ಕೇರಳದ ದೇವಸ್ಥಾನ ಪ್ರವೇಶದ ‘ವೈಕಂ’ ಹೋರಾಟದ ನೆನಪಿಗೆ ತಮಿಳುನಾಡು ಸರ್ಕಾರ ಕೊಡಮಾಡುವ 2024ನೇ ಸಾಲಿನ ಚೊಚ್ಚಲ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಇಂದು ಸ್ವೀಕರಿಸಿದರು.
ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪೆರಿಯಾರ್ ಸ್ಮಾರಕ ಮತ್ತು ಗ್ರಂಥಾಲಯವನ್ನು’ ಉದ್ಘಾಟಿಸಿದ ಬಳಿಕ, ದೇವನೂರ ಮಹಾದೇವ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಿದರು.
ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ಕೇರಳದ ವೈಕಂನಲ್ಲಿ ನಡೆದಿದ್ದ ವೈಕಂ ಹೋರಾಟಕ್ಕೆ ಇದೀಗ ನೂರು ವರ್ಷ ತುಂಬಿದೆ. ಆದ್ದರಿಂದ, ಶತಮಾನ ಸಮಾರಂಭ ಮತ್ತು ಪೆರಿಯಾರ್ ಸ್ಮಾರಕ ಉದ್ಘಾಟನಾ ಕಾರ್ಯಕ್ರವನ್ನು ಕೇರಳದ ವೈಕಂದಲ್ಲಿ ತಮಿಳುನಾಡು ಸರ್ಕಾರದಿಂದ ಗುರುವಾರ ಹಮ್ಮಿಕೊಳ್ಳಲಾಗಿತ್ತು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಕೇರಳ ಸಿಎಂ ಪಿಣರಾಯ್ ವಿಜಯನ್ ಪಾಲ್ಗೊಂಡಿದ್ದರು. ಇದೇ ವೇದಿಕೆ ಕಾರ್ಯಕ್ರಮದಲ್ಲಿ ದೇವನೂರ ಮಹದೇವ ಅವರಿಗೆ ವೈಕಂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ದೇವನೂರ ಮಹಾದೇವ, ತಾವು ಬರೆದಿರುವ ʻಆರ್‌ಎಸ್‌ಎಸ್ ಆಳ ಅಗಲʼ ಪುಸ್ತಕದ ಕನ್ನಡ, ಇಂಗ್ಲಿಷ್ ಮತ್ತು ಮಲೆಯಾಳಂ ಅವತರಣಿಯನ್ನು ಕೇರಳ ಸಿಎಂ ವಿಜಯನ್ ಅವರಿಗೆ, ಕನ್ನಡ, ಇಂಗ್ಲಿಷ್, ತಮಿಳು ಅವತರಣಿಯನ್ನು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ನೀಡಿದರು.
“ತಂಥೈ ಪೆರಿಯಾರ್ ಅವರ ವಿಚಾರವಾದಿ ತತ್ವಗಳ ಅನುಯಾಯಿಯಾಗಿ, ಖ್ಯಾತ ಸಾಹಿತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಣಿವರಿಯದ ಪ್ರತಿಪಾದಕರಾದ ದೇವನೂರು ಮಹಾದೇವ ಅವರಿಗೆ ಚೊಚ್ಚಲ ‘ವೈಕಂ ಪ್ರಶಸ್ತಿ’ ಪ್ರದಾನ ಮಾಡಲು ನಾನು ಹೆಮ್ಮೆಪಡುತ್ತೇನೆ. ಅವರ ಕೃತಿಗಳು ಅಸಮಾನತೆಗಳನ್ನು ಎದುರಿಸಲು ಮತ್ತು ಸಮಾನ ಸಮಾಜವನ್ನು ಮುನ್ನಡೆಸಲು ಸಹಕಾರಿಯಾಗಿದೆ” ಎಂದು ಪ್ರಶಸ್ತಿ ಪ್ರದಾನದ ಬಳಿಕ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ವೈಕಮ್‌ನಲ್ಲಿ ಈ ಪ್ರಶಸ್ತಿಯನ್ನು ನೀಡುವುದು ಆಳವಾದ ಮಹತ್ವವನ್ನು ಹೊಂದಿದೆ. ಏಕೆಂದರೆ, ಇಲ್ಲಿಯೇ ಪೆರಿಯಾರ್ ಅಸ್ಪೃಶ್ಯತೆ ವಿರುದ್ಧ ಐತಿಹಾಸಿಕ ಚಳುವಳಿಯನ್ನು ಮುನ್ನಡೆಸಿದರು. ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಅನ್ವೇಷಣೆಯಲ್ಲಿ ದೇವನೂರು ಮಹಾದೇವ ಅವರ ಕಾರ್ಯವು ನಮಗೆ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಲಿ” ಎಂದು ಸ್ಟಾಲಿನ್ ಹೇಳಿದ್ದಾರೆ.
As a follower of Thanthai Periyar’s rationalist principles, I am proud to present the inaugural “Vaikom Award” to Devanur Mahadeva, a celebrated literary icon and tireless advocate for social justice. His works have been instrumental in confronting inequalities and advancing the… pic.twitter.com/S6cGd0EIQO
— M.K.Stalin (@mkstalin) December 12, 2024
ವೈಕಂ ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಸ್ವರ್ಣಲೇಪಿತ ಪದಕವನ್ನು ಒಳಗೊಂಡಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಗಣ್ಯ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ವೈಕಂ ಪ್ರಶಸ್ತಿ ನೀಡಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಇದನ್ನೂ ಓದಿ; ಗುಜರಾತ್‌ನಲ್ಲಿ ಲಾರಿ ಅಪಘಾತ; ಕೆಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಲಿಂಗೇಗೌಡ ಸೇರಿದಂತೆ ಇಬ್ಬರು ಸಾವು


