ನಿವಾಸಿಗಳು ಅಥವಾ ಅವರ ಕುಟುಂಬದ ಸದಸ್ಯರು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ)ಯ ಭಾಗವಾಗಲು ಅರ್ಜಿ ಸಲ್ಲಿಸದಿದ್ದರೆ ಅಸ್ಸಾಂ ಸರ್ಕಾರ ಅಂತವರ ಆಧಾರ್ ಕಾರ್ಡ್‌ಗಾಗಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟದ ಸಭೆಯ ನಂತರ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎನ್‌ಆರ್‌ಸಿಗೆ ಅರ್ಜಿ
“ಕಳೆದ ಎರಡು ತಿಂಗಳಲ್ಲಿ ಅಸ್ಸಾಂ ಪೋಲೀಸ್, ತ್ರಿಪುರಾ ಪೋಲೀಸ್ ಮತ್ತು ಬಿಎಸ್ಎಫ್ [ಗಡಿ ಭದ್ರತಾ ಪಡೆ] ಹಲವಾರು ನುಸುಳುಕೋರರನ್ನು ಬಂಧಿಸಿದ್ದಾರೆ. ಅದಕ್ಕಾಗಿಯೇ ಬಾಂಗ್ಲಾದೇಶದಿಂದ ಒಳನುಸುಳುವಿಕೆ ಬಗ್ಗೆ ನಮಗೆ ಕಳವಳವಿದೆ” ಎಂದು ಸಿಎಂ ಶರ್ಮಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿಯು ಅಸ್ಸಾಂನಲ್ಲಿ ಬಂಗಾಳಿ ಮುಸ್ಲಿಂ ಸಮುದಾಯವನ್ನು ಸ್ಥಳೀಯ ಜನರ ಸಂಪನ್ಮೂಲಗಳು, ಉದ್ಯೋಗಗಳು ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ “ನುಸುಳುಕೋರರು” ಎಂದು ಆಗಾಗ್ಗೆ ಹಣೆಪಟ್ಟಿ ಕಟ್ಟುತ್ತಿದೆ. ಜೊತೆಗೆ ಈ ಸಮುದಾಯವು ಅಸ್ಸಾಮಿ ಸಂಸ್ಕೃತಿ ಮತ್ತು ಗುರುತಿಗೆ ಬೆದರಿಕೆಯನ್ನುಂಟುಮಾಡುತ್ತದೆ ಎಂದು ಪಕ್ಷವೂ ಚಿತ್ರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ನಮ್ಮ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದ್ದು, ಅದಕ್ಕಾಗಿಯೇ ನಾವು ಆಧಾರ್ ಕಾರ್ಡ್ ಕಾರ್ಯವಿಧಾನವನ್ನು ಕಠಿಣಗೊಳಿಸಲು ನಿರ್ಧರಿಸಿದ್ದೇವೆ” ಎಂದು ಹಿಮಂತ ಶರ್ಮಾ ಹೇಳಿದ್ದಾರೆ. ಆಧಾರ್ ಒಂದು ವಿಶಿಷ್ಟವಾದ 12 ಅಂಕಿಯ ಸಂಖ್ಯೆಯ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಶಾಸನಬದ್ಧ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಭಾರತದ ನಿವಾಸಿಗಳಿಗೆ ನೀಡಲಾಗುತ್ತದೆ.
ರಾಜ್ಯದಲ್ಲಿ ವಾಸಿಸುವ ದಾಖಲೆರಹಿತ ವಲಸಿಗರಿಂದ ಭಾರತೀಯ ನಾಗರಿಕರನ್ನು ಪ್ರತ್ಯೇಕಿಸುವ ಉದ್ದೇಶದಿಂದ ಅಸ್ಸಾಂ ಆಗಸ್ಟ್ 31, 2019 ರಂದು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ)ಯನ್ನು ಪ್ರಕಟಿಸಿತ್ತು. ಅದರಂತೆ ನಿವಾಸಿಗಳು ತಾವು ಅಥವಾ ಅವರ ಪೂರ್ವಜರು ಅಸ್ಸಾಂ ಅನ್ನು ಮಾರ್ಚ್ 24, 1971 ರ ಮಧ್ಯರಾತ್ರಿಯ ಮೊದಲು ಪ್ರವೇಶಿಸಿದ್ದಾರೆ ಎಂದು ಸಾಬೀತುಪಡಿಸಬೇಕಾಗುತ್ತದೆ.
ಅದಾಗ್ಯೂ, ರಾಜ್ಯದಾದ್ಯಂತ 19 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಅಥವಾ 5.77% ಅರ್ಜಿದಾರರು ಎನ್‌ಆರ್‌ಸಿಯ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ. ಎನ್‌ಆರ್‌ಸಿಗೆ ಇನ್ನಷ್ಟೆ ಸೂಚನೆ ನೀಡಬೇಕಿದೆ.
ಸೆಪ್ಟೆಂಬರ್ 7 ರಂದು, ಅಸ್ಸಾಂನಲ್ಲಿ ಆಧಾರ್ ಸಂಖ್ಯೆಗಳನ್ನು ನೀಡುವ ಪ್ರಕ್ರಿಯೆಯನ್ನು “ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು” ಎಂದು ಹಿಮಂತ ಶರ್ಮಾ ಘೋಷಿಸಿದ್ದಾರೆ. ಅರ್ಜಿದಾರರು 2015 ರಲ್ಲಿ ಅರ್ಜಿ ಸಲ್ಲಿಸುವಾಗ ಅವರಿಗೆ ಒದಗಿಸಲಾದ ತಮ್ಮ ಎನ್‌ಆರ್‌ಸಿ ಅರ್ಜಿ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.
“ಎನ್‌ಆರ್‌ಸಿ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಮಾತ್ರ ಆಧಾರ್ ಅನ್ನು ಪಡೆದುಕೊಳ್ಳಬಹುದು. ಈ ನೀತಿಯಿಂದ ಅಸ್ಸಾಂನಲ್ಲಿ ಯಾವುದೇ ಶಂಕಿತ ವಿದೇಶಿಯರು ಆಧಾರ್ ಕಾರ್ಡ್‌ಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಖಚಿತಪಡಿಸುತ್ತದೆ. ಜೊತೆಗೆ ಇದು ಅಕ್ರಮ ವಿದೇಶಿಯರ ಒಳನುಸುಳುವಿಕೆಯವನ್ನು ತಡೆಯುತ್ತದೆ.” ಎಂದು ಅವರು ಹೇಳಿದ್ದಾರೆ.
In today's meeting of the #AssamCabinet, we took key decisions
✅️Stricter guidelines for issuance of Aadhar to ensure infiltrators do not secure them
✅️ This will be a new deterrence against illegal infiltration
✅️Waiver of renewal fee for institutions under MB 3.0 pic.twitter.com/wgc6Qq8TmQ
— Himanta Biswa Sarma (@himantabiswa) December 11, 2024
ಆಧಾರ್ ನೀಡಲು ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ನೋಡಲ್ ಏಜೆನ್ಸಿಯಾಗಲಿದೆ ಎಂದು ಮುಖ್ಯಮಂತ್ರಿ ಬುಧವಾರ ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ವೃತ್ತ ಮಟ್ಟದಲ್ಲಿ ವೃತ್ತ ಅಧಿಕಾರಿಗಳು ಇದನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾರ್ಯವಿಧಾನದ ಪ್ರಕಾರ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್‌ಗಾಗಿ ಹೊಸ ಅರ್ಜಿಯನ್ನು ಪರಿಶೀಲನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತದೆ ಎಂದು ಹಿಮಂತಾ ಶರ್ಮಾ ಹೇಳಿದ್ದಾರೆ. ಇದರ ನಂತರ, ಅರ್ಜಿದಾರರು ಅಥವಾ ಅವರ ಕುಟುಂಬವು ಎನ್‌ಆರ್‌ಸಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದರೆ ಸರ್ಕಲ್ ಅಧಿಕಾರಿ ಅದನ್ನು ಪರಿಶೀಲಿಸುತ್ತಾರೆ.
“ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಂಡುಬಂದರೆ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸರ್ಕಲ್ ಆಫೀಸರ್ ಕ್ಷೇತ್ರ ಮಟ್ಟದ ಪರಿಶೀಲನೆಗೆ ಹೋಗುತ್ತಾರೆ. ಅಧಿಕಾರಿಗೆ ಸಂಪೂರ್ಣವಾಗಿ ಮನವರಿಕೆಯಾದ ನಂತರ, ಆಧಾರ್ ಅನ್ನು ಅನುಮೋದಿಸಲಾಗುತ್ತದೆ.” ಎಂದು ಅವರು ಹೇಳಿದ್ದಾರೆ.
ಸಿಎಂ ಅವರ ಈ ಕ್ರಮವನ್ನು ಹೋರಾಟಗಾರರು ವಿರೋಧಿಸಿದ್ದು, ಗುರುತಿನ ದಾಖಲೆಗಾಗಿ ಅರ್ಹತಾ ಮಾನದಂಡಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ. ಅವರ ಈ ತೀರ್ಮಾನವು ಆಧಾರ್ ಕಾಯಿದೆ ಮತ್ತು ಆಧಾರ್ ಪರಿಕಲ್ಪನೆಯನ್ನು ತಿದ್ದುಪಡಿ ಮಾಡುತ್ತದೆ, ಇದು ದೊಡ್ಡ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನ ವಿರುದ್ಧದ ಅವಹೇಳನಕಾರಿ ಹೇಳಿಕೆ ಕಡತದಿಂದ ತೆಗೆದುಹಾಕಿ – ಸ್ಪೀಕರ್‌ಗೆ ರಾಹುಲ್ ಗಾಂಧಿ ಒತ್ತಾಯ


