2020ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬವನ್ನು ಗುರುವಾರ ಭೇಟಿಯಾಗಿದ್ದಾರೆ. ಬೆಳಗ್ಗೆ 11.15 ರ ಸುಮಾರಿಗೆ ಬೂಲ್ ಗರ್ಹಿ ಗ್ರಾಮವನ್ನು ತಲುಪಿದ ಅವರು, ಸಂತ್ರಸ್ತೆಯ ಮನೆಯಲ್ಲಿ ಅವರ ಕುಟುಂಬದೊಂದಿಗೆ ಸುಮಾರು 35 ನಿಮಿಷಗಳ ಕಾಲ ಕಳೆದು, ಅವರೊಂದಿಗೆ ಸಂವಾದ ನಡೆಸಿದ್ದಾರೆ. ಅದಾಗ್ಯೂ, ಅವರ ಭೇಟಿಗೆಂದು ಗ್ರಾಮದಲ್ಲಿ ನೆರೆದಿದ್ದ ಮಾಧ್ಯಮದ ಗುಂಪಿನೊಂದಿಗೆ ಮಾತನಾಡದೆ ಅವರು ನಿರ್ಗಮಿಸಿದ್ದಾರೆ. ಹತ್ರಾಸ್ ಅತ್ಯಾಚಾರ-ಕೊಲೆ
ರಾಹುಲ್ ಭೇಟಿಯ ಕಾರಣಕ್ಕೆ ಕುಗ್ರಾಮ ಮತ್ತು ಅದರ ಸುತ್ತಮುತ್ತ ಪೊಲೀಸ್ ನಿಯೋಜನೆಯನ್ನು ಹೆಚ್ಚಿಸಲಾಗಿತ್ತು. ರಾಹುಲ್ ಗಾಂಧಿ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹತ್ರಾಸ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಚಂದ್ರಗುಪ್ತ ವಿಕ್ರಮಾದಿತ್ಯ, “ರಾಹುಲ್ ಗಾಂಧಿ ಅವರಿಗೆ ಈ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಯಾವಾಗಲೂ ಅವರನ್ನು ಬೆಂಬಲಿಸುತ್ತಿದ್ದು, ಅದನ್ನು ಮುಂದುವರಿಸುತ್ತಾರೆ. ಅವರು ಇಂದು ಅವರ ಸಮಸ್ಯೆಗಳನ್ನು ಆಲಿಸಲು ಬಂದಿದ್ದು, ಅವರು ಸಮಸ್ಯೆಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು, ರಾಹುಲ್ ಗಾಂಧಿ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲು ಹಿಂಸಾಚಾರ ಪೀಡಿತ ಸಂಭಾಲ್ ಜಿಲ್ಲೆಗೆ ಹೋಗಲು ಪ್ರಯತ್ನಿಸಿದ್ದರು. ಆದರೆ, ಡಿಸೆಂಬರ್ 10 ರವರೆಗೆ ಸಾರ್ವಜನಿಕ ಪ್ರತಿನಿಧಿಗಳು ಸೇರಿದಂತೆ ಹೊರಗಿನವರ ಪ್ರವೇಶವನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರಿಂದ ಸ್ಥಳೀಯ ಅಧಿಕಾರಿಗಳು ಅವರನ್ನು ತಡೆದಿದ್ದರು. ಹತ್ರಾಸ್ ಅತ್ಯಾಚಾರ-ಕೊಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದಕ್ಕೂ ಮುನ್ನ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ತಂದೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಕಾಂಗ್ರೆಸ್ ಗುರುವಾರ ಹಂಚಿಕೊಂಡಿದೆ. ಅದರ ನಂತರ ರಾಹುಲ್ ಗಾಂಧಿ ಕುಟುಂಬವನ್ನು ಭೇಟಿ ಮಾಡಿದ್ದಾರೆ.
“ಹತ್ರಾಸ್‌ನ ಸಂತ್ರಸ್ತ ಕುಟುಂಬವು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ. ಈ ಪತ್ರದ ನಂತರ, ರಾಹುಲ್ ಗಾಂಧಿ ಇಂದು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಬಂದಿದ್ದಾರೆ” ಎಂದು ಪಕ್ಷವು ಪತ್ರವನ್ನು ಹಂಚಿಕೊಂಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ನೇರವಾಗಿ ಉದ್ದೇಶಿಸಿ ಬರೆದಿದ್ದ ಪತ್ರದಲ್ಲಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ಭರವಸೆಗಳನ್ನು ನಿಜವಾಗಿಯು ಈಡೇರಿಸಲು ಮತ್ತು ಸೆಪ್ಟೆಂಬರ್ 14, 2020 ರಂದು ನಡೆದ ಘಟನೆಗೆ ನ್ಯಾಯವನ್ನು ಪಡೆಯಲು ಕುಟುಂಬವು ಇನ್ನೂ ಹೇಗೆ ಕಾಯುತ್ತಿದೆ ಎಂಬುದನ್ನು ವ್ಯಕ್ತಪಡಿಸಲಾಗಿತ್ತು.
ರಾಜ್ಯದ ಅಧಿಕಾರಿಗಳು ಮತ್ತು ನ್ಯಾಯಾಲಯವು ಈ ವಿಷಯವನ್ನು ನಿಭಾಯಿಸುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಸಂಸತ್ರಸ್ತೆಯ ತಂದೆ ಓಂಪ್ರಕಾಶ್, ಯುಪಿ ಆಡಳಿತವು ಕುಟುಂಬದ ಅನುಮತಿಯಿಲ್ಲದೆ ಸಂತ್ರಸ್ತೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಿದೆ ಎಂದು ಹೇಳಿದ್ದಾರೆ.
‘‘ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬೆನ್ನುಮೂಳೆ ಮುರಿದು ದೇಹವನ್ನು ಛಿದ್ರಗೊಳಿಸಲಾಗಿತ್ತು. ಬಳಿಕ ನನ್ನ ಮನೆಯವರ ಅನುಮತಿಯಿಲ್ಲದೆ ರಾತ್ರಿಯ ಕತ್ತಲಲ್ಲಿ ಆಡಳಿತವು ನನ್ನ ಮಗಳನ್ನು ಕೊಲೆ ಮಾಡಿದ್ದಾರೆ. ಮಧ್ಯಾಹ್ನ 2.30ಕ್ಕೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾರೆ. ಯಾರ ದೇಹವನ್ನು ಸುಟ್ಟು ಹಾಕಲಾಗಿದೆ ಎಂಬುದು ನನಗೆ ಮತ್ತು ನನ್ನ ಕುಟುಂಬಕ್ಕೆ ಇಂದಿಗೂ ತಿಳಿದಿಲ್ಲ,” ಎಂದು ಪತ್ರವು ಹೇಳಿತ್ತು.
“ಗೌರವಾನ್ವಿತ ರಾಹುಲ್ ಗಾಂಧಿ ಅವರೆ, ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನನ್ನ ಕುಟುಂಬದ ಒಬ್ಬರಿಗೆ ಉದ್ಯೋಗ ಮತ್ತು ಮನೆಯನ್ನು ನೀಡುವುದಾಗಿ ನನ್ನ ಕುಟುಂಬಕ್ಕೆ ಲಿಖಿತ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಉದ್ಯೋಗವನ್ನಾಗಲಿ ಅಥವಾ ಮನೆಯನ್ನಾಗಲಿ ನೀಡಿಲ್ಲ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ’’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಸಿಆರ್‌ಪಿಎಫ್ ಭದ್ರತೆಯಲ್ಲಿ ಜೈಲುವಾಸ’
ಸಂತ್ರಸ್ತೆಯ ಕುಟುಂಬವು ಸಿಆರ್‌ಪಿಎಫ್ ಒದಗಿಸಿದ ಭದ್ರತೆಯ ಅಡಿಯಲ್ಲಿ “ಜೈಲುವಾಸ” ಅನುಭವಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. “ಜೊತೆಗೆ ಉದ್ಯೋಗವಿಲ್ಲ ಮತ್ತು ಯಾರೂ ಉದ್ಯೋಗಕ್ಕಾಗಿ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜಾಮೀನು ಪಡೆದಿರುವ ಆರೋಪಿಗಳು ಮುಕ್ತವಾಗಿ ತಿರುಗಾಡುತ್ತಿದ್ದು, ನಾವು ಮನೆಯಲ್ಲಿಯೇ ಇದ್ದು ನಾಲ್ಕು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದೇವೆ’’ ಎಂದು ತಂದೆ ಪತ್ರದಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬೃಜೇಶ್ ಪಾಠಕ್, “ಈ ಪ್ರಕರಣದ ಬಗ್ಗೆ ಸಿಬಿಐ ಈಗಾಗಲೇ ವಿಚಾರಣೆ ನಡೆಸಿದೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಸಂಭಾಲ್ ಇರಲಿ ಅಥವಾ ಹತ್ರಾಸ್ ಆಗಿರಲಿ, ಅವರು (ಗಾಂಧಿ) ಅವರನ್ನು ಪ್ರಚಾರದಲ್ಲಿರಲು ಭೇಟಿ ನೀಡುತ್ತಾರೆಯೇ ಹೊರತು ಬೇರೆ ಯಾವುದೇ ಕಾರಣಕ್ಕಾಗಿ ಅಲ್ಲ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 3, 2020 ರಂದು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದರು ಮತ್ತು ಮೃತರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹೋರಾಡುವುದಾಗಿ ಘೋಷಿಸಿದ್ದರು.
19 ವರ್ಷದ ಯುವತಿ ಮೇಲೆ ಸೆಪ್ಟೆಂಬರ್ 14, 2020 ರಂದು ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಈ ವೇಳೆ ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಅಲಿಘರ್‌ಗೆ ಮತ್ತು ನಂತರ ದೆಹಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಸೆಪ್ಟೆಂಬರ್ 29, 2020 ರಂದು ಸಾವನ್ನಪ್ಪಿದ್ದರು. ಅಕ್ಟೋಬರ್ 30 ರ ಮುಂಜಾನೆ ಅವರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ಅನುಮತಿಯಿಲ್ಲದೆ ನಡೆಸಲಾಗಿತ್ತು ಎಂದು ಅವರ ಕುಟುಂಬವು ಆರೋಪಿಸಿತ್ತು. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, “ಕುಟುಂಬದವರ ಇಚ್ಛೆಯಂತೆ” ಶವಸಂಸ್ಕಾರವನ್ನು ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಪ್ರಕರಣದ ಪ್ರಾಥಮಿಕ ತನಿಖೆಯ ನಂತರ, ಸಿಬಿಐ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ ಮತ್ತು ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಇದನ್ನೂ ಓದಿ: ‘ವೈಕಂ ಪ್ರಶಸ್ತಿ’ ಸ್ವೀಕರಿಸಿದ ದೇವನೂರ ಮಹಾದೇವ; ಕನ್ನಡದ ಸಾಹಿತಿಗೆ ಗೌರವ ಸೂಚಿಸಿದ ಪಿಣರಾಯಿ-ಸ್ಟಾಲಿನ್


