ಲಕ್ನೋ: ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಸಂಭಾಲ್ ನ ಶಾಹಿ ಮಸೀದಿಯ ಸಮೀಕ್ಷಾ ವರದಿಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ಅಡ್ವೋಕೇಟ್ ಕಮಿಷನರ್ ರಮೇಶ್ ರಾಘವ್ ಅವರು ನ್ಯಾಯಾಲಯವನ್ನು ಕೋರಿರುವುದರಿಂದ ಸಂಭಾಲ್‌ನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು (ಹಿರಿಯ ವಿಭಾಗ) ಮಾನ್ಯಮಾಡಿದ್ದಾರೆ.
ಸಂಭಾಲ್ ಮಸೀದಿ ಪ್ರಕರಣದಲ್ಲಿ ಯಾವುದೇ ಆದೇಶವನ್ನು ನೀಡದಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ನ್ಯಾಯಾಲಯ ನಿರಾಕರಿಸಿದೆ ಮತ್ತು ಜನವರಿ 8ಕ್ಕೆ ವಿಚಾರಣೆಯ ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ.
ವಕೀಲ ಕಮಿಷನರ್‌ರ ಸಮೀಕ್ಷಾ ವರದಿಯನ್ನು ತಿರಸ್ಕರಿಸುವಂತೆ ಸಲ್ಲಿಸಿದ ಶಾಹಿ ಮಸೀದಿ ಸಮಿತಿಯ ಅರ್ಜಿಯನ್ನೂ ನ್ಯಾಯಾಲಯವು ಒಪ್ಪಿಕೊಂಡಿದೆ.
ನಾನು ಸಂಭಾಲ್ ಮಸೀದಿಯ ಕುರಿತು ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೆ 15 ದಿನಗಳ ಕಾಲಾವಕಾಶ ಕೇಳಿದ್ದೇನೆ. ಆದರೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ನನ್ನ ಅರ್ಜಿಯನ್ನು ಕಡತದಲ್ಲಿ ಇರಿಸುವುದಕ್ಕೆ ಪರಿಗಣಿಸಲಾಗಿದೆ ಎಂದು ಕಮೀಷನರ್ ತಿಳಿಸಿದ್ದಾರೆ.
ಸಮೀಕ್ಷೆಯ ಅಂತಿಮ ವರದಿ ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿದೆ. ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗುವುದು. ಆದರೆ ಆರೋಗ್ಯ ಸಮಸ್ಯೆಗಳ ಕಾರಣ, ನಾನು ನ್ಯಾಯಾಲಯದಿಂದ 15 ದಿನಗಳ ಕಾಲಾವಕಾಶವನ್ನು ಕೇಳಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಮೀಷನರ್ ಅವರು ಹೇಳಿದ್ದಾರೆ.
ನನಗೆ ಕಳೆದ ಮೂರು ದಿನಗಳಿಂದ ಜ್ವರವಿದೆ. ವರದಿಯನ್ನು ವಿಶ್ಲೇಷಿಸಲು ನನಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯವು ಅಡ್ವೋಕೇಟ್ ಕಮಿಷನರ್ ಮತ್ತು ಮಸೀದಿ ಸಮಿತಿಯ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಸಂಭಾಲ್ ಮಸೀದಿಯ ಸಮೀಕ್ಷೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಕಾರಣ ಯಾವುದೇ ಆದೇಶವನ್ನು ನೀಡಲಿಲ್ಲ ಎಂದು ಸಂಭಾಲ್‌ನ ಜಿಲ್ಲಾ ಸರ್ಕಾರಿ ವಕೀಲ ಪ್ರಿನ್ಸ್ ಶರ್ಮಾ ಹೇಳಿದರು.
ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು ಎಂದು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸಮೀಕ್ಷೆಗೆ ನ್ಯಾಯಾಲಯವು ಆದೇಶ ನೀಡಿತ್ತು. ನಂತರ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ನವೆಂಬರ್ 19 ರಂದು ನಡೆಸಲಾಗಿತ್ತು.
ನವೆಂಬರ್ 24ರಂದು ಮತ್ತೆ ಮಸೀದಿ ಸಮೀಕ್ಷೆ ನಡೆಸುತ್ತಿದ್ದಾಗ ಹಿಂಸಾಚಾರ ನಡೆದಿತ್ತು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಸುಮಾರು 29 ನಮ್ಮ ಸಿಬ್ಬಂದಿ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಹಿಂಸಾಚಾರದ ನಂತರ, ಪಟ್ಟಣದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ನವೆಂಬರ್ 29 ರಂದು ಸುಪ್ರೀಂ ಕೋರ್ಟ್, ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದ ಯಾವುದೇ ಆದೇಶವನ್ನು ನೀಡದಂತೆ ಸಂಭಾಲ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.
ಅಲಹಾಬಾದ್ ಹೈಕೋರ್ಟ್ ಮಸೀದಿ ಸಮಿತಿಯ ಅರ್ಜಿಯನ್ನು ವಿಚಾರಣೆ ನಡೆಸುವವರೆಗೂ ಸಮೀಕ್ಷೆಯ ವರದಿಯನ್ನು ಸೀಲ್ ಮಾಡಿ ಇಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಂಭಾಲ್ ಜಿಲ್ಲೆಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು (ಹಿರಿಯ ವಿಭಾಗ) ನವೆಂಬರ್ 19 ರಂದು ಜೈನ್ ಅವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಶಾಹಿ ಮಸೀದಿಯ ಸಮೀಕ್ಷೆಯನ್ನು ನಡೆಸಲು ಅಡ್ವೋಕೆಟ್ ಕಮಿಷನರ್ ಅನ್ನು ನೇಮಿಸುವಂತೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ರಮೇಶ್ ರಾಘವ್ ಅವರನ್ನು ಅಡ್ವೋಕೆಟ್ ಕಮಿಷನರ್ ಆಗಿ ನೇಮಿಸಲಾಯಿತು. ಅದೇ ದಿನ ಸಂಜೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕ್ರಿಶನ್ ಕುಮಾರ್ ಅವರ ಸಮ್ಮುಖದಲ್ಲಿ ಮಸೀದಿಯ ಆರಂಭಿಕ ಸಮೀಕ್ಷೆಯನ್ನು ನಡೆಸಲಾಯಿತು.
ಎರಡನೇ ಸುತ್ತಿನ ಸಮೀಕ್ಷೆಯು ನವೆಂಬರ್ 24 ರಂದು ಪ್ರಾರಂಭವಾಯಿತು. ನವೆಂಬರ್ 29 ರಂದು ಮುಂದಿನ ವಿಚಾರಣೆಯಲ್ಲಿ, ವಿಚಾರಣಾ ನ್ಯಾಯಾಲಯವು ವರದಿಯನ್ನು ಪೂರ್ಣಗೊಳಿಸಲು 10 ದಿನಗಳ ಕಾಲಾವಕಾಶ ನೀಡಿತ್ತು. ಗಡುವು ಸೋಮವಾರ (ಡಿ.10) ಕೊನೆಗೊಂಡಿತು.
ಇದನ್ನೂ ಓದಿ…ಆಂಧ್ರ ಸಂಪುಟಕ್ಕೆ ಪವನ್ ಕಲ್ಯಾಣ್ ಸಹೋದರ ನಾಗಬಾಬು ಸೇರ್ಪಡೆ; ಸಿಎಂ ನಾಯ್ಡು ಘೋಷಣೆ


