಲ್ಲ, ಅದು ಪ್ರಜಾಸತ್ತಾತ್ಮಕವಾಗಿದೆ. ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗಿದೆ. ಅಂಬೇಡ್ಕರ್ ಹೇಳಿದಂತೆ “ರಾಜನಿಗೆ ಆಳುವ ಯಾವುದೇ ದೈವಿಕ ಹಕ್ಕಿಲ್ಲ, ಅದೇ ರೀತಿ ಬಹುಸಂಖ್ಯಾತರಿಗೂ ಆಳುವ ದೈವಿಕ ಹಕ್ಕಿಲ್ಲ” ಎಂದಿದ್ದಾರೆ.
A High Court judge used the word ‘kathmulla’ and set down conditions for Muslims in India (as if we need his permission). Just some reminders from the ‘Restatement of Values of Judicial Life’ (1997):
1. Justice must not merely be done but it must also be seen to be done. The…
— Asaduddin Owaisi (@asadowaisi) December 9, 2024
“ನ್ಯಾಯಮೂರ್ತಿಯ ಭಾಷಣ ಕೊಲಿಜಿಯಂ ವ್ಯವಸ್ಥೆಯನ್ನು ದೂಷಿಸುತ್ತದೆ ಮತ್ತು ನ್ಯಾಯಾಂಗ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ವಿಹೆಚ್‌ಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಂದ ಮುಂದೆ ಅಲ್ಪಸಂಖ್ಯಾತರು ನ್ಯಾಯ ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯತೆ ಕುರಿತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಭಾಷಣ


